ADVERTISEMENT

ಕಾಮಗಾರಿ ವಿಳಂಬ: ಬಿಬಿಎಂಪಿ ಮುಖ್ಯ ಆಯುಕ್ತ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2021, 21:52 IST
Last Updated 28 ಅಕ್ಟೋಬರ್ 2021, 21:52 IST
ನಗರದಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಮಾತನಾಡಿದರು. ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ವಿಶೇಷ ಆಯುಕ್ತ ರೆಡ್ಡಿ ಶಂಕರ್ ಬಾಬು, ಜಂಟಿ ಆಯುಕ್ತ ಡಾ.ನಾಗರಾಜ್ ಇದ್ದರು
ನಗರದಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಮಾತನಾಡಿದರು. ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ವಿಶೇಷ ಆಯುಕ್ತ ರೆಡ್ಡಿ ಶಂಕರ್ ಬಾಬು, ಜಂಟಿ ಆಯುಕ್ತ ಡಾ.ನಾಗರಾಜ್ ಇದ್ದರು   

ರಾಜರಾಜೇಶ್ವರಿ ನಗರ: ನಗರದ ವಿವಿಧೆಡೆ ಕೈಗೊಂಡಿರುವ ಕಾಮಗಾರಿಗಳು ವಿಳಂಬವಾಗುತ್ತಿರುವುದಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಅವರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಬಿಇಎಲ್ ಬಡಾವಣೆಯ ಶಾಸಕರ ಕಚೇರಿಯಲ್ಲಿ ಗುರುವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಒಳಚರಂಡಿ ಕಾಮಗಾರಿಗಾಗಿ ರಸ್ತೆಗಳನ್ನು ಅಗೆದು ಹಲವು ವರ್ಷಗಳಾದರೂ ಪೂರ್ಣಗೊಳಿಸಿಲ್ಲ. ಇದರಿಂದ, ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಹೇಳಿದರು.

‘ಒಳಚರಂಡಿ ನೀರು ರಾಜಕಾಲುವೆ ಮೂಲಕ ಕೆರೆಗಳಿಗೆ ಸೇರುತ್ತಿದೆ. ಇದರಿಂದ, ಕೆರೆಗಳು ವಿನಾಶದ ಅಂಚಿನಲ್ಲಿವೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮತ್ತು ಹೈಕೋರ್ಟ್‌ ಈ ಬಗ್ಗೆ ಹಲವು ಬಾರಿ ಎಚ್ಚರಿಕೆ ನೀಡಿವೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ತಲೆತಗ್ಗಿಸುವಂತಾಗಿದೆ’ ಎಂದು ಕಿಡಿಕಾರಿದರು.

ADVERTISEMENT

‘ಬೆಸ್ಕಾಂ, ಬಿಡಿಎ, ಬಿಬಿಎಂಪಿ, ಜಲಮಂಡಳಿ ನಡುವೆ ಸಮನ್ವಯದ ಕೊರತೆ ಇದೆ. ದುರಸ್ತಿಯಾಗಿರುವ ರಸ್ತೆಗಳನ್ನು ಈ ಕಾರಣದಿಂದಾಗಿಯೇ ಪದೇ ಪದೇ ಅಗೆಯಬೇಕಾದ ಪ್ರಮೇಯ ಎದುರಾಗುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲಿ ದೊಡ್ಡಬಿದರಕಲ್ಲು ಅತಿ ದೊಡ್ಡ ವಾರ್ಡ್. ಐದು ವರ್ಷಗಳ ದೀರ್ಘಾವಧಿಯಲ್ಲೂ ಇಲ್ಲಿನ ಒಳಚರಂಡಿ ಮತ್ತು ಕುಡಿಯುವ ನೀರು ಕಾಮಗಾರಿಗಳು ಪೂರ್ಣಗೊಂಡಿಲ್ಲ. ಜತೆಗೆ, ಕೆಲವು ಖಾಸಗಿ ಕಂಪನಿಗಳು ರಸ್ತೆ ಅಗೆದು, ಗುಂಡಿ ಮುಚ್ಚದ ಕಾರಣ ರಸ್ತೆಗಳು ಹಾಳಾಗಿವೆ. ಎಲ್ಲ ರಸ್ತೆ, ಕುಡಿಯುವ ನೀರು ಮತ್ತು ಒಳಚರಂಡಿ ಕಾಮಗಾರಿಗಳನ್ನು ಮೂರು ತಿಂಗಳ ಒಳಗೆ ಪೂರ್ಣಗೊಳಿಸಬೇಕು’ ಎಂದು ಅವರು ತಾಕೀತು ಮಾಡಿದರು.

ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ‘2018ರಲ್ಲಿ 110 ಹಳ್ಳಿಗಳಿಗೆ 10 ಟಿಎಂಸಿ ಕಾವೇರಿ ಕುಡಿಯುವ ನೀರು ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಚಾಲನೆ ನೀಡಿದ್ದರೂ ಇಲ್ಲಿಯವರೆಗೂ ಮುಗಿದಿಲ್ಲ. ಈಗ 2024ಕ್ಕೆ ಮುಗಿಯುತ್ತದೆ ಎಂದು ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಿದ್ದಾರೆ. 2023ಕ್ಕೆ ನಮ್ಮನ್ನು ರಾಜಕೀಯವಾಗಿ ಮುಗಿಸಲು ಹೊರಟ್ಟಿದ್ದೀರಾ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅಧಿಕಾರಿಗಳಲ್ಲಿ ಹೊಂದಾಣಿಕೆ ಇಲ್ಲ. ಒಳಚರಂಡಿ ನೀರು ಕೆರೆಗಳಿಗೆ ಸೇರುತ್ತಿದೆ. ಇದಕ್ಕೆ ಜವಾಬ್ದಾರಿ ಯಾರು’ ಎಂದು ಪ್ರಶ್ನಿಸಿದರು.

‘ಮಾಗಡಿ ರಸ್ತೆಯಿಂದ ಹೇರೋಹಳ್ಳಿ, ಅಂದ್ರಹಳ್ಳಿ ಮೂಲಕ ತುಮಕೂರು ರಸ್ತೆಯವರೆಗೆ ಕಾಮಗಾರಿಯನ್ನು ₹16 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿತ್ತು. ಆದರೆ, ಈ ಕಾಮಗಾರಿ ಮುಗಿಯುತ್ತಿದ್ದಂತೆ ಜಲಮಂಡಳಿಯವರು ರಸ್ತೆ ಅಗೆದು ಹಾಕಿರುವುದು ಎಷ್ಟು ಸರಿ’ ಎಂದು ಬೇಸರ ವ್ಯಕ್ತಪಡಿಸಿದರು.

ಜಲಮಂಡಳಿ ಮುಖ್ಯ ಎಂಜಿನಿಯರ್ ಎಸ್.ವಿ.ರಮೇಶ್, ‘ತಿಪ್ಪಗೊಂಡನಹಳ್ಳಿ ಜಲಾಶಯದಿಂದ 10 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಸಲು ಕಾಮಗಾರಿ ನಡೆಯುತ್ತಿದ್ದು, ಮುಂದಿನ ವರ್ಷದ ಒಳಗೆ ಪೂರ್ಣಗೊಳ್ಳಲಿದೆ’ ಎಂದರು.

ಬಿಡಿಎ ಆಯುಕ್ತ ಎಂ.ಬಿ.ರಾಜೇಶ್ ಗೌಡ, ಬಿಬಿಎಂಪಿಯ ವಿಶೇಷ ಆಯುಕ್ತ ರೆಡ್ಡಿ ಶಂಕರ್ ಬಾಬು, ಜಂಟಿ ಆಯುಕ್ತ ಡಾ.ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.