ADVERTISEMENT

ಸಾಹಿತ್ಯ ಸಮ್ಮೇಳನದಲ್ಲಿ ಯಕ್ಷಗಾನಕ್ಕೆ ಸಿಗಲಿ ಆದ್ಯತೆ: ಎಚ್‌.ಎಸ್. ವೆಂಕಟೇಶಮೂರ್ತಿ

ಕವಿ ಎಚ್‌.ಎಸ್. ವೆಂಕಟೇಶಮೂರ್ತಿ ಅಭಿಮತ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2021, 17:16 IST
Last Updated 8 ಆಗಸ್ಟ್ 2021, 17:16 IST
ಎಚ್‌.ಎಸ್‌. ವೆಂಕಟೇಶಮೂರ್ತಿ
ಎಚ್‌.ಎಸ್‌. ವೆಂಕಟೇಶಮೂರ್ತಿ   

ಬೆಂಗಳೂರು: ‘ಯಕ್ಷಗಾನದ ಅನೇಕ ಪದ್ಯಗಳು ಸ್ವತಂತ್ರವಾದ ಕಾವ್ಯಶಕ್ತಿಯಿಂದ ಹೊಳೆಯುವ ಅನರ್ಘ್ಯ ರತ್ನದಂತಿವೆ. ಈ ಕಲೆ ಹಾಗೂ ಸಾಹಿತ್ಯದ ಬಗ್ಗೆ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಗೋಷ್ಠಿ ನಡೆಸಬೇಕು’ ಎಂದು ಕವಿ ಎಚ್‌.ಎಸ್. ವೆಂಕಟೇಶಮೂರ್ತಿ ಅಭಿಮತ ವ್ಯಕ್ತಪಡಿಸಿದರು.

ಯಕ್ಷವಾಹಿನಿ ಪ್ರತಿಷ್ಠಾನವು ‘ಕನ್ನಡ ಸಾಹಿತ್ಯದ ಶ್ರೀಮಂತಿಕೆಗೆ ಯಕ್ಷಗಾನ ಸಾಹಿತ್ಯದ ಕೊಡುಗೆ’ ಕುರಿತು ಆನ್‌ಲೈನ್‌ ವೇದಿಕೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾಲೋಚನೆಯಲ್ಲಿ ಮಾತನಾಡಿದರು. ‘ಯಕ್ಷಗಾನ ಪ್ರಸಂಗಗಳು ಕನ್ನಡದ ಅನೇಕ ಕವಿಗಳ ಮೇಲೆ ಕೂಡ ಪ್ರಭಾವ ಬೀರಿವೆ. ಆದರೆ, ಶಿಷ್ಟ ಸಾಹಿತ್ಯದ ಸಭೆ, ಸಮ್ಮೇಳನದಲ್ಲಿ ಯಕ್ಷಗಾನ ಸಾಹಿತ್ಯದ ಬಗ್ಗೆ ಚರ್ಚೆಯೇ ಆಗುತ್ತಿಲ್ಲ. ವಿಮರ್ಶಕರು ಇದನ್ನು ಏಕೆ ಗಮನಿಸುತ್ತಿಲ್ಲ ಎನ್ನುವುದು ತಿಳಿಯದಾಗಿದೆ. ಈಗಲಾದರೂ ಈ ಕಲೆಗೆ ನ್ಯಾಯ ಒದಗಿಸಲು ಪ್ರಯತ್ನಿಸಬೇಕು’ ಎಂದರು.

‘ಪರಿಷತ್ತುಗಳು ಹಾಗೂ ಅಕಾಡೆಮಿಗಳು ಯಕ್ಷಗಾನಕ್ಕೆ ಸಂಬಂಧಿಸಿದಂತೆ ವಿಮರ್ಶೆ ಮತ್ತು ಅಧ್ಯಯನಕ್ಕೆ ಆದ್ಯತೆ ನೀಡಿ, ಅಲ್ಲಿನ ಕಾವ್ಯ ಗುಣವನ್ನು ಹೆಕ್ಕಿ ತೆಗೆಯುವ ಪ್ರಯತ್ನ ಮಾಡಬೇಕು. ಯಕ್ಷಗಾನದ ಅತ್ಯುತ್ತಮ ಕೃತಿಗಳನ್ನು ಸಂಪಾದನೆ ಮಾಡಿ, ಅದರ ಸಂಪುಟವನ್ನು ಹೊರತರುವ ಕೆಲಸವನ್ನು ಯಕ್ಷಪ್ರೇಮಿಗಳು ಮಾಡಬೇಕು. ಈ ಕಲೆಯ ಸಾಹಿತ್ಯವನ್ನು ಮುನ್ನೆಲೆಗೆ ತರಲು ಸಾಹಿತ್ಯಾಸಕ್ತರು ಸಂಘಟಿತರಾಗಿರುವ ಬೆಂಗಳೂರು, ಮೈಸೂರು ಹಾಗೂ ಧಾರವಾಡದಲ್ಲಿ ವಿಚಾರಸಂಕಿರಣಗಳನ್ನು ನಡೆಸಬೇಕು’ ಎಂದು ತಿಳಿಸಿದರು.

ADVERTISEMENT

ಕನ್ನಡ ಸಾಹಿತ್ಯಕ್ಕೆ ಕೊಡುಗೆ: ಕವಿ ಚಿಂತಾಮಣಿ ಕೊಡ್ಲೆಕೆರೆ ಮಾತನಾಡಿ, ‘ಏಳು ಶತಮಾನಗಳಿಂದ ಯಕ್ಷಗಾನದ ರಂಗ ಪ್ರದರ್ಶನಗಳು ನಡೆದುಕೊಂಡು ಬಂದಿವೆ. ಈ ಕಲೆಯು ನಿರ್ವಿವಾದವಾಗಿ ಕನ್ನಡದ ಸಂಸ್ಕೃತಿಯನ್ನು ರೂಪಿಸುತ್ತಾ ಬಂದಿದೆ. ಈ ಕಲಾ ಮಾಧ್ಯಮದಿಂದ ಮನೋರಂಜನೆ ಹಾಗೂ ಶಿಕ್ಷಣ ಸಿಗುತ್ತಿದೆ. ರಾಮಾಯಣ, ಮಹಾಭಾರತ ಹಾಗೂ ಇತಿಹಾಸ ತಿಳಿಯಲೂ ಸಹಕಾರಿ’ ಎಂದರು.

ಪುತ್ತೂರು ರಮೇಶ ಭಟ್ ಹಾಗೂ ಎ.ಪಿ. ಪಾಠಕ್ ಅವರಿಂದ ತೆಂಕು ಬಡಗು ಶೈಲಿಯ ಗಾಯನ ನಡೆಯಿತು. ಇದಕ್ಕೂ ಮೊದಲು ಯಕ್ಷಗಾನ ಸಾಹಿತ್ಯದ ಆಳ, ವಿಸ್ತಾರ ಹಾಗೂ ವೈಶಿಷ್ಟ್ಯದ ಕುರಿತು ಪ್ರೊ.ಎಂ.ಎಲ್. ಸಾಮಗ, ಶ್ರೀಧರ ಡಿ.ಎಸ್., ಗಿಂಡಿಮನೆ ಮೃತ್ಯುಂಜಯ, ಆನಂದರಾಮ ಉಪಾಧ್ಯ, ರವಿ ಮಡೋಡಿ, ಮಹಾಬಲೇಶ್ವರ ಭಟ್ಟ ಇಟಗಿ, ಅಜಿತ್ ಕಾರಂತ ಹಾಗೂ ಅಶ್ವಿನಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.