ADVERTISEMENT

ಮಹಿಳಾ ಆಯೋಗಕ್ಕೆ ಮತ್ತಷ್ಟು ಬಲ: ಸಿಎಂ ಬೊಮ್ಮಾಯಿ ಭರವಸೆ

ರಾಜ್ಯ ಮಹಿಳಾ ಆಯೋಗದ ರಜತ ಮಹೋತ್ಸವ ಸಮಾರಂಭ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 1:31 IST
Last Updated 27 ನವೆಂಬರ್ 2022, 1:31 IST
ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಹಿಳಾ ಆಯೋಗದ ರಜತ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದ ಮಹಿಳೆಯರು.
ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಹಿಳಾ ಆಯೋಗದ ರಜತ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದ ಮಹಿಳೆಯರು.   

ಬೆಂಗಳೂರು: ಮಹಿಳಾ ಆಯೋಗವನ್ನು ಬಲಿಷ್ಠಗೊಳಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು. ದೂರು ನೀಡಿದ ಎಂಟು ತಾಸುಗಳ ಒಳಗೆ ಪ್ರಕ ರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸುವಂತೆ ಪೊಲೀಸ್‌ ಮಹಾ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಹಿಳಾ ಆಯೋಗದ ರಜತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸ್ತ್ರೀ ದೌರ್ಜನ್ಯಕ್ಕೆ ಕಠಿಣ ಶಿಕ್ಷೆ ಅಗತ್ಯ. ಈಗಿರುವ ಕಾನೂನುಗಳು ಬಲಿಷ್ಠವಾಗಿದ್ದರೂ, ದೌರ್ಜನ್ಯ ತಡೆ ಸಂಪೂರ್ಣ ಸಾಧ್ಯವಾಗಿಲ್ಲ. ಕಾನೂನಿನ ಜತೆಗೆ, ಪುರುಷರ ಮನಸ್ಸುಗಳ ಪರಿವರ್ತನೆಯೂ ಅಗತ್ಯ. ನಿರ್ಭಯ ಯೋಜನೆಯಡಿ ಜಾರಿ ಮಾಡಿರುವ ಕಾನೂನಿನ ಕುರಿತು ಪುರುಷರಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಅನ್ಯಾಯ ಆಗುವ ಮೂಲದಿಂದಲೇ ಅರಿವು ಮೂಡಿಸುವ ಕೆಲಸ ಆಗಬೇಕು ಎಂದರು.

ADVERTISEMENT

ಮಹಿಳೆಯರ ರಕ್ಷಣೆಗೆ ಸೂಕ್ಷ್ಮ ಪ್ರದೇಶಗಳಲ್ಲಿ ಏಳೂವರೆ ಸಾವಿರ ಕೃತಕ ಬುದ್ಧಿಮತ್ತೆಯ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುತ್ತಿದೆ.ರಾತ್ರಿ ಕೆಲಸ ಮುಗಿಸಿ ಬರುವ ಮಹಿಳೆಯರಿಗೆ ಇದು ಸುರಕ್ಷತೆ ಒದಗಿಸುತ್ತದೆ ಎಂದರು.

ಸಮಾಜದಲ್ಲಿ ಮೌಲ್ಯಗಳ ಪರಿವರ್ತನೆಯ ಅಗತ್ಯವಿದೆ. ಮಹಿಳೆಯರಿಗೆ ಸಿಗುತ್ತಿದ್ದ ಗೌರವ ಪುನಃ ಸ್ಥಾಪನೆಯಾದರೆ ಸಮಾನತೆ ಅವಕಾಶಗಳು ಸಹಜವಾಗಿ ತೆರೆದುಕೊಳ್ಳುತ್ತವೆ. ಈ ಕೆಲಸವನ್ನು ಆಯೋಗ ಮಾಡಬೇಕು ಎಂದರು.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಶಿಕ್ಷಣ, ಆರ್ಥಿಕ ಸಬಲತೆಯಿಂದ ದೇಶದ ಮಹಿಳೆಯರು ಬಲಗೊಳ್ಳುವರು ಎನ್ನುವ ನಂಬಿಕೆ ಇತ್ತು. ಇಂದು ಬಹುತೇಕ ಮಹಿಳೆಯರು ಶಿಕ್ಷಣ, ಆರ್ಥಿಕ ಸಬಲತೆ ಸಾಧಿಸಿದರೂ ದೌರ್ಜನ್ಯಗಳಿಂದ ಮುಕ್ತವಾಗಿಲ್ಲ. ತಮ್ಮನ್ನು ರಕ್ಷಣೆ ಮಾಡಿಕೊಳ್ಳುವಷ್ಟು ವಾತಾವರಣವಿಲ್ಲ.ಐಎಎಸ್‌ ಅಧಿಕಾರಿಗಳೂ, ಮಹಿಳಾ ಪೊಲೀಸರೂ ಕಿರುಕುಳ ಅನುಭವಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್, ಶಾಸಕಿ ರೂಪಾಲಿ ನಾಯಕ್, ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ‌ ಶರ್ಮಾ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮಂಜುಳಾ ಅವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.