ADVERTISEMENT

ಯಕ್ಷಗಾನ ರಸಋಷಿಗೆ ನುಡಿ ನಮನ

ಹೊಸ್ತೋಟ ಮಂಜುನಾಥ ಭಾಗವತರ ಪ್ರತಿಭೆ ಕೊಂಡಾಡಿದ ಒಡನಾಡಿಗಳು

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2020, 19:16 IST
Last Updated 1 ಫೆಬ್ರುವರಿ 2020, 19:16 IST
ಹೊಸ್ತೋಟ ಮಂಜುನಾಥ ಭಾಗವತರನ್ನು ಕೊನೆಯ ದಿನಗಳಲ್ಲಿ ನೋಡಿಕೊಂಡ ಶ್ರೀಪಾದ ಜೋಶಿ ಹಾಗೂ ಸುಮನಾ ಜೋಶಿ ದಂಪತಿಯನ್ನು ಗೌರವಿಸಲಾಯಿತು. (ನಿಂತವರು ಎಡದಿಂದ) ಮಹಾಸಭಾ ನಿರ್ದೇಶಕ ಮೋಹನ್‌ ಹೆಗಡೆ, ಪತ್ರಕರ್ತ ಎಂ.ಕೆ. ಭಾಸ್ಕರ ರಾವ್‌, ಸಂಯೋಜಕಿ ಮಮತಾ ಜೋಶಿ, ಮಹಾಸಭೆ ಅಧ್ಯಕ್ಷ ಡಾ.ಗಿರಿಧರ್‌ ಕಜೆ ಹಾಗೂ ಎಂ.ಎ.ಹೆಗಡೆ ಇದ್ದರು- ಪ್ರಜಾವಾಣಿ ಚಿತ್ರ
ಹೊಸ್ತೋಟ ಮಂಜುನಾಥ ಭಾಗವತರನ್ನು ಕೊನೆಯ ದಿನಗಳಲ್ಲಿ ನೋಡಿಕೊಂಡ ಶ್ರೀಪಾದ ಜೋಶಿ ಹಾಗೂ ಸುಮನಾ ಜೋಶಿ ದಂಪತಿಯನ್ನು ಗೌರವಿಸಲಾಯಿತು. (ನಿಂತವರು ಎಡದಿಂದ) ಮಹಾಸಭಾ ನಿರ್ದೇಶಕ ಮೋಹನ್‌ ಹೆಗಡೆ, ಪತ್ರಕರ್ತ ಎಂ.ಕೆ. ಭಾಸ್ಕರ ರಾವ್‌, ಸಂಯೋಜಕಿ ಮಮತಾ ಜೋಶಿ, ಮಹಾಸಭೆ ಅಧ್ಯಕ್ಷ ಡಾ.ಗಿರಿಧರ್‌ ಕಜೆ ಹಾಗೂ ಎಂ.ಎ.ಹೆಗಡೆ ಇದ್ದರು- ಪ್ರಜಾವಾಣಿ ಚಿತ್ರ   

ಬೆಂಗಳೂರು: ಯಕ್ಷಗಾನಕ್ಕಾಗಿ ಇಡೀ ಬದುಕನ್ನೇ ಸಮರ್ಪಿಸಿದ ರಸಋಷಿ ಹೊಸ್ತೋಟ ಮಂಜುನಾಥ ಭಾಗವತರ ಜೀವನ ಹಾಗೂ ಬಹುಮುಖ ಪ್ರತಿಭೆ
ಯನ್ನು ಅವರ ಒಡನಾಡಿಗಳು, ವಿದ್ವಾಂಸರು, ಭಾಗವತರು, ಕಲಾವಿದರು ಹಾಗೂ ಶಿಷ್ಯರು ಕೊಂಡಾಡಿದರು.

ಅಖಿಲ ಹವ್ಯಕ ಮಹಾಸಭಾ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಭಾಗವತರಿಗೆ ಭಾವಾರ್ಪಣೆ’ ಕಾರ್ಯಕ್ರಮದಲ್ಲಿ ಅವರಿಗೆ ನುಡಿ ನಮನ ಸಲ್ಲಿಸಲಾಯಿತು.

ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ.ಹೆಗಡೆ ಮಾತನಾಡಿ, ‘ಸುಮಾರು ಐದು ದಶಕಗಳಿಗೂ ಮೀರಿದ ಸ್ನೇಹ ಸಂಬಂಧ ನಮ್ಮದು. ತಾಳಮದ್ದಲೆಯೊಂದರಲ್ಲಿ ಅವರನ್ನು ಪ್ರಥಮ ಬಾರಿ ಭೇಟಿ ಮಾಡಿದ್ದೆ. ಬಳಿಕ ಆ ಭಾಗದಲ್ಲಿ ನಡೆಯುತ್ತಿದ್ದ ಎಲ್ಲ
ತಾಳಮದ್ದಲೆಗಳನ್ನೂ ಒಟ್ಟಾಗಿ ನೋಡುತ್ತಿದ್ದೆವು. ಮಾರಿಕಾಂಬಾ ದೇವಸ್ಥಾನದಲ್ಲಿ ನಡೆದ ಪ್ರಸಂಗ ರಚನಾ ಸ್ಪರ್ಧೆಯಲ್ಲಿ ತಮ್ಮ ‘ಪಾಂಡು ವಿಯೋಗ’ ಪ್ರಸಂಗಕ್ಕೆ ಬಹುಮಾನ ಬಂದಿಲ್ಲ ಎಂಬ ಕಾರಣಕ್ಕೆ ತಳಮಳಗೊಂಡಿದ್ದರು. ಅವರಿಗೆ ಆತ್ಮಸ್ಥೈರ್ಯವನ್ನು ತುಂಬಿದೆ. ಬಳಿಕ ಅವರೊಳಗಿನ ಕವಿ ಜಾಗೃತನಾದ’ ಎಂದರು.

ADVERTISEMENT

ಯಕ್ಷಗಾನ ವಿಮರ್ಶಕ ಕಬ್ಬಿನಾಲೆ ವಸಂತ ಭಾರದ್ವಾಜ, ‘ಭಾಗವತರು 300 ಪ್ರಸಂಗಗಳನ್ನು ರಚಿಸುವ ಮೂಲಕ ದೊಡ್ಡ ದಾಖಲೆಯನ್ನೇ ಸೃಷ್ಟಿ ಮಾಡಿದ್ದಾರೆ. ನಾದಕ್ಕೆ ನಾಟ್ಯಲಯವನ್ನು ತಂದುಕೊಡುವ ಕಲೆ ಅವರಿಗೆ ಸಿದ್ಧಿಸಿತ್ತು. ಅವರ ಪದ್ಯದ ಆರಂಭದಲ್ಲಿಯೇ ಲಘು ಮತ್ತು ಗುರು ಗಣ ಬರುವುದನ್ನು ಕಾಣಬಹುದು’ ಎಂದರು.

ಹೆಣ್ಣು ಮಕ್ಕಳಿಗೂ ಪ್ರೋತ್ಸಾಹ: ಕಲಾವಿದೆ ಹಾಗೂ ಅವರ ವಿದ್ಯಾರ್ಥಿನಿ ಗೀತಾ ಸಾಲ್ಕಣಿ, ‘ಹೆಣ್ಣು ಮಕ್ಕಳಿಗೆ ಯಕ್ಷಗಾನ ಏಕೆ ಎಂದು ಪ್ರಶ್ನಿಸುವ ಸಂದರ್ಭದಲ್ಲಿ ಭಾಗವತರು ಪ್ರೋತ್ಸಾಹಿಸಿದರು. ಮುಂದಿನ ಪೀಳಿಗೆಗೆ ಈ ಕಲೆ‌ ದಾಟಬೇಕಾದರೇ ಹೆಣ್ಣು ಮಕ್ಕಳು ಕಲಿಯಲು ಮುಂದೆ ಬರಬೇಕು ಎಂದು ಹೇಳುತ್ತಿದ್ದರು. ಅವರ ಕನಸನ್ನು ಸಾಕಾರ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದರು.

ಭಾಗವತ ಸುಬ್ರಹ್ಮಣ್ಯ ಧಾರೇಶ್ವರ, ‘ಅವರು ಅವಧೂತ ಪುರುಷರಾಗಿದ್ದರು. ಎಲೆಕ್ಟ್ರಿಕ್ ಕೆಲಸ ಮಾಡುತ್ತಿದ್ದ ನಾನುಜೀವನಪೂರ್ತಿ ಲೈಟ್‌ ಕಂಬ ಹತ್ತುವುದರಲ್ಲಿಯೇ ಕಳೆಯುತ್ತೇನೆ ಅಂದುಕೊಂಡಿದ್ದೆ. ಭಜನೆ ಮಾಡುತ್ತಿದ್ದ ನನ್ನ ಪ್ರತಿಭೆ ಗುರುತಿಸಿದ್ದ ಅವರು,ಉಪ್ಪೂರು ನಾರಾಯಣ ಭಾಗವತರ ಮೂಲಕ ಮಾರ್ಗದರ್ಶನ ನೀಡಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.