ADVERTISEMENT

‘ಪಾಂಚಜನ್ಯ’, ‘ದಕ್ಷಾಧ್ವರ’ ಇದೇ 20ಕ್ಕೆ

ರವೀಂದ್ರ ಕಲಾಕ್ಷೇತ್ರದಲ್ಲಿ ‘ಟೀಂ ಉತ್ಸಾಹಿ’ಯಿಂದ ಯಕ್ಷಗಾನ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2020, 16:03 IST
Last Updated 15 ಡಿಸೆಂಬರ್ 2020, 16:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋವಿಡ್ ಕಾಣಿಸಿಕೊಂಡ ಬಳಿಕ ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷಗಾನ ವೈಭವವನ್ನು ಮತ್ತೆ ಕಣ್ತುಂಬಿಕೊಳ್ಳುವ ಅವಕಾಶ ಒದಗಿ ಬಂದಿದೆ. ‘ಟೀಂ ಉತ್ಸಾಹಿ’ ತಂಡವು ‘ಯಕ್ಷ ವರ್ಷ’ ಹೆಸರಿನಲ್ಲಿ ಭಾನುವಾರ (ಡಿ.20) ಮಧ್ಯಾಹ್ನ 3 ಗಂಟೆಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷಗಾನ ಪ್ರದರ್ಶನವನ್ನು ಹಮ್ಮಿಕೊಂಡಿದೆ.

ಕೋವಿಡ್‌ ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಜಾರಿಗೊಂಡ ಬಳಿಕ ಕಲಾ ಪ್ರದರ್ಶನಗಳೂ ಸ್ಥಗಿತಗೊಂಡಿದ್ದವು. ತೆಂಕು–ಬಡಗಿನ ಯಕ್ಷ ದಿಗ್ಗಜರ ಕೂಡುವಿಕೆಯಲ್ಲಿ ‘ಪಾಂಚಜನ್ಯ’ ಹಾಗೂ ‘ದಕ್ಷಾದ್ವರ’ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಲಾಗಿದೆ. ಈ ಪ್ರದರ್ಶನಕ್ಕೆ ಸೀಮಿತ ಪ್ಷೇಕ್ಷಕರಿಗೆ ಅವಕಾಶ ನೀಡಲಾಗುತ್ತಿದೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ವಹಿಸಿಕೊಳ್ಳಲಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಎಂ.ಕೆ. ರಮೇಶ್ ಆಚಾರ್ಯ ಅವರನ್ನು ಸನ್ಮಾನಿಸಲಾಗುತ್ತದೆ. ಉದ್ಯಮಿ ಕೃಷ್ಣಮೂರ್ತಿ ಮಂಜರು, ಚಲನಚಿತ್ರ ಹಾಸ್ಯನಟ ಟೆನ್ನಿಸ್ ಕೃಷ್ಣ ಹಾಗೂ ಚಲನಚಿತ್ರ ನಿರ್ದೇಶಕ ಗುರುದತ್ ಗಾಣಿಗ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಬಡಗು ತಿಟ್ಟುವಿನಲ್ಲಿ ಗಣೇಶ್ ಕುಮಾರ್ ಹೆಬ್ರಿ, ಹೇರಂಜಾಲು ಪಲ್ಲವ ಗಾಣಿಗ ಅವರ ಭಾಗವತಿಕೆ ಇರಲಿದೆ. ಶಶಾಂಕ್ ಆಚಾರ್ಯ ಅವರು ಮದ್ದಳೆ ಹಾಗೂ ರಾಕೇಶ್ ಮಲ್ಯ ಹಳ್ಳಾಡಿ ಅವರು ಚಂಡೆಯ ಸಾಥ್ ನೀಡಲಿದ್ದಾರೆ. ತೆಂಕು ತಿಟ್ಟುವಿನಲ್ಲಿ ರವಿಚಂದ್ರ ಕನ್ನಡಿ ಕಟ್ಟೆ ಅವರ ಭಾಗವತಿಕೆ ಇರಲಿದೆ. ಕೃಷ್ಣಪ್ರಕಾಶ್ ಉಳಿತ್ತಾಯ ಅವರು ಮದ್ದಳೆ ಹಾಗೂ ಚೈತನ್ಯಕೃಷ್ಣ ಪದ್ಯಾಣ ಅವರು ಚಂಡೆಯ ಸಾಥ್ ನೀಡಲಿದ್ದಾರೆ.

ADVERTISEMENT

‘ಕೋವಿಡ್‌ನಿಂದಾಗಿ ಯಕ್ಷಗಾನ ‍ಪ್ರೇಮಿಗಳು ನಿರಾಸೆ ಅನುಭವಿಸಿದ್ದರು. ಅಷ್ಟಾಗಿಯೂ ಸಾಲು ಸಾಲು ಯಕ್ಷಗಾನ ಪ್ರದರ್ಶನಗಳು ಆನ್‌ಲೈನ್‌ನಲ್ಲಿ ಪ್ರದರ್ಶನ ಕಂಡಿದ್ದವು. ‘ಪ್ರಜಾವಾಣಿ’ ಫೇಸ್‌ಬುಕ್ ಲೈವ್ ಮೂಲಕ ಬಡಗು ತಿಟ್ಟಿನ ಯಕ್ಷಗಾನ ಪ್ರದರ್ಶನ ನಡೆಸಲಾಯಿತು. ಈಗ ತೆಂಕು–ಬಡಗಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ’ ಎಂದು ಟೀಂ ಉತ್ಸಾಹಿ ತಿಳಿಸಿದೆ.

ಸಂಪರ್ಕಕ್ಕೆ ಮೊ.: 9945126338 ಅಥವಾ 7760272829

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.