ADVERTISEMENT

ಮಾರಸಂದ್ರ: ಗ್ರಾಮಸಭೆಯಲ್ಲಿ ಸಮಸ್ಯೆಗಳ ಮಹಾಪೂರ

ಬೇಡಿಕೆಗಳ ಈಡೇರಿಕೆಗೆ ಗ್ರಾಮಸ್ಥರ ಒತ್ತಾಯ. 

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2023, 22:30 IST
Last Updated 4 ಆಗಸ್ಟ್ 2023, 22:30 IST
ಮಾರಸಂದ್ರ ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಅರಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಸಿ. ಶಶಿಕುಮಾರ್ ಮಾತನಾಡಿದರು. ಜಿಲ್ಲಾ ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಸತೀಶ್ ಕಡತನಮಲೆ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮುನಿಲಕ್ಷ್ಮಮ್ಮ, ಮಾಜಿ ಅಧ್ಯಕ್ಷ ಕೆ.ಆರ್. ತಿಮ್ಮೇಗೌಡ, ಪಿಡಿಒ ಜಿ.ಕೆ. ತಿಮ್ಮಯ್ಯ, ಕಾರ್ಯದರ್ಶಿ ಉಸ್ಮಾನ್ ಇದ್ದರು.
ಮಾರಸಂದ್ರ ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಅರಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಸಿ. ಶಶಿಕುಮಾರ್ ಮಾತನಾಡಿದರು. ಜಿಲ್ಲಾ ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಸತೀಶ್ ಕಡತನಮಲೆ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮುನಿಲಕ್ಷ್ಮಮ್ಮ, ಮಾಜಿ ಅಧ್ಯಕ್ಷ ಕೆ.ಆರ್. ತಿಮ್ಮೇಗೌಡ, ಪಿಡಿಒ ಜಿ.ಕೆ. ತಿಮ್ಮಯ್ಯ, ಕಾರ್ಯದರ್ಶಿ ಉಸ್ಮಾನ್ ಇದ್ದರು.   

ಯಲಹಂಕ: ಚರಂಡಿ ತೆರೆದುಕೊಂಡು ನಾಲ್ಕು ತಿಂಗಳಾದರೂ ಬಗೆಹರಿಯದ ಸಮಸ್ಯೆ, ಶಾಲಾ ಕಟ್ಟಡ ಶಿಥಿಲಗೊಂಡು ಕೊಠಡಿಯೊಳಗೆ ಸುರಿಯುತ್ತಿರುವ ಮಳೆನೀರು...

ಮಾರಸಂದ್ರ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಅರಕೆರೆ ಗ್ರಾಮಪಂಚಾಯಿತಿಯ 2023-24ನೇ ಸಾಲಿನ ಮೊದಲನೇ ಸುತ್ತಿನ ಗ್ರಾಮಸಭೆಯಲ್ಲಿ ಜನರು ಹಲವಾರು ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳ ಗಮನಸೆಳೆದು, ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

‘ನಮ್ಮ ಮನೆ ಪಕ್ಕದಲ್ಲಿ ಚರಂಡಿ ತೆರೆದುಕೊಂಡು ನಾಲ್ಕು ತಿಂಗಳಾದರೂ ಇದುವರೆಗೂ ಸರಿಪಡಿಸಿಲ್ಲ. ಇದರಿಂದ ಈ ಜಾಗದಲ್ಲಿ ನಡೆದಾಡಲು ಸಮಸ್ಯೆಯಾಗುತ್ತಿದೆ. ಅಲ್ಲದೆ ಇದೇ ರಸ್ತೆಯಲ್ಲಿ ಶಾಲಾಮಕ್ಕಳೂ ಸಂಚರಿಸುವುದರಿಂದ ತೊಂದರೆ ಅನುಭವಿಸಬೇಕಾಗಿದ್ದು, ದುರಸ್ತಿಗೊಳಿಸಲು ಇನ್ನೂ ಎಷ್ಟುದಿನ ಬೇಕು’ ಎಂದು ಮಾರಸಂದ್ರ ಗ್ರಾಮದ ಈಶ್ವರ ದೇವಸ್ಥಾನ ರಸ್ತೆಯ ನಿವಾಸಿ ಯಮುನ ಪ್ರಶ್ನಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಸಿ.ಶಶಿಕುಮಾರ್, ‘ಸದ್ಯಕ್ಕೆ ಸಿಮೆಂಟ್ ಪೈಪ್ ಅಳವಡಿಸಿ ನಡೆದಾಡಲು ವ್ಯವಸ್ಥೆ ಮಾಡಲಾಗಿದ್ದು, ಮುಂದಿನ ಕ್ರಿಯಾಯೋಜನೆಯಲ್ಲಿ ಈ ಕಾಮಗಾರಿಯನ್ನು ಸೇರಿಸಿಕೊಂಡು ಶಾಶ್ವತ ಪರಿಹಾರ ಒದಗಿಸಲಾಗುವುದು' ಎಂದು ಭರವಸೆ ನೀಡಿದರು.

‘ಮಾರಸಂದ್ರ ಗ್ರಾಮದಲ್ಲಿ ಸರ್ಕಾರಿ ಶಾಲಾಕಟ್ಟಡ ತೀರಾ ಹಳೆಯದಾಗಿ ಶಿಥಿಲಾವಸ್ಥೆಗೆ ತಲುಪಿದೆ. ಮಳೆಯಾದರೆ ಕಟ್ಟಡ ಸೋರುತ್ತಿರುವುದರಿಂದ ಮಕ್ಕಳು ತೊಂದರೆ ಅನುಭವಿಸಬೇಕಾಗಿದೆ. ಈ ವೇಳೆ ಮಕ್ಕಳನ್ನು ಹೊರಗೆ ಕೂರಿಸಿ ಪಾಠ ಹೇಳಬೇಕಾದ ಪರಿಸ್ಥಿತಿಯಿದ್ದು, ಕೂಡಲೇ ನೂತನ ಕಟ್ಟಡ ನಿರ್ಮಿಸಬೇಕು’ ಎಂದು ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಮುನಿರಾಜು ಮನವಿ ಮಾಡಿದರು.

‘ಗಾರ್ಮೆಂಟ್ಸ್‌ ಮತ್ತಿತರ ಕೂಲಿ ಕೆಲಸಗಳಿಗೆ ಹೋಗುವ ಜನರು ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ನಗರ ಪ್ರದೇಶಗಳಲ್ಲಿ ವಿತರಿಸುವಂತೆ ಸಂಜೆ ವೇಳೆ ಅಥವಾ ಭಾನುವಾರ ಪಡಿತರ ವಿತರಿಸಿದರೆ ಕೂಲಿಕಾರ್ಮಿಕರಿಗೆ ಅನುಕೂಲವಾಗುತ್ತದೆ’ ಎಂದು  ಚಂದ್ರಕಲಾ ಮನವಿ ಮಾಡಿದರು.

‘ಮಾರಸಂದ್ರ ಗ್ರಾಮದಲ್ಲಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರವನ್ನು ಸ್ಥಾಪಿಸಬೇಕು’ ಎಂದು ಸ್ಥಳೀಯ ನಿವಾಸಿ ರತ್ನ ಮನವಿ ಮಾಡಿದರು.

‘ಪಂಚಾಯಿತಿಯಲ್ಲಿ ಕಳೆದ 30 ತಿಂಗಳ ಹಿಂದೆ ಕೇವಲ ₹80 ಲಕ್ಷದಷ್ಟಿದ್ದ ಬಜೆಟ್‌ ಗಾತ್ರ, ಈಗ ₹5 ಕೋಟಿಗೆ ಏರಿಕೆಯಾಗಿದೆ. ವಿಶ್ವವಾಣಿ ಫೌಂಡೇಶನ್ ಹಾಗೂ ಪೀಪಲ್ ಟ್ರಸ್ಟ್ ವತಿಯಿಂದ ಮಹಿಳೆಯರಿಗೆ ಹೊಲಿಗೆಯಂತ್ರ, ಬ್ಯೂಟೀಶಿಯನ್ ತರಬೇತಿ ನೀಡಲಾಗಿದೆ. ಎಂದು ಪಂಚಾಯಿತಿ ಅಧ್ಯಕ್ಷ ಬಿ.ಸಿ.ಶಶಿ ಕುಮಾರ್ ತಿಳಿಸಿದರು.

ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ‘ಅರಕೆರೆ ಪಂಚಾಯಿತಿಯು ಒಂದೆರೆಡು ವರ್ಷಗಳಲ್ಲಿ ಹಲವು ಜನಪರ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಮೂಲಕ ಇತರೆ ಪಂಚಾಯಿತಿಗಳಿಗೆ ಮಾದರಿಯಾಗಿದೆ. ತೆರಿಗೆ ಸಂಗ್ರಹ, ಕೆರೆಗಳ ಅಭಿವೃದ್ಧಿ, ಸಸಿ ನೆಡುವ ಕಾರ್ಯ ಸೇರಿ ಮೂಲಸೌಕರ್ಯಗಳ ಸಮರ್ಪಕ ನಿರ್ವಹಣೆ ಮಾಡಲಾಗಿದೆ. ಆಧುನಿಕ ಘನತ್ಯಾಜ್ಯ ವಿಂಗಡಣಾ ಘಟಕ ಸ್ಥಾಪಿಸುವ ಮೂಲಕ ಕಸದ ಸಮಸ್ಯೆಗೆ ಸೂಕ್ತಪರಿಹಾರ ಕಲ್ಪಿಸಿ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.