ADVERTISEMENT

ಬೆಂಗಳೂರು: ಮನೆ ಕಟ್ಟಿಸಿಕೊಡಲು ಮಹಿಳೆಯರ ಮನವಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2023, 14:19 IST
Last Updated 8 ಸೆಪ್ಟೆಂಬರ್ 2023, 14:19 IST
ಹೆಬ್ಬಾಳದ ಕುಂತಿ ನಗರದಲ್ಲಿ ಶುಕ್ರವಾರ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅಧಿಕಾರಿಗಳ ಜತೆ ಭೇಟಿ ನೀಡಿದಾಗ ಸ್ಥಳೀಯರು ಮನೆ ಬೇಗ ಕಟ್ಟಿಕೊಡಲು ಮನವಿ ಮಾಡಿದರು
ಹೆಬ್ಬಾಳದ ಕುಂತಿ ನಗರದಲ್ಲಿ ಶುಕ್ರವಾರ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅಧಿಕಾರಿಗಳ ಜತೆ ಭೇಟಿ ನೀಡಿದಾಗ ಸ್ಥಳೀಯರು ಮನೆ ಬೇಗ ಕಟ್ಟಿಕೊಡಲು ಮನವಿ ಮಾಡಿದರು   

ಬೆಂಗಳೂರು: ‘ಶೆಡ್‌ಗಳಲ್ಲಿ ಇಲಿ -ಹೆಗ್ಗಣ ಕಾಟದಿಂದ ರಾತ್ರಿಯೆಲ್ಲ ಜಾಗರಣೆ ಮಾಡುವಂತಾಗಿದೆ. ನಮಗೆಲ್ಲ ಮನೆ ಕೊಡಿ’ ಎಂದು ಮಹಿಳೆಯರು ವಸತಿ ಸಚಿವ ಹಾಗೂ ಅಧಿಕಾರಿಗಳಿಗೆ ಕೈಮುಗಿದ ಮನವಿ ಮಾಡಿದರು.

ಹೆಬ್ಬಾಳದ ಕುಂತಿ ನಗರದಲ್ಲಿ ಶುಕ್ರವಾರ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅಧಿಕಾರಿಗಳ ಜತೆ ಭೇಟಿ ನೀಡಿದಾಗ, ‘ಎರಡು ವರ್ಷಗಳಿಂದ ಮನೆಗಳು ಪೂರ್ಣಗೊಂಡಿಲ್ಲ. ಕೂಡಲೇ ಕ್ರಮಕೈಗೊಳ್ಳಬೇಕು’ ಎಂದರು.

ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ರೂಪಿಸಿರುವ ಪ್ರಧಾನ ಮಂತ್ರಿ ಅವಾಸ್ ವಸತಿ ಯೋಜನೆ ಎರಡು ವರ್ಷ ಆದರೂ ಪೂರ್ಣಗೊಂಡಿಲ್ಲ. ಕೂಲಿ ಮಾಡಿ ಜೀವನ ಮಾಡುತ್ತಿದ್ದೇವೆ. ಫಲಾನುಭವಿ ವಂತಿಗೆ ಮೂರೂವರೆಯಿಂದ ನಾಲ್ಕು ಲಕ್ಷದವರೆಗೆ ಪಾವತಿ ಮಾಡಲು ಆಗುತ್ತಿಲ್ಲ. ನಮಗೆ ದಯವಿಟ್ಟು ಮನೆ ಕಟ್ಟಿಕೊಡಿ ಎಂದು ಮನವಿ ಮಾಡಿಕೊಂಡರು.

ADVERTISEMENT

ಸ್ಥಳೀಯ ವಾಸಿಗಳಾದ ನೇತ್ರ, ಅಣ್ಣಿ ಯಮ್ಮ, ಮುತ್ಯಾ ಲಮ್ಮ, ವೆಂಕಟೇಶ್ ಅವರು, ‘ನಮ್ಮ ಜೀವನ ರಸ್ತೆಗೆ ಬಂದಿದೆ. ಮಕ್ಕಳಿಗೆ ವಿದ್ಯೆ ಕಲಿಸಲು ಆಗುತ್ತಿಲ್ಲ. ಆರೋಗ್ಯ ಸಮಸ್ಯೆ ಎಂದರೆ ಚಿಕಿತ್ಸೆಗೆ ಹಣ ಇಲ್ಲದಂತಾಗಿದೆ’ ಎಂದು ಕಣ್ಣೀರು ಹಾಕಿದರು.

ಕುಂತಿ ನಗರ ಕೊಳೆಗೇರಿಯಲ್ಲಿ ಪ್ರತಿ ಮನೆಗೆ ₹7 ಲಕ್ಷದಂತೆ 402 ಮನೆಗಳನ್ನು ₹31 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಎಸ್‌ಸಿ/ಎಸ್‌ಟಿ ವರ್ಗಕ್ಕೆ ₹3.50 ಲಕ್ಷ, ಸಾಮಾನ್ಯ ವರ್ಗಕ್ಕೆ ₹2.70 ಲಕ್ಷ ಸಬ್ಸಿಡಿ ಸಿಗುತ್ತಿದ್ದು, ಉಳಿದ ಮೊತ್ತವನ್ನು ಫಲಾನುಭವಿ ಕಟ್ಟಬೇಕು. ಆದರೆ ವಂತಿಗೆ ಪಾವತಿ ಆಗದೆ ಮನೆ ಅರ್ಧಕ್ಕೆ ನಿಂತಿವೆ ಎಂದು ಅಧಿಕಾರಿಗಳು ತಿಳಿಸಿದರು.

ಸರ್ವಜ್ಞ ಕ್ಷೇತ್ರದ ಚಟ್ಟಪ್ಪ ಗಾರ್ಡನ್, ಬಸವ ನ ಗುಡಿಯ ಚಾಮುಂಡಿ ನಗರ ಕೊಳೆಗೇರಿಗೂ  ಸಚಿವರು ಭೇಟಿ ನೀಡಿ ಪರಿಶೀಲನೆ ಮಾಡಿದರು.

ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್. ಕೆ. ಅತೀಕ್, ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಕೊಳೆಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ಬಿ. ವೆಂಕಟೇಶ್, ಪ್ರಧಾನ ಎಂಜಿನಿಯರ್‌ ಬಾಲರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.