ADVERTISEMENT

ಯಶವಂತಪುರ ಮೇಲ್ಸೇತುವೆ ತಿರುವು ದೋಷಪೂರಿತ

ವಾಹನಗಳ ವೇಗ ಮಿತಿಗೊಳಿಸಿ: ಐಐಎಸ್ಸಿ ಶಿಫಾರಸು

​ಪ್ರಜಾವಾಣಿ ವಾರ್ತೆ
Published 6 ಮೇ 2019, 19:28 IST
Last Updated 6 ಮೇ 2019, 19:28 IST
ಯಶವಂತಪುರದ ಪಂಡಿತ್‌ ದೀನದಯಾಳ್‌ ಮೇಲ್ಸೇತುವೆ ನೋಟ
ಯಶವಂತಪುರದ ಪಂಡಿತ್‌ ದೀನದಯಾಳ್‌ ಮೇಲ್ಸೇತುವೆ ನೋಟ   

ಬೆಂಗಳೂರು: ಯಶವಂತಪುರದ ಪಂಡಿತ್‌ ದೀನದಯಾಳ್‌ ಮೇಲ್ಸೇತುವೆಯಲ್ಲಿ ರಸ್ತೆ 90 ಡಿಗ್ರಿಯಷ್ಟು ತಿರುವು ಹೊಂದಿರುವುದು ಹಾಗೂ ಈ ತಿರುವಿನ ಬಳಿ ರಸ್ತೆಯಲ್ಲಿ ಸೂಪರ್‌ ಎಲಿವೇಷನ್‌ (ರಸ್ತೆಯ ಒಂದು ಪಾರ್ಶ್ವವು ಇನ್ನೊಂದಕ್ಕಿಂತ ಸ್ವಲ್ಪ ಎತ್ತರ ಇರುವಂತಹ ರಸ್ತೆ ವಿನ್ಯಾಸ) ಇಲ್ಲದಿರುವುದರಿಂದ ಇಲ್ಲಿ ಪದೇ ಪದೇ ಅಪಘಾತ ಸಂಭವಿಸುತ್ತಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಅಧ್ಯಯನ ವರದಿ ತಿಳಿಸಿದೆ.

ನಿಧಾನಗತಿಯ ಸಂಚಾರಕ್ಕೆ ಅನುಕೂಲವಾಗುವಂತೆ ಈ ಮೇಲ್ಸೇತುವೆಯನ್ನು ವಿನ್ಯಾಸಗೊಳಿಸಲಾಗಿತ್ತು. ಆದರೆ, ವಾಹನ ದಟ್ಟಣೆ ಕಡಿಮೆ ಇರುವಾಗ ವೇಗವಾಗಿ ಸಾಗುವ ವಾಹನಗಳು ಚಾಲಕನ ನಿಯಂತ್ರಣ ಕಳೆದುಕೊಂಡು ಇಲ್ಲಿ ಅಪಘಾತಕ್ಕೀಡಾಗುತ್ತಿದ್ದವು.ಅನೇಕ ವಾಹನ ಸವಾರರು ಪ್ರಾಣವನ್ನೂ ಕಳೆದುಕೊಂಡಿದ್ದರು.

ಹೊರೆ ಹೊತ್ತ ಭಾರಿ ವಾಹನಗಳು ವೇಗವಾಗಿ ಸಾಗಿ ಬರುವಾಗ ತಿರುವಿನಲ್ಲಿ ರಸ್ತೆ ಅಂಚಿನಿಂದ ಹೊರಕ್ಕೆ ಚಲಿಸುತ್ತಿದ್ದವು. ಇತ್ತೀಚೆಗೆ ಇಲ್ಲಿ ಅಣಬೆ ಸಾಗಿಸುತ್ತಿದ್ದ ಲಾರಿ ಮೇಲ್ಸೇತುವೆಯಿಂದ ಕೆಳಗೆ ಉರುಳಿಬಿದ್ದು ಚಾಲಕ ಸೇರಿ ಇಬ್ಬರು ಮೃತಪಟ್ಟಿದ್ದರು. ಪದೇ ಪದೇ ಅಪಘಾತ ಸಂಭವಿಸುತ್ತಿದ್ದ ಹಿನ್ನೆಲೆಯಲ್ಲಿ ಐಐಎಸ್ಸಿ ಸಾರಿಗೆ ವ್ಯವಸ್ಥೆ ಎಂಜಿನಿಯರಿಂಗ್‌ ವಿಭಾಗದ ಸಹಪ್ರಾಧ್ಯಾಪಕ ಪ್ರೊ.ಆಶಿಶ್‌ ವರ್ಮ ನೇತೃತ್ವದ ತಂಡ ಈ ಮೇಲ್ಸೇತುವೆಯ ಅಧ್ಯಯನ ಕೈಗೊಂಡಿತ್ತು.

ADVERTISEMENT

ಈ ರಸ್ತೆಯ ವಿನ್ಯಾಸದಲ್ಲಿ ದೋಷವಿರುವುದನ್ನು ಗುರುತಿಸಿರುವ ವಿಜ್ಞಾನಿಗಳು, ‘ಇಲ್ಲಿ ರಸ್ತೆಯಲ್ಲಿ ಏರು ಹಾಗೂ ಅಡ್ಡ ತಿರುವು ಒಟ್ಟೊಟ್ಟಿಗೆ ಇದೆ. ಇಂತಹ ಕಡೆ ರಸ್ತೆಯಲ್ಲಿ ಸೂಪರ್‌ ಎಲಿವೇಷನ್‌ ವ್ಯವಸ್ಥೆಗೊಳಿಸದಿದ್ದರೆ ವೇಗವಾಗಿ ಸಾಗಿ ಬರುವ ವಾಹನಗಳು ನಿಯಂತ್ರಣ ಕಳೆದುಕೊಳ್ಳುತ್ತವೆ. ಹಾಗಾಗಿ ಅಪಘಾತ ನಿಯಂತ್ರಿಸಬೇಕಾದರೆ ಇಲ್ಲಿ ವಾಹನಗಳ ವೇಗದ ಮಿತಿಯನ್ನು ಗಂಟೆಗೆ 30 ಕಿಲೋ ಮೀಟರ್‌ಗೆ ಸೀಮಿತಗೊಳಿಸಬೇಕು’ ಎಂದು ಶಿಫಾರಸು ಮಾಡಿದ್ದಾರೆ.

ಈ ಮೇಲ್ಸೇತುವೆ ಆರಂಭವಾಗುವಲ್ಲಿ ಹಾಗೂ ಅಂತ್ಯವಾಗುವಲ್ಲಿವಾಹನಗಳ ವೇಗ ನಿಯಂತ್ರಣಕ್ಕೆ ರಸ್ತೆಯುಬ್ಬುಗಳನ್ನು (ರಂಬಲ್‌ ಸ್ಟ್ರಿಪ್‌) ಅಳವಡಿಸಬೇಕು. ಈ ರಸ್ತೆಯಲ್ಲಿ ವಾಹನ ಚಾಲಕರಿಗೆ ಕಾಣಿಸುವಂತೆ ರಸ್ತೆ ಸುರಕ್ಷತಾ ಸಂಕೇತಗಳನ್ನೂ ಅಳವಡಿಸಬೇಕು. ಭಾರಿ ವಾಹನಗಳು ಮೇಲ್ಸೇತುವೆ ಬಳಸುವುದನ್ನು ತಡೆಯಬೇಕು ಎಂದೂ ವಿಜ್ಞಾನಿಗಳು ಶಿಫಾರಸು ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.