ADVERTISEMENT

ಯಲಹಂಕ| ನಿರ್ಮಾಣ ಹಂತದ ಕಟ್ಟಡದ ಬಳಿ ಮಣ್ಣು ಕುಸಿತ ಘಟನೆ: ಮತ್ತೊಬ್ಬ ಕಾರ್ಮಿಕ ಸಾವು

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 14:34 IST
Last Updated 2 ಸೆಪ್ಟೆಂಬರ್ 2025, 14:34 IST
<div class="paragraphs"><p>ಸಾವು</p></div>

ಸಾವು

   

ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಯಲಹಂಕದ ವೆಂಕಟಾಲದಲ್ಲಿ ನಿರ್ಮಾಣ ಹಂತದ ಕಟ್ಟಡದ ಬಳಿ ಸೋಮವಾರ ಸಂಜೆ ಮಣ್ಣು ಕುಸಿದು ಸಂಭವಿಸಿದ ದುರಂತದಲ್ಲಿ ಮತ್ತೊಬ್ಬ ಕಾರ್ಮಿಕ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ 2ಕ್ಕೆ ಏರಿಕೆಯಾಗಿದೆ.

ADVERTISEMENT

ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಮಧುಸೂದನ್ ರೆಡ್ಡಿ (58) ಅವರು ಮಂಗಳವಾರ ಮೃತಪಟ್ಟಿದ್ದಾರೆ.

ಕಾರ್ಮಿಕರು ಕಟ್ಟಡದ ಅಡಿಪಾಯಕ್ಕೆ ಗುಂಡಿ ತೆಗೆಯುತ್ತಿದ್ದರು. ಸೋಮವಾರ ಸಂಜೆ ಧಾರಾಕಾರ ಮಳೆ ಸುರಿದಿದ್ದರಿಂದ ಗುಂಡಿಯಲ್ಲಿ ಮಳೆ ನೀರು ತುಂಬಿಕೊಂಡು ಮಣ್ಣು ಕುಸಿದಿತ್ತು. ಶಿವು ಮತ್ತು ಮಧುಸೂದನ್ ರೆಡ್ಡಿ ಅವರು ಹೊರಕ್ಕೆ ಬರಲು ಸಾಧ್ಯವಾಗದೇ ಮಣ್ಣಿನ ಅಡಿ ಸಿಲುಕಿದ್ದರು. ಇತರೆ ಕಾರ್ಮಿಕರು ಸ್ಥಳೀಯರ ನೆರವಿನಿಂದ ಮಣ್ಣು ತೆರವುಗೊಳಿಸಲು ಯತ್ನಿಸಿದ್ದರು. ಶಿವು ಅವರು ಮಣ್ಣಿನ ಅಡಿ ಸಿಲುಕಿ ಮೃತಪಟ್ಟಿದ್ದರು. ಮಧುಸೂದನ್ ರೆಡ್ಡಿ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೇ ಅವರು ಮೃತಪಟ್ಟಿದ್ದಾರೆ ಎಂದು ಯಲಹಂಕ ಠಾಣೆ ಪೊಲೀಸರು ಹೇಳಿದರು.

ಮೃತ ಕಾರ್ಮಿಕರು ಆಂಧ್ರಪ್ರದೇಶ ಮೂಲದವರು. ವೆಂಕಟಾಲ ಬಡಾವಣೆಯಲ್ಲಿ ಶಿವು ಮತ್ತು ಕೊಂಡಪ್ಪ ಲೇಔಟ್‍ನಲ್ಲಿ  ಮಧುಸೂದನ್ ರೆಡ್ಡಿ ಅವರು ವಾಸವಾಗಿದ್ದರು. ಘಟನೆ ಸಂಬಂಧ ಕಟ್ಟಡ ನಿರ್ಮಾಣ ಸಂಸ್ಥೆಯ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಎಂಬೆಸ್ಸಿ ಕಂಪನಿ ಮಾಲೀಕ ಸೇರಿ 14 ಮಂದಿ ವಿರುದ್ಧ ಎಫ್‌ಐಆರ್

ಮಣ್ಣು ಕುಸಿದು ಕಾರ್ಮಿಕರಿಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಬೆಸ್ಸಿ ಕಂಪನಿ ಮಾಲೀಕ ಸೇರಿ 14 ಮಂದಿ ವಿರುದ್ಧ ಯಲಹಂಕ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಸಂದೀಪ್‌, ಕಿರಣ್, ಚಿರಂಜೀವಿ, ರೆಹಮಾನ್‌, ಜಗದೀಶ್‌, ರಾಜೇಶ್, ನರೇಂದ್ರ, ಅಂಕಿತ್‌, ಪ್ರಿಯಾಂಕ್‌ ಜೈನ್‌, ನಿರಂಜನ್‌ ಚೌಹಾಣ್‌, ಪ್ರಣವ್‌, ಶ್ರೀನಿವಾಸ್‌, ಶಿವಶಂಕರ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ಜೋಗಿ ಸರಸ್ವತಿ ಅವರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

‘ಸುರಕ್ಷತಾ ಉಪಕರಣಗಳನ್ನು ಅಳವಡಿಸಿಕೊಳ್ಳದೇ ಕಾಮಗಾರಿ ನಡೆಸಲಾಗುತ್ತಿತ್ತು. ಕಟ್ಟಡ ನಿರ್ಮಾಣಕ್ಕೆ ಹೆಚ್ಚು ಆಳದಲ್ಲಿ ಗುಂಡಿ ತೆಗೆದ ಪರಿಣಾಮ ಮಣ್ಣು ಕುಸಿಯಲು ಕಾರಣವಾಗಿದೆ. ಸಂಬಂಧಿಸಿದವರ ನಿರ್ಲಕ್ಷ್ಯ
ದಿಂದ ಘಟನೆ ನಡೆದಿದೆ. ಘಟನೆಯಲ್ಲಿ ಪತಿ ಶಿವು ಹಾಗೂ ಅವರ ಸ್ನೇಹಿತ ಮಧುಸೂದನ್ ರೆಡ್ಡಿ ಅವರು ಮೃತಪಟ್ಟಿದ್ದಾರೆ. ಇಬ್ಬರ ಸಾವಿಗೆ ಕಾರಣರಾದ ಕಂಪನಿ ಮಾಲೀಕ, ನಿರ್ದೇಶಕರು ಹಾಗೂ ಉಸ್ತುವಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು  ಜೋಗಿ ಸರಸ್ವತಿ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.