ADVERTISEMENT

ಬೆಂಗಳೂರು: ಯಕ್ಷಗಾನ ಅಕಾಡೆಮಿ ಸ್ಥಳಾಂತರ ಪ್ರಯತ್ನ

ರಾಜಧಾನಿಯಲ್ಲಿಯೇ ಕಚೇರಿ ಉಳಿಸಲು ಸಚಿವರು, ಶಾಸಕರ ಮೂಲಕ ಒತ್ತಡ

ವರುಣ ಹೆಗಡೆ
Published 5 ಏಪ್ರಿಲ್ 2025, 23:57 IST
Last Updated 5 ಏಪ್ರಿಲ್ 2025, 23:57 IST
<div class="paragraphs"><p>ಯಕ್ಷಗಾನ</p></div>

ಯಕ್ಷಗಾನ

   

ಬೆಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿಯ ಕೇಂದ್ರ ಕಚೇರಿ‌ ಸ್ಥಳಾಂತರದ ಪ್ರಸ್ತಾವ ಮತ್ತೆ ಮುನ್ನೆಲೆಗೆ ಬಂದಿದ್ದು, ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಇನ್ನೊಂದೆಡೆ, ಸ್ಥಳಾಂತರ ಅನಿವಾರ್ಯವಾದಲ್ಲಿ ಮೂಡಲಪಾಯ ಪ್ರಕಾರಕ್ಕೆ ಪ್ರತ್ಯೇಕ ಅಕಾಡೆಮಿ ರಚಿಸಬೇಕೆಂಬ ಕೂಗು ಎದ್ದಿದೆ. 

ಕನ್ನಡ ಭವನದ ಎರಡನೇ ಮಹಡಿಯಲ್ಲಿ ಅಕಾಡೆಮಿಯ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಇದನ್ನು ಉಡುಪಿ ಅಥವಾ ಮಂಗಳೂರಿಗೆ ಸ್ಥಳಾಂತರಿಸಬೇಕೆಂಬ ಪ್ರಯತ್ನ ನಡೆಯುತ್ತಿದೆ. ಅಕಾಡೆಮಿಯ ಹಾಲಿ ಅಧ್ಯಕ್ಷರಾದ ತಲ್ಲೂರು ಶಿವರಾಮಶೆಟ್ಟಿ ಅವರು ಉಡುಪಿ ಜಿಲ್ಲೆಯವರಾಗಿದ್ದು, 13 ಮಂದಿ ಸದಸ್ಯರಲ್ಲಿ 9 ಮಂದಿ ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದಾರೆ. ಇದರಿಂದಾಗಿ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಆಯ್ಕೆಗೆ ಸಂಬಂಧಿಸಿದ ಸರ್ವಸದಸ್ಯರ ಸಭೆ ಕೂಡ ಮಂಗಳೂರಿನ ತುಳು ಭವನದಲ್ಲಿ ನಡೆದಿತ್ತು. ಉಡುಪಿಯಲ್ಲಿಯೇ ಪ್ರಶಸ್ತಿಗಳ ಘೋಷಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಮಾಡಲಾಗಿತ್ತು. ಇದು ಸಹ ಅಕಾಡೆಮಿ ಸ್ಥಳಾಂತರದ ಚರ್ಚೆಗೆ ಇಂಬು ನೀಡಿದಂತಾಗಿದೆ. 

ADVERTISEMENT

ಯಕ್ಷಗಾನ ಅಕಾಡೆಮಿ ಕಚೇರಿ ಬೆಂಗಳೂರಿನಲ್ಲಿಯೇ ಇರಬೇಕೆಂದು ಆಗ್ರಹಿಸಿ ಅಕಾಡೆಮಿ ಅಧ್ಯಕ್ಷರಿಗೆ ಪತ್ರ ಬರೆದಿರುವ ಮೂಡಲಪಾಯ ಯಕ್ಷಗಾನ ಕಲಾವಿದರು, ಕಚೇರಿ ಸ್ಥಳಾಂತರಿಸುವುದಾದರೆ ಮೂಡಲಪಾಯವನ್ನು ಪ್ರತ್ಯೇಕಿಸಬೇಕು ಎಂದು ಆಗ್ರಹಿಸಿದ್ದಾರೆ. ಮೂಡಲಪಾಯ ಕಲಾವಿದರ ಪರವಾಗಿ, ಸಚಿವರಾದ ಕೃಷ್ಣ ಬೈರೇಗೌಡ, ಕೆ.ಎಚ್. ಮುನಿಯಪ್ಪ, ಶಾಸಕರಾದ ಎಸ್.ಆರ್. ವಿಶ್ವನಾಥ್, ಧೀರಜ್ ಮುನಿರಾಜ್ ಸಹ ಪತ್ರ ಬರೆದಿದ್ದು, ಅಕಾಡೆಮಿ ಕಚೇರಿ ಸ್ಥಳಾಂತರ ಮಾಡದಂತೆ ಮನವಿ ಮಾಡಿದ್ದಾರೆ. 

ನಿರಂತರ ಪ್ರಯತ್ನ: ಈ ಹಿಂದೆ ಉಮಾಶ್ರೀ ಅವರು ಇಲಾಖೆ ಸಚಿವರಾಗಿದ್ದಾಗ ಅಕಾಡೆಮಿಯ ಕೇಂದ್ರ ಕಚೇರಿಯನ್ನು ಮಂಗಳೂರಿಗೆ ಸ್ಥಳಾಂತರಿಸುವಂತೆ ಆದೇಶ ಹೊರಡಿಸಿದ್ದರು. ದಕ್ಷಿಣ ಕನ್ನಡ, ಕರಾವಳಿ ಪ್ರದೇಶದಲ್ಲಿ ಯಕ್ಷಗಾನದ ಕಲಾವಿದರು ಹೆಚ್ಚಿದ್ದಾರೆ ಎಂಬ ಕಾರಣಕ್ಕೆ ಈ ಆದೇಶ ಹೊರಡಿಸಲಾಗಿತ್ತು. ಆದರೆ, ಸರ್ಕಾರದ ಈ ಕ್ರಮಕ್ಕೆ ಕಲಾವಿದರ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅಕಾಡೆಮಿಯ ಅಂದಿನ ಅಧ್ಯಕ್ಷ ಎಂ.ಎ. ಹೆಗಡೆ ಹಾಗೂ ಸದಸ್ಯರು ಕೂಡ ಆಕ್ಷೇಪಿಸಿದ್ದರು. ಆದ್ದರಿಂದ ನಂತರ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರ್ಕಾರ, ಸ್ಥಳಾಂತರದ ಆದೇಶವನ್ನು ಹಿಂಪಡೆದಿತ್ತು. ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರ‌ದ ಅವಧಿಯಲ್ಲಿಯೂ ಉಡುಪಿಗೆ ಸ್ಥಳಾಂತರಿಸುವ ಪ್ರಯತ್ನ ನಡೆದಿತ್ತು.  

‘ಯಕ್ಷಗಾನ ಕಲೆ ಕರಾವಳಿಗಷ್ಟೇ ಸೀಮಿತವಾಗದೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತಿದೆ. ಕಚೇರಿಯನ್ನು ಮಂಗಳೂರು ಅಥವಾ ಉಡುಪಿಗೆ ಸ್ಥಳಾಂತರಿಸಿದರೆ ಮೂಡಲಪಾಯ ಸೇರಿ ಯಕ್ಷಗಾನದ ಇನ್ನಿತರ ಕಲಾ ಪ್ರಕಾರಗಳಿಗೆ ಅಷ್ಟಾಗಿ ಪ್ರೋತ್ಸಾಹ ಸಿಗುವುದಿಲ್ಲ. ಕೇಂದ್ರ ಕಚೇರಿ ಬೆಂಗಳೂರಿನಲ್ಲೇ ಇರುವುದು ಸೂಕ್ತ’ ಎಂಬ ಅಭಿಪ್ರಾಯ ಯಕ್ಷಗಾನ ಕಲಾವಿದರ ವಲಯದಲ್ಲಿ ವ್ಯಕ್ತವಾಗಿದೆ. 

ಅಕಾಡೆಮಿಯ ಕೇಂದ್ರ ಕಚೇರಿಯನ್ನು ಸ್ಥಳಾಂತರ ಮಾಡಬಾರದು. ಒಂದು ವೇಳೆ ಸ್ಥಳಾಂತರ ಅನಿರ್ವಾಯವಾದಲ್ಲಿ ಪ್ರತ್ಯೇಕಿಸಿ ಮೂಡಲಪಾಯ ಕಚೇರಿ ಇಲ್ಲೆ ಇರಿಸಿ
ಎಸ್.ಪಿ. ಮುನಿಕೆಂಪಯ್ಯ ಮೂಡಲಪಾಯ ಯಕ್ಷಗಾನ ಕಲಾವಿದ
ಕಲಾವಿದರ ಹಿತದೃಷ್ಟಿಯಿಂದ ಅಕಾಡೆಮಿಯ ಕೇಂದ್ರ ಕಚೇರಿ ಬೆಂಗಳೂರಿನಲ್ಲಿಯೇ ಇರಬೇಕು. ಸ್ಥಳಾಂತರ ಮಾಡಿದರೆ ಕಲೆ ಹಾಗೂ ಕಲಾವಿದರಿಗೆ ಸಮಸ್ಯೆ ಆಗುತ್ತದೆ
ಕೊಳಗಿ ಕೇಶವ ಹೆಗಡೆ, ಯಕ್ಷಗಾನ ಭಾಗವತ

ಸ್ಥಳಾಂತರದಿಂದ ಸಮಸ್ಯೆ? 

ಯಕ್ಷಗಾನದಲ್ಲಿ ತೆಂಕುತಿಟ್ಟು ಬಡಗುತಿಟ್ಟು ಬಡಾಬಡಗುತಿಟ್ಟು ಮೂಡಲಪಾಯ ಬಯಲಾಟ ತಾಳಮದ್ದಳೆ ಸೇರಿ ಹಲವು ಪ್ರಕಾರಗಳಿವೆ. ಎಲ್ಲವೂ ಅಕಾಡೆಮಿ ವ್ಯಾಪ್ತಿಗೆ ಬರುತ್ತವೆ. ಮೂಡಲಪಾಯ ಯಕ್ಷಗಾನ ಪ್ರಕಾರವು ಮಧ್ಯ ಕರ್ನಾಟಕದ ತುಮಕೂರು ಚಿತ್ರದುರ್ಗ ದಾವಣಗೆರೆ ಹಾಸನ ಮಂಡ್ಯ ಮೈಸೂರು ಬೆಂಗಳೂರು ಗ್ರಾಮಾಂತರ ರಾಮನಗರ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ಬಯಲುನಾಡಿನ ತಾಲ್ಲೂಕುಗಳಲ್ಲಿ ಗುರುತಿಸಿಕೊಂಡಿದೆ. ಕೇಳಿಕೆ ಪ್ರಕಾರವು ಕೋಲಾರ ಚಿಕ್ಕಬಳ್ಳಾಪುರ ಘಟ್ಟದಕೋರೆ ಪ್ರಕಾರವು ಚಾಮರಾಜನಗರ ಪಿರಿಯಾಪಟ್ಟಣದಲ್ಲಿ ಪ್ರಚಲಿತದಲ್ಲಿದೆ. ಮೂಡಲಪಾಯದ ಕಲಾವಿದರು ಬೆಂಗಳೂರಿನ ಸುತ್ತಮುತ್ತ ಇರುವುದರಿಂದ ಕಚೇರಿ ಸ್ಥಳಾಂತರವಾದಲ್ಲಿ ಮಾಸಾಶನ ಸೇರಿ ವಿವಿಧ ಪ್ರಕ್ರಿಯೆಗೆ ಸಮಸ್ಯೆಯಾಗಲಿದೆ. 

‘ಸ್ಥಳಾಂತರದ ಪ್ರಸ್ತಾವವಿಲ್ಲ’

  ‘ಅಕಾಡೆಮಿಯ ಕೇಂದ್ರ ಕಚೇರಿ ಬೆಂಗಳೂರಿನಲ್ಲಿ ಇರುವುದೇ ಉತ್ತಮ. ಉಡುಪಿ ಅಥವಾ ಮಂಗಳೂರಿಗೆ ಸ್ಥಳಾಂತರಿಸುವ ಬಗ್ಗೆ ಯಾವುದೇ ಪ್ರಸ್ತಾವವಿಲ್ಲ. ಈ ಬಗ್ಗೆ ಚಿಂತನೆ ಸಹ ಮಾಡಿರಲಿಲ್ಲ. ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚೆಯೂ ನಡೆದಿಲ್ಲ. ಸ್ಥಳಾಂತರದ ಬಗ್ಗೆ ಸದಸ್ಯರು ಹಾಗೂ ನಾನು ಆಸಕ್ತಿ ಹೊಂದಿಲ್ಲ. ನಾನು ವಿವಿಧ ಸಂಘಟನೆಗಳಲ್ಲಿ ಸಕ್ರಿಯನಾಗಿರುವುದರಿಂದ ಮಂಗಳೂರು ಹಾಗೂ ಉಡುಪಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಿದೆ’ ಎಂದು ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮಶೆಟ್ಟಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.