ADVERTISEMENT

ರಸ್ತೆಯಲ್ಲೇ ಕಸದ ವಾಹನಗಳು

​ಪ್ರಜಾವಾಣಿ ವಾರ್ತೆ
Published 12 ಜೂನ್ 2019, 19:17 IST
Last Updated 12 ಜೂನ್ 2019, 19:17 IST
ಬಳ್ಳಾರಿ ಮುಖ್ಯರಸ್ತೆ ಬ್ಯಾಟರಾಯನಪುರದ ಸರ್ವಿಸ್ ರಸ್ತೆಯಲ್ಲಿ ಠಿಕಾಣಿ ಹೂಡಿರುವ ಕಸದ ವಾಹನಗಳು
ಬಳ್ಳಾರಿ ಮುಖ್ಯರಸ್ತೆ ಬ್ಯಾಟರಾಯನಪುರದ ಸರ್ವಿಸ್ ರಸ್ತೆಯಲ್ಲಿ ಠಿಕಾಣಿ ಹೂಡಿರುವ ಕಸದ ವಾಹನಗಳು   

ಯಲಹಂಕ: ಬ್ಯಾಟರಾಯನಪುರ ವಾರ್ಡ್‌ ವ್ಯಾಪ್ತಿಯ ಬ್ಯಾಟರಾಯನಪುರ, ಜಕ್ಕೂರು ಹಾಗೂ ಜಕ್ಕೂರು ಬಡಾವಣೆಯ ಮುಖ್ಯ ರಸ್ತೆಗಳಲ್ಲಿ ಕಸದ ರಾಶಿ ಹಾಗೂ ಕಸದ ಗಾಡಿಗಳ ನಿಲುಗಡೆಯಿಂದ ಸಾರ್ವಜನಿಕರು ಪ್ರತಿನಿತ್ಯ ತೊಂದರೆ ಅನುಭವಿಸಬೇಕಾಗಿದೆ.

ಬಳ್ಳಾರಿ ಮುಖ್ಯರಸ್ತೆ ಬ್ಯಾಟರಾಯನಪುರ ಸಿಗ್ನಲ್ ಬಳಿ ಸರ್ವಿಸ್ ರಸ್ತೆಯಲ್ಲಿ ಬಿಬಿಎಂಪಿ ಕಸದ ವಾಹನಗಳ ನಿಲುಗಡೆಯಿಂದಾಗಿ ದುರ್ವಾಸನೆ ಬರುತ್ತಿದೆ. ಇದರಿಂದಾಗಿ, ಈ ರಸ್ತೆಯಲ್ಲಿ ನಿತ್ಯ ಸಂಚರಿಸುವ ವಾಹನ ಸವಾರರು ಮತ್ತು ಪಾದಚಾರಿಗಳು ಕಿರಿಕಿರಿ ಅನುಭವಿಸುವಂತಾಗಿದೆ. ಸಿಗ್ನಲ್ ಬಳಿ ವಾಹನಗಳನ್ನು ನಿಲ್ಲಿಸಬೇಕಾದ ಸಂದರ್ಭದಲ್ಲಿಯಂತೂ ವಾಹನ ಸವಾರರಿಗೆ ಉಸಿರು ಬಿಗಿಹಿಡಿದು ಕಾಯಬೇಕಾದ ಸ್ಥಿತಿ ಎದುರಾಗಿದೆ ಎಂದು ಸ್ಥಳೀಯ ನಿವಾಸಿ ವೆಂಕಟೇಶ್ ಹೇಳಿದರು.

ಕಸದ ಗಾಡಿಗಳು ಠಿಕಾಣಿ ಹೂಡಿರುವ ಸ್ಥಳದಿಂದ 30 ಮೀಟರ್ ದೂರದಲ್ಲಿ ಯಲಹಂಕ ವಲಯ ಬಿಬಿಎಂಪಿ ಕಚೇರಿಯೂ ಇದ್ದು, ಸಿಬ್ಬಂದಿ ಪ್ರತಿನಿತ್ಯ ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದರೂ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಯ ಕಡೆ ಲಕ್ಷ್ಯ ವಹಿಸದಿರುವುದು ಅವರ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ ಎಂದು ಆರೋಪಿಸಿದ ಅವರು, ‘ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನಹರಿಸಿ, ಕಸದ ವಾಹನಗಳನ್ನು ಇಲ್ಲಿಂದ ಸ್ಥಳಾಂತರಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಜಕ್ಕೂರು-ಅಮೃತಹಳ್ಳಿ ಮುಖ್ಯರಸ್ತೆಯ ಸೆಂಚುರಿ ಅಪಾರ್ಟ್‌ಮೆಂಟ್ ಸಮುಚ್ಚಯದ ಮುಂಭಾಗದ ರಸ್ತೆ ಬದಿಯಲ್ಲಿ ಬಹಳ ದಿನಗಳಿಂದ ಕಸದ ರಾಶಿ ಹರಡಿರುವುದರಿಂದ ಪ್ರತಿನಿತ್ಯ ತೊಂದರೆ ಆಗುತ್ತಿದೆ. ಇತ್ತೀಚೆಗೆ ಸುರಿದ ಮಳೆಯಿಂದ ತ್ಯಾಜ್ಯ ಕೊಳೆತು, ಸಮಸ್ಯೆ ಮತ್ತಷ್ಟು ಬಿಗಡಾಯಿಸಿದ್ದು, ಸೊಳ್ಳೆಗಳ ಕಾಟವೂ ಹೆಚ್ಚಾಗಿದೆ ಎಂದು ನವ್ಯನಗರ ನಿವಾಸಿ ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.