‘ದಿಟ್ಟ ಮಹಿಳಾ ಪ್ರಶಸ್ತಿ’ ಸ್ವೀಕರಿಸಿದ ನಟಿಯರಾದ ಅಂಬಿಕಾ, ಸರಿತಾ, ಭಾರತಿ ವಿಷ್ಣುವರ್ಧನ್, ಜಯಮಾಲಾ, ಗೀತಾ, ನಿರ್ಮಾಪಕಿಯರಾದ ಪೂರ್ಣಿಮಾ ರಾಮ್‌ಕುಮಾರ್, ಲಕ್ಷ್ಮೀ ಗೋವಿಂದರಾಜು
ಪ್ರಜಾವಾಣಿ ಚಿತ್ರ / ಕಿಶೋರ್ ಕುಮಾರ್ ಬೋಳಾರ್
ಬೆಂಗಳೂರು: ‘ಮಹಿಳೆ ಸ್ವಾಭಿಮಾನಿಯಾಗಿ ಬದುಕುತ್ತಾಳೆ. ಒಂದು ಹೆಣ್ಣಿನ ಹಿಂದೆ ಪುರಷರ ಸಹಕಾರ ಇರಬೇಕು. ಈ ನಿಟ್ಟಿನಲ್ಲಿ ವರನಟ ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ಅವರನ್ನು ಮರೆಯುವಂತಿಲ್ಲ’ ಎಂದು ನಟಿ ಸರಿತಾ ಹೇಳಿದರು.
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸೋಮವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ‘ದಿಟ್ಟ ಮಹಿಳಾ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.
‘ಐಎಎಸ್, ಐಪಿಎಸ್‌ನಂತಹ ಉನ್ನತ ಹುದ್ದೆಗಳಲ್ಲಿ ಇಂದು ಮಹಿಳೆ ಪ್ರತಿದಿನ ಸಾಧನೆ ಮಾಡುತ್ತಿದ್ದಾಳೆ. ನನಗೂ ಉನ್ನತ ವ್ಯಾಸಂಗ ಮಾಡಬೇಕೆಂಬ ಹಂಬಲವಿತ್ತು. ಅದು ಸಾಧ್ಯವಾಗದೆ, ನಟಿಯಾದೆ’ ಎಂದರು.
ನಟಿ ಭಾರತಿ ವಿಷ್ಣುವರ್ಧನ್ ಮಾತನಾಡಿ, ‘ಮಹಿಳೆಯರಿಗೆ ದಿಟ್ಟತನ ಇರಬೇಕು, ಆಸೆಗಳ ಹಿಂದೆ ಹೋಗಬಾರದು. ಇರುವುದರಲ್ಲಿ ತೃಪ್ತಿಪಟ್ಟುಕೊಂಡು ಜೀವನ ಸಾಗಿಸಬೇಕು’ ಎಂದು ಅಭಿಪ್ರಾಯಪಟ್ಟರು.
‘20 ವರ್ಷಗಳ ನಂತರ ಕನ್ನಡ ನಟಿಯರು, ನಿರ್ಮಾಪಕಿಯರನ್ನು ಒಂದೇ ವೇದಿಕೆಯಲ್ಲಿ ನೋಡುವ ಸೌಭಾಗ್ಯ ನನ್ನದಾಗಿದೆ. ಕನ್ನಡ ನಾಡಿನ ಜನರನ್ನು ನೋಡಿ ನನಗೆ ಬಹಳ ಸಂತೋಷವಾಯಿತು’ ನಟಿ ಗೀತಾ ಹೇಳಿದರು.
ನಟಿ ಜಯಮಾಲಾ ಮಾತನಾಡಿ, ‘ಬೆಳಿಗ್ಗೆ ಎದ್ದು ನಗರ ಸ್ವಚ್ಛ ಮಾಡುವ ಪೌರ ಕಾರ್ಮಿಕ ಮಹಿಳೆಯರು ಇನ್ನೊಬ್ಬರ ಬದುಕು ಹಸನು ಮಾಡುವ ಸ್ವಚ್ಛತಾ ವಾರಿಯರ್ಸ್. ಕನ್ನಡ ಚಲನಚಿತ್ರ ರಂಗದ ದಿಟ್ಟ ಮಹಿಳೆ ಪಾರ್ವತಮ್ಮ ರಾಜ್‌ಕುಮಾರ್ ಅವರು, ಅನೇಕ ಕಲಾವಿದರಿಗೆ ಅವಕಾಶ ನೀಡಿದ್ದರು’ ಎಂದರು.
ನಟಿ ಅಂಬಿಕಾ ಮಾತನಾಡಿ, ‘ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆಗೆ ಸಹಕಾರ, ಬೆಂಬಲ ನೀಡಬೇಕು. ಮಹಿಳೆ ಎಂದರೆ ಶಕ್ತಿ ಸ್ವರೂಪಿಣಿ’ ಎಂದು ಹೇಳಿದರು.
ನಿರ್ಮಾಪಕಿಯರಾದ ಲಕ್ಷ್ಮೀ ಗೋವಿಂದರಾಜು, ಪೂರ್ಣಿಮಾ ರಾಮ್‌ಕುಮಾರ್, ಸಹಾಯಕ ಪೊಲೀಸ್ ಕಮಿಷನರ್ ಗೀತಾ, ದೂರದರ್ಶನದ ಮುಖ್ಯಸ್ಥೆ ಆರತಿ ಎಚ್.ಎನ್, ಪೊಲೀಸ್ ಇನ್‌ಸ್ಪೆಕ್ಟರ್ ಪ್ರಶೀಲ, ಬೆಂಗಳೂರು ನಗರ ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷೆ ಸೌಮ್ಯ, ವಕೀಲೆ ಶ್ರುತಿ, ಪತ್ರಕರ್ತೆಯರಾದ ಮಧು ನಾಗರಾಜ್, ಕಾವಶ್ರೀ ರಾಘವಸೂರ್ಯ, ಪ್ರಗತಿ, ರ‍್ಯಾಪಿಡ್ ರಶ್ಮಿ, ಡಾ.ಪೂರ್ವಿ ಜಯರಾಜ್ ಅವರಿಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ. ಅಮೃತ್‌ರಾಜ್, ನಟಿ ವಿನಯಪ್ರಸಾದ್ ಉಪಸ್ಥಿತರಿದ್ದರು. ಹಿನ್ನೆಲೆ ಗಾಯಕಿ ಅನುರಾಧ ಭಟ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.