
ಬೆಂಗಳೂರು: ದೇವನಹಳ್ಳಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಸತ್ವ ಅಪಾರ್ಟ್‌ಮೆಂಟ್ ಸಮೀಪದ ಭುವನಹಳ್ಳಿ ಸೇತುವೆಯ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದ ಕಾರ್ಮಿಕರೊಬ್ಬರಿಗೆ ಇನೊವಾ ಕಾರು ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟಿದ್ದಾರೆ.
ಪಿ.ಜೆ.ಪಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಪಿಂಟು ಪಾಸ್ವಾನ್ (39) ಮೃತಪಟ್ಟವರು.
‘ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿಕಾಸ್ ಮಾಂಜಿ, ಲಾರಿ ಚಾಲಕ ಲಿಂಗಣ್ಣ ಹಾಗೂ ಪಿಂಟು ಪಾಸ್ವಾನ್ ಅವರು ಭಾನುವಾರ ಸಂಜೆ 6.15ರ ಸುಮಾರಿಗೆ ಮಾತನಾಡುತ್ತಾ ನಿಂತಿದ್ದರು. ಬೆಂಗಳೂರು ಕಡೆಯಿಂದ ದೇವನಹಳ್ಳಿಗೆ ತೆರಳುತ್ತಿದ್ದ ಇನೊವಾ ಕಾರು, ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಪಿಂಟು ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳೀಯರ ನೆರವಿನಿಂದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಪಿಂಟು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ’ ಎಂದು ಮೂಲಗಳು ಹೇಳಿವೆ.
‘ಕಾರು ಚಾಲಕನ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣವಾಗಿದೆ. ಕಾರು ಜಪ್ತಿ ಮಾಡಲಾಗಿದೆ. ಚಾಲಕ ಮೋಹನ್‌ಕುಮಾರ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಸಂಚಾರ ವಿಭಾಗದ ಪೊಲೀಸರು ಹೇಳಿದರು.
ದೇವನಹಳ್ಳಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.