ಬೆಂಗಳೂರು: ಯಲಹಂಕ ಉಪ ನಗರ– ದೊಡ್ಡಬಳ್ಳಾಪುರ ಮುಖ್ಯರಸ್ತೆಯಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿಯನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಯಲಹಂಕ ಉಪನಗರ ವ್ಯಾಪ್ತಿಯಲ್ಲಿ ಮೇಜರ್ ಸಂದೀಪ್ ಉಣ್ಣಿಕೃಷ್ಣನ್ ಮುಖ್ಯರಸ್ತೆ ಬಳಿ ಪರಿಶೀಲಿಸಿ ಮಾತನಾಡಿದ ಅವರು, ‘ಪಾದಚಾರಿ ಮಾರ್ಗದಲ್ಲಿ ಕೆಲವೆಡೆ ಕುಸಿತವಾಗಿದ್ದು, ಅದರಿಂದ ನಾಗರಿಕರ ಓಡಾಟಕ್ಕೆ ಸಮಸ್ಯೆ ಆಗಲಿದೆ. ದುರಸ್ತಿ ಕಾರ್ಯ ಕೈಗೊಂಡು ಕೂಡಲೇ ಸರಿಪಡಿಸಬೇಕು’ ಎಂದು ಹೇಳಿದರು.
ಯಲಹಂಕ ಉಪನಗರ 16ನೇ ಬಿ ಅಡ್ಡರಸ್ತೆಯಲ್ಲಿ ಕೆಲವು ಅಂಗಡಿ ಮಾಲೀಕರು ಪಾದಚಾರಿ ಮಾರ್ಗದಲ್ಲಿ ತ್ಯಾಜ್ಯ ಬಿಸಾಡಿರುವುದನ್ನು ಗಮನಿಸಿ, ಅಂಗಡಿ ಮಾಲೀಕರಿಗೆ ದಂಡ ವಿಧಿಸುವಂತೆ ಮಾರ್ಷಲ್‌ಗಳಿಗೆ ನಿರ್ದೇಶನ ನೀಡಿದರು.
ಯಲಹಂಕ ಉಪನಗರ ಎ- ಸೆಕ್ಟರ್‌ನಲ್ಲಿರುವ 1ನೇ ಮುಖ್ಯರಸ್ತೆಯಲ್ಲಿ ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಿಸಲಾಗುತ್ತಿದ್ದು, ಕಟ್ಟಡ ತೆರವುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಯಲಹಂಕ ಉಪನಗರದಲ್ಲಿ ನಿರ್ಮಿಸಿರುವ ವಾಚ್ ಟವರ್, ಸೈಕಲ್ ಟ್ರ್ಯಾಕ್, ಕಾರ್ ಟವರ್, ಕನ್ನಡ ಅಕ್ಷರ ಮಾಲೆ ಹಾಗೂ ಇತರೆ ಆಲಂಕಾರಿಕ ದೀಪಗಳಿಗೆ ಸಂಬಂಧಿಸಿದಂತೆ ವಾರ್ಷಿಕ ನಿರ್ವಹಣೆಗೆ ಅಗತ್ಯವಿರುವ ಅನುದಾನಕ್ಕಾಗಿ ಪ್ರಸ್ತಾವ ಸಲ್ಲಿಸುವಂತೆ ಅಧಿಕಾರಿಗಳಿಗೆ ಹೇಳಿದರು.
ಯಲಹಂಕ ವಲಯ ಆಯುಕ್ತ ಕರೀಗೌಡ, ಜಂಟಿ ಆಯುಕ್ತ ಮೊಹ್ಮದ್ ನಯೀಮ್ ಮೊಮಿನ್, ಮುಖ್ಯ ಎಂಜಿನಿಯರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.