ADVERTISEMENT

ವಿಶ್ವದಲ್ಲಿ ಶಾಂತಿ ನೆಲೆಸಲು ಕಾವ್ಯ ಸಹಕಾರಿ: ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ

‘ಕಾಡುವ ಕಿರಂ’ ಅಹೋರಾತ್ರಿ ಕಾರ್ಯಕ್ರಮದಲ್ಲಿ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಅಭಿಮತ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2024, 0:28 IST
Last Updated 8 ಆಗಸ್ಟ್ 2024, 0:28 IST
   

ಬೆಂಗಳೂರು: ‘ಜಗತ್ತಿನಲ್ಲಿ ನಡೆಯುತ್ತಿರುವ ಯುದ್ಧಗಳು ಧರ್ಮ ಕೇಂದ್ರಿತವಾಗಿವೆ. ಆದ್ದರಿಂದ ಕಾವ್ಯವೂ ಒಂದು ಧರ್ಮವಾಗಿ, ಇನ್ನೆಲ್ಲ ಧರ್ಮವೂ ಲಯವಾಗಬೇಕು’ ಎಂದು ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ತಿಳಿಸಿದರು.

ಜನಸಂಸ್ಕೃತಿ ಪ್ರತಿಷ್ಠಾನ, ಬೆಂಗಳೂರು ಆರ್ಟ್‌ ಫೌಂಡೇಷನ್‌, ಕಿರಂ ಪ್ರಕಾಶನ ಜಂಟಿಯಾಗಿ ನಗರದಲ್ಲಿ ಬುಧವಾರ ಹಮ್ಮಿಕೊಂಡ ‘ಕಾಡುವ ಕಿರಂ’ ಅಹೋರಾತ್ರಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. ‘ಜಗತ್ತಿನಲ್ಲಿ ಶಾಂತಿ ನೆಲೆಸಲು ಕಾವ್ಯ ಸಹಕಾರಿ. ಹೀಗಾಗಿ, ಕಾವ್ಯ ಧರ್ಮಕ್ಕೆ ಧರ್ಮಾಂತರವಾಗಬೇಕಿದೆ. ಆಗ ಯುದ್ಧಗಳು ಸ್ಥಗಿತವಾಗಿ, ಶಾಂತಿ ನೆಲೆಸಲಿದೆ’ ಎಂದು ಹೇಳಿದರು. 

‘ಕನ್ನಡ ವಿಮರ್ಶಾಲೋಕದಲ್ಲಿ ಕಿ.ರಂ. ಎಂದೇ ಚಿರಪರಿಚಿತರಾಗಿದ್ದ ಕಿ.ರಂ. ನಾಗರಾಜ್ ಅವರದ್ದು ಮೌಕಿಕ ಪ್ರತಿಭೆ. ಅವರು ಹೆಚ್ಚು ಬರೆಯದಿದ್ದರೂ ಮನಸ್ಸಿನಲ್ಲಿ ಉಳಿದಿದ್ದಾರೆ. ಅನನ್ಯ ಪ್ರತಿಭೆ ಹೊಂದಿದ್ದ ಅವರು, ಕಾವ್ಯದ ವ್ಯಾಮೋಹಿಯಾಗಿದ್ದರು. ಸಮಾಜದ ಜತೆಗೆ ಅವಿನಾಭಾವ ಸಂಬಂಧ ಇಟ್ಟುಕೊಂಡಿದ್ದರು. ಮಾತನಾಡುವುದು ಕಷ್ಟವಾಗಿರುವ ಈ ಸಂದರ್ಭದಲ್ಲಿ ಅವರ ಅಗತ್ಯತೆ ಹೆಚ್ಚಿತ್ತು’ ಎಂದು ತಿಳಿಸಿದರು. 

ADVERTISEMENT

ಸಾಹಿತಿ ಎಸ್.ಜಿ. ಸಿದ್ಧರಾಮಯ್ಯ ಮಾತನಾಡಿ, ‘ಕಿ.ರಂ. ಅವರು ಸಾಹಿತ್ಯ ಜಂಗಮ. ವಲ್ಮಿಕ ಪ್ರಜ್ಞೆಯೊಳಗಿದ್ದ ಅವರು, ಷಣ್ಮುಖ ಪ್ರಜ್ಞೆ ಅನುಭವಿಸಿದ ಒಬ್ಬ ಸಂತ. ಅವರು ಕಾವ್ಯದೊಂದಿಗೆ ಹೆಚ್ಚು ಒಡನಾಟ ಹೊಂದಿದ್ದರು. ಈ ಮೂಲಕ ತನ್ನ ಬಳಿಗೆ ಬರುವವರನ್ನು ಮನುಷ್ಯರನ್ನಾಗಿಸಬೇಕು ಎಂಬುದು ಅವರ ಉದ್ದೇಶವಾಗಿತ್ತು’ ಎಂದು ಹೇಳಿದರು. ಕಿರಂ ಪ್ರಶಸ್ತಿ ಪುರಸ್ಕೃತ ಎಚ್.ಆರ್.ಸ್ವಾಮಿ, ‘ಪ್ರಾಕೃತಿಕ ವಿಕೋಪದಿಂದ ಗುಡ್ಡಗಳು ಕುಸಿಯುತ್ತಿರುವ ಈ ಕಾಲಘಟ್ಟದಲ್ಲಿ ತಮ್ಮ ಜವಾಬ್ಧಾರಿ ಏನು ಎಂಬುದರ ಬಗ್ಗೆ ಕವಿಗಳು, ಸಾಹಿತಿಗಳು ಮಾತನಾಡಬೇಕು. ಪಶ್ಚಿಮಘಟ್ಟಗಳ ಕಾಡು ನಾಶವಾಗುತ್ತಿದೆ. ಪರಿಣಾಮವಾಗಿ ಗುಡ್ಡಗಳು ಕುಸಿದು, ಪ್ರಾಕೃತಿಕ ವಿಕೋಪಗಳಾಗುತ್ತಿವೆ. ಈ ಬಗ್ಗೆಯೂ ಚಿಂತಿಸಬೇಕು’ ಎಂದರು.

ಬಳಿಕ ಪ್ರದೀಪ್ ತಿಪಟೂರು ನಿರ್ದೇಶನದ ‘ಮಿಸೆಸ್ ಅಂಬೇಡ್ಕರ್’ ನಾಟಕ ಪ್ರದರ್ಶನ ಕಂಡಿತು. ಕಿ.ರಂ. ನಾಗರಾಜ್ ಅವರಿಗೆ ಸಂಬಂಧಿಸಿದಂತೆ ಕವಿಗೋಷ್ಠಿಗಳು ರಾತ್ರಿಯಿಡೀ ನಡೆದವು.

ಆರು ಮಂದಿಗೆ ‘ಕಿರಂ ಪುರಸ್ಕಾರ’

ಸಮಾರಂಭದಲ್ಲಿ ಆರು ಮಂದಿಗೆ ಕಿ.ರಂ. ಪುರಸ್ಕಾರ ಪ್ರದಾನ ಮಾಡಲಾಯಿತು. ಪರಿಸರ ಕ್ಷೇತ್ರದಲ್ಲಿ ಎಚ್.ಆರ್.ಸ್ವಾಮಿ, ಚಿತ್ರಕಲೆಯಲ್ಲಿ ಎಂ.ಜೆ.ಕಮಲಾಕ್ಷಿ, ಜಾನಪದ ಕ್ಷೇತ್ರದಲ್ಲಿ ಕೆ.ಆರ್.ಸಂಧ್ಯಾ ರೆಡ್ಡಿ, ಹೋರಾಟಕ್ಕೆ ಸಂಬಂಧಿಸಿದಂತೆ ರಾಮದೇವ ರಾಕೆ, ಸಂಸ್ಕೃತಿ ಚಿಂತನೆಗೆ ಬಂಜಗೆರೆ ಜಯಪ್ರಕಾಶ್ ಹಾಗೂ ಕಾ.ತ.ಚಿಕ್ಕಣ್ಣ ಅವರಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.