ADVERTISEMENT

ಚಿನ್ನ ಅಕ್ರಮ ಸಾಗಣೆ: ಸೂಡಾನ್‌ ಮಹಿಳೆ ಬಂಧನ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2021, 19:45 IST
Last Updated 23 ಡಿಸೆಂಬರ್ 2021, 19:45 IST
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ   

ಬೆಂಗಳೂರು: ಗುದನಾಳದಲ್ಲಿ ಪೇಸ್ಟ್‌ ರೂಪದಲ್ಲಿ ಚಿನ್ನ ಅಡಗಿಸಿಟ್ಟುಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದ ಸೂಡಾನ್‌ ದೇಶದ ಮಹಿಳೆಯನ್ನು ಕಸ್ಟಮ್ಸ್‌ ಅಧಿಕಾರಿಗಳು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಬಂಧಿಸಿದ್ದಾರೆ.

ಬಂಧಿತ 38 ವರ್ಷದ ಮಹಿಳೆಯಿಂದ ₹26.11 ಲಕ್ಷ ಮೌಲ್ಯದ 535 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ.

‘ಆರೋಪಿತ ಮಹಿಳೆಯು ಶಾರ್ಜಾದಿಂದ ‘ಏರ್‌ ಅರೇಬಿಯಾ ಜಿ 9–498’ ವಿಮಾನದ ಮೂಲಕಮಂಗಳವಾರ ರಾತ್ರಿ 9.30ಕ್ಕೆ ನಗರಕ್ಕೆ ಬಂದಿದ್ದಳು. ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆಕೆಯನ್ನು ತಡೆದಿದ್ದ ಕಸ್ಟಮ್ಸ್‌ ಸಿಬ್ಬಂದಿ, ಪಾಸ್‌ಪೋರ್ಟ್‌ ಮತ್ತು ವೀಸಾ ಪರಿಶೀಲಿಸಿದ್ದರು. ಅನುಮಾನ ಮೂಡಿದ್ದರಿಂದ ಕಚೇರಿಗೆ ಕರೆದುಕೊಂಡು ಹೋಗಿ ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಿಂದ (ಯುಎಇ) ಬೆಂಗಳೂರಿಗೆ ಚಿನ್ನ ಕಳ್ಳಸಾಗಣೆ ಮಾಡಿದ್ದನ್ನು ಮಹಿಳೆ ಒಪ್ಪಿಕೊಂಡಿದ್ದಳು’ ಎಂದು ಕಸ್ಟಮ್ಸ್‌ ಇಲಾಖೆಯ ಮೂಲಗಳು ತಿಳಿಸಿವೆ.

ADVERTISEMENT

‘ಅಂತರರಾಷ್ಟ್ರೀಯ ಕಳ್ಳಸಾಗಣೆದಾರರ ಜೊತೆ ಮಹಿಳೆಯು ಒಡನಾಟ ಹೊಂದಿರುವ ಅನುಮಾನವಿದೆ. ಹೀಗಾಗಿ ಅಧಿಕಾರಿಗಳು ವಿಚಾರಣೆ ಮುಂದುವರಿಸಿದ್ದಾರೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.