ADVERTISEMENT

ಬಿಜೆಪಿಯಲ್ಲಿ ಯತ್ನಾಳ್‌ ಗೊಡ್ಡು ಹಸು: ಕರವೇ

ಕರವೇಯನ್ನು ಕಳ್ಳರ ರಕ್ಷಣಾ ವೇದಿಕೆ ಎಂದಿದ್ದಕ್ಕೆ ತಿರುಗೇಟು

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 14:58 IST
Last Updated 3 ಡಿಸೆಂಬರ್ 2020, 14:58 IST

ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆಯನ್ನು ಕಳ್ಳರ ರಕ್ಷಣಾ ವೇದಿಕೆ ಎಂದು ಟೀಕಿಸಿರುವ ಬಿಜೆಪಿ ಮುಖಂಡ ಬಸನ ಗೌಡ ಪಾಟೀಲ ಯತ್ನಾಳ್‌ ಅವರಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿರುವ ಕರವೇ ‘ಯತ್ನಾಳ್‌ ಅವರು ಬಿಜೆಪಿ ಪಾಲಿಗೆ ಗೊಡ್ಡುಹಸು’ ಎಂದು ವ್ಯಂಗ್ಯವಾಡಿದೆ.

ಯತ್ನಾಳ್‌ ಹೇಳಿಕೆ ಖಂಡಿಸಿರುವ ಕರವೇ ಅಧ್ಯಕ್ಷ ಅಧ್ಯಕ್ಷ ಟಿ.ಎ.ನಾರಾಯಣಗೌಡ, ‘ಯತ್ನಾಳ್‌ ಅವರು ಮತ್ತೆ ಬಾಯಿಹರುಕತನ ಪ್ರದರ್ಶಿಸಿದ್ದಾರೆ. ಈ ಕಾರಣಕ್ಕಾಗಿಯೇ ಅವರನ್ನು ಬಿಜೆಪಿಯವರೇ ಮೂಲೆಗುಂಪು ಮಾಡಿದ್ದಾರೆ. ಮಂತ್ರಿಯಾಗುವುದಕ್ಕೆ ಬ್ಲಾಕ್ ಮೇಲ್ ತಂತ್ರ ಅನುಸರಿಸುವ ಯತ್ನಾಳ್ ಸುದ್ದಿಯಲ್ಲಿ ಇರಲು ಇಂತಹ ಹೇಳಿಕೆ ನೀಡುತ್ತಾರೆ. ಆಕಾಶಕ್ಕೆ ಉಗುಳಿದರೆ ಅದು ಅವರ ಮೇಲೆಯೇ ಬೀಳುತ್ತದೆ.ಯಾರು ಕಳ್ಳರು, ಯಾರು ಸುಳ್ಳರು ಎಂಬುದನ್ನು ಕನ್ನಡ ಹೋರಾಟಗಾರರು ಜನರೆದುರು ತೆರೆದಿಡಲಿದ್ದಾರೆ’ ಎಂದು ಹೇಳಿದ್ದಾರೆ.

‘ಕರವೇಯಲ್ಲಿ ಸಾಬರು ಇದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ. ನಮ್ಮ ಸಂಘಟನೆಯಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಬೌದ್ಧರಾದಿಯಾಗಿ ಎಲ್ಲ ಧರ್ಮದವರೂ ಇದ್ದಾರೆ. ಸಂವಿಧಾನವೂ ಎಲ್ಲ ಭಾರತೀಯರೂ ಸಮಾನರೆಂದು ಹೇಳುತ್ತದೆ. ನಮಗೆ ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು. ಈ ಬಗ್ಗೆ ನಮಗೆ ಹೆಮ್ಮೆ ಇದೆ. ನಾವು ಯತ್ನಾಳ್‌ ಅವರಂತೆ ಧರ್ಮ-ಧರ್ಮಗಳ ನಡುವೆ ದ್ವೇಷ ಹರಡಿ, ಕೋಮುಗಲಭೆ ಎಬ್ಬಿಸಿ ಬೇಳೆ ಬೇಯಿಸಿಕೊಳ್ಳುವುದಿಲ್ಲ’ ಎಂದು ಹರಿಹಾಯ್ದರು.

ADVERTISEMENT

‘ಧರ್ಮ-ಧರ್ಮಗಳ ನಡುವೆ ಜಗಳ ಹಚ್ಚಿದ ನಂತರ, ಕನ್ನಡಿಗರ ವಿರುದ್ಧ ಮರಾಠಿಗರನ್ನು ಎತ್ತಿಕಟ್ಟುವ ಅಪಾಯಕಾರಿ ಆಟವನ್ನು ಯತ್ನಾಳ್ ಆಡುತ್ತಿದ್ದಾರೆ. ಇದು ಅವರಿಗೆ ತಿರುಗುಬಾಣವಾಗುತ್ತದೆ. ರಾಜ್ಯದಲ್ಲಿರುವ ಮರಾಠಿಗರು, ಕನ್ನಡಿಗರೊಂದಿಗೆ ಅನ್ಯೋನ್ಯವಾಗಿದ್ದಾರೆ. ಯತ್ನಾಳ್ ಕುತಂತ್ರ ಫಲ ಕೊಡುವುದಿಲ್ಲ’ ಎಂದರು.

‘ಅವರಿಗೆ ನಿಜಕ್ಕೂ ಜನರ ಪರವಾದ ಕಾಳಜಿ ಇದ್ದರೆ, ತಮ್ಮದೇ ಜಿಲ್ಲೆ ವಿಜಯಪುರದ ನೆರೆ ಸಂತ್ರಸ್ತರ ಜೊತೆ ನಿಲ್ಲಲಿ. ನೆರೆ ಪರಿಹಾರ ನೀಡದ ಕೇಂದ್ರ ಸರ್ಕಾರವನ್ನು ಪ್ರಶ್ನಿಸಲಿ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋರಾಟ ರೂಪಿಸಲಿ’ ಎಂದು ಸವಾಲು ಹಾಕಿದರು.

‘ನಾಡಿನ ಸಾಕ್ಷಿಪ್ರಜ್ಞೆಯಂತಿರುವ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಕುರಿತೂ ಕೀಳಾಗಿ ಮಾತನಾಡಿದ್ದ ಯತ್ನಾಳ್‌ ಸಂಸ್ಕಾರವನ್ನು ತೋರಿಸುತ್ತದೆ. ಸ್ವಾತಂತ್ರ್ಯ ಹೋರಾಟಗಾರರನ್ನು‌ ನಿಂದಿಸುವ ಇವರು ಯಾವ ಸೀಮೆಯ ದೇಶಭಕ್ತ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.