ADVERTISEMENT

ಮಗಳ ಮದುವೆಗೆ ಆಭರಣ ಖರೀದಿಸಿದ್ದ ಮಹಿಳೆಯನ್ನು ಕೊಂದು ಚಿನ್ನ, ನಗದು ದೋಚಿ ಪರಾರಿ

​ಪ್ರಜಾವಾಣಿ ವಾರ್ತೆ
Published 27 ಮೇ 2025, 0:25 IST
Last Updated 27 ಮೇ 2025, 0:25 IST
ಲತಾ 
ಲತಾ    

ಬೆಂಗಳೂರು: ಇಲ್ಲಿನ ಕಾಟನ್‌ರಸ್ತೆಯ ದರ್ಗಾ ರಸ್ತೆಯಲ್ಲಿ ಇರುವ ಮನೆಯೊಂದಕ್ಕೆ ಸೋಮವಾರ ಮಧ್ಯಾಹ್ನ ನುಗ್ಗಿದ ದರೋಡೆಕೋರರು, ಮಹಿಳೆಯನ್ನು ಕೊಲೆ ಮಾಡಿ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿ ಆಗಿದ್ದಾರೆ.

ಲತಾ (40) ಕೊಲೆಯಾದ ಮಹಿಳೆ.

‘ಲತಾ ಅವರ ಪತಿ ಪ್ರಕಾಶ್ ಅವರು ಹೋಲ್‌ಸೇಲ್ ಬಟ್ಟೆ ವ್ಯಾಪಾರ ಮಾಡುತ್ತಿದ್ದು ಅಂಗಡಿಗೆ ತೆರಳಿದ್ದರು. ಪುತ್ರಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದಾರೆ. ಪುತ್ರ ಶಾಲೆಗೆ ತೆರಳಿದ್ದ. ಮನೆಯಲ್ಲಿ ಲತಾ ಒಬ್ಬರೆ ಇದ್ದರು. ಆ ಸಂದರ್ಭದಲ್ಲಿ ಕಳ್ಳರು ಕೃತ್ಯ ಎಸಗಿದ್ದಾರೆ. ಕೊಲೆ ಮಾಡಿ 150 ಗ್ರಾಂ ಚಿನ್ನಾಭರಣ, ₹ 2 ಲಕ್ಷ ನಗದು ಹಾಗೂ ಒಂದು ಮೊಬೈಲ್‌ ಫೋನ್‌ ಕಳ್ಳತನ ಮಾಡಿದ್ದಾರೆ’  ಎಂದು ಪೊಲೀಸರು ಹೇಳಿದರು.

ADVERTISEMENT

ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ಹೇಳಿದರು.

ಪ್ರಕಾಶ್ ನೀಡಿದ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

ಬೀದರ್‌ನವರಾದ ಲತಾ ಮತ್ತು ಪ್ರಕಾಶ್ ಕುಟುಂಬ ಹಲವು ವರ್ಷಗಳಿಂದ ನಗರದಲ್ಲಿ ನೆಲೆಸಿತ್ತು. ವರ್ಷದ ಹಿಂದೆಯಷ್ಟೇ ದುರ್ಗಾ ರಸ್ತೆಯ ಬಾಡಿಗೆ ಮನೆಗೆ ಸ್ಥಳಾಂತರಗೊಂಡಿತ್ತು. ಮಗಳ ಮದುವೆಗಾಗಿ ಲತಾ ಕುಟುಂಬ ಸಿದ್ದತೆ ನಡೆಸಿತ್ತು. ಮದುವೆಗೆ ಬೇಕಾದ ಚಿನ್ನಾಭರಣವನ್ನು ಖರೀದಿಸಿ ಮನೆಯಲ್ಲಿ ಇಡಲಾಗಿತ್ತು ಎಂದು ಪೊಲೀಸರು ಹೇಳಿದರು. ಕಾಟನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.