ADVERTISEMENT

ದರೋಡೆಗೆ ಮಹಿಳೆಯೇ ಸೂತ್ರಧಾರಿ!

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2019, 20:00 IST
Last Updated 1 ಸೆಪ್ಟೆಂಬರ್ 2019, 20:00 IST
   

ಬೆಂಗಳೂರು: ಚೀಟಿ ನಡೆಸುವ ಜೊತೆಗೆ ದರೋಡೆಗೆ ಸಂಚು ರೂಪಿಸುತ್ತಿದ್ದ ಮಹಿಳೆ ಸೇರಿ 11 ಮಂದಿ ರಾಜ್ಯ ಮತ್ತು ಅಂತರರಾಜ್ಯ ದರೋಡೆಕೋರರನ್ನು ಬಂಧಿಸಿರುವ ಕೋಣನಕುಂಟೆ ಪೊಲೀಸರು, ಆರೋಪಿಗಳಿಂದ ಚಿನ್ನ, ಬೆಳ್ಳಿ ಮತ್ತು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಗಿರಿಜಮ್ಮ (47), ಡಿಚ್ಚಿ ರಾಜು ಅಲಿಯಾಸ್‌ ಸ್ಟಿಫನ್‌ ರಾಜು (51), ರಘುವರನ್‌ ಅಲಿಯಾಸ್‌ ರಘು (30), ಸುರೇಶ್‌ (36), ಲಿಂಗಾರಾಜು (34), ಸ್ಟಿಫನ್‌ ರಾಜ್‌ ಅಲಿಯಾಸ್‌ ಸ್ಟಿಫನ್‌ (25), ಮಣಿಕಂಠನ್ ಅಲಿಯಾಸ್‌ ಮಣಿ (25), ಸತೀಶ್‌ (20), ರಾಜೇಶ್‌ (21),
ಅಬ್ದುಲ್‌ ಸಮದ್‌ (29), ಸತೀಶ್‌ ಕುಮಾರ್‌ ಅಲಿಯಾಸ್‌ ಅಪ್ಪು(24) ಬಂಧಿತರು.‌

ಬಂಧಿತರಿಂದ ಚಿನ್ನಾಭರಣ, ಬೆಳ್ಳಿ ವಸ್ತುಗಳು, ಒಂದು ಆಟೊ ರಿಕ್ಷಾ, ಎರಡು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿಚಾರಣೆಯಿಂದ ಕೋಣನಕುಂಟೆ, ಕಾಡುಗೋಡಿ ಮತ್ತು ಮಲ್ಲೇಶ್ವರ ಠಾಣಾ ವ್ಯಾಪ್ತಿಯಲ್ಲಿ ನಡೆದ ತಲಾ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಕೋಣನಕುಂಟೆ ಠಾಣಾ ವ್ಯಾಪ್ತಿಯ ಓಲ್ಡ್‌ ಬ್ಯಾಂಕ್‌ ರಸ್ತೆಯ ಚುಂಚಘಟ್ಟ ಮುಖ್ಯ ರಸ್ತೆಯ ಎರಡನೇ ಕ್ರಾಸ್‌ನಲ್ಲಿ ಪ್ರಭಾವತಿ ಮತ್ತು ನರಸಮ್ಮ ಎಂಬ ಇಬ್ಬರೇ ಮಹಿಳೆಯರು ವಾಸವಿದ್ದ ಮನೆಗೆ ಮೂವರು ದರೋಡೆಕೋರರು ನುಗ್ಗಿ, ಬೆದರಿಸಿ ಅವರ ಬಳಿ ಇದ್ದ 298 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಪ್ರಭಾವತಿ ಆ. 22ರಂದು ಠಾಣೆಗೆ ದೂರು ನೀಡಿದ್ದರು. ಇದೇ ರೀತಿಯ ಹಲವು ಪ್ರಕರಣಗಳು ನಡೆದ ಹಿನ್ನೆಲೆಯಲ್ಲಿ ಡಿಸಿಪಿ ರೋಹಿಣಿ ಕಟೋಚ್‌ ಸೆಫೆಟ್‌ ಅವರು ಎಸಿಪಿ ಪಿ. ಮಹದೇವ್‌ ಅವರ ಉಸ್ತುವಾರಿಯಲ್ಲಿ ಕೋಣನಕುಂಟೆ ಠಾಣೆಯ ಇನ್‌ಸ್ಪೆಕ್ಟರ್‌ ಟಿ.ಎಂ. ಧರ್ಮೇಂದ್ರ, ಸಬ್‌ ಇನ್‌ಸ್ಪೆಕ್ಟರ್‌ಶ್ರೀನಿವಾಸಪ್ರಸಾದ್‌ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು.

ADVERTISEMENT

ಮೊಬೈಲ್‌ ನೆಟ್‌ವರ್ಕ್‌ ಸುಳಿವು ಆಧರಿಸಿ ಗಿರಿಜಮ್ಮ ಎಂಬ ಮಹಿಳೆಯನ್ನು ವಿಶೇಷ ತಂಡವು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಡೀ ಪ್ರಕರಣ ಬಯಲಾಗಿದೆ.

ತಮಿಳುನಾಡಿನಿಂದ ದರೋಡೆಕೋರರನ್ನು ಕರೆಸಿಕೊಂಡು ಕೃತ್ಯ ಎಸಗುತ್ತಿದ್ದುದನ್ನು ವಿಚಾರಣೆ ವೇಳೆ ಮಹಿಳೆ ಒಪ್ಪಿಕೊಂಡಿದ್ದಾರೆ. ಆಕೆಯ ತೀವ್ರ ವಿಚಾರಣೆಯ ಬಳಿಕ ಇತರ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದರು.

ಗಿರಿಜಮ್ಮಳಿಂದ ಸಂಚು!

‘ಚೀಟಿ ನಡೆಸುತ್ತಿದ್ದ ಗಿರಿಜಮ್ಮ, ತನ್ನ ಮನೆಯ ಪಕ್ಕದಲ್ಲಿ ನೆಲೆಸಿದ್ದತಾಯಿ ಮತ್ತು ಮಗಳ ಬಳಿ ಇದ್ದ ಚಿನ್ನಾಭರಣದ ಮೇಲೆ ಕಣ್ಣು ಹಾಕಿದ್ದಳು. ತನ್ನ ಬಳಿ ಚೀಟಿ ಹಾಕುತ್ತಿದ್ದ, ಹಲವು ಕಳವು ಪ್ರಕರಣಗಳ ಆರೋಪಿ ಡಿಚ್ಚಿ ರಾಜನ ನೆರವಿನಿಂದ ಇತರ ದರೋಡೆಕೋರರನ್ನು ಸೇರಿಸಿಕೊಂಡುಪಕ್ಕದ ಮನೆಯಲ್ಲಿ ಗಿರಿಜಮ್ಮ ದರೋಡೆ ಮಾಡಿಸಿದ್ದಳು. ಅಲ್ಲದೆ, ಇದೇ ದರೋಡೆಕೋರರನ್ನು ಬಳಸಿಕೊಂಡು ಮಲ್ಲೇಶ್ವರದಲ್ಲಿರುವ ತನ್ನಸ್ವಂತ ಅಕ್ಕನ ಮನೆಯಿಂದಲೇ ಆಕೆ ಚಿನ್ನಾಭರಣಗಳನ್ನು ದೋಚಿದ್ದಳು’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.