ಯಲಹಂಕ: ‘ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ಕಲಿಯುವ ಅವಧಿಯಲ್ಲಿ ಲಭ್ಯವಾಗುವ ಪ್ರತಿ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು, ಪರಿಪೂರ್ಣ ವ್ಯಕ್ತಿಗಳಾಗಬೇಕು’ ಎಂದು ಡಬ್ಲ್ಯು.ಎಲ್.ಡಿ.ಡಿ ಪ್ರೈ. ಲಿಮಿಟೆಡ್ ಕಂಪನಿಯ ಕಾರ್ಯನಿರ್ವಹಣಾಧಿಕಾರಿ ಅರಿಹಂತ್ ಜೈನ್ ಸಲಹೆ ನೀಡಿದರು.
ರೇವಾ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ 2025-26ನೇ ಶೈಕ್ಷಣಿಕ ಸಾಲಿನ ತಾಂತ್ರಿಕೇತರ ಕಾರ್ಯಕ್ರಮದ ನೂತನ ವಿದ್ಯಾರ್ಥಿಗಳಿಗೆ ಸ್ವಾಗತಕೋರುವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪದವಿ ಪಡೆದ ನಂತರ ನಿಮ್ಮೊಂದಿಗೆ ನಿಜವಾಗಿ ಉಳಿಯುವುದು ಅನುಭವ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ಉತ್ಸವಗಳು, ಸ್ಪರ್ಧೆಗಳು ಹಾಗೂ ಬಹು ಇಂಟರ್ನ್‌ಷಿಪ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸ್ಪರ್ಧಾತ್ಮಕ ಜಗತ್ತಿನಲ್ಲಿ ಎದುರಾಗುವ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸಲು ಸಜ್ಜಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿ ಪಿ.ಶ್ಯಾಮರಾಜು ಮಾತನಾಡಿ, ‘ವಿಶ್ವವಿದ್ಯಾಲಯವು ಪ್ರತಿಭೆಯನ್ನು ಪೋಷಿಸುವ ಮತ್ತು ನಾವಿನ್ಯವನ್ನು ಉತ್ತೇಜಿಸುವ ಕಾರ್ಯವನ್ನು ಮುಂದುವರಿಸುತ್ತಿದೆ’ ಎಂದರು.
ನೂತನ ವಿದ್ಯಾರ್ಥಿಗಳು ಪರಿಸರ ಕಾಳಜಿಯ ಪ್ರತಿಜ್ಞೆ ಸ್ವೀಕರಿಸಿದರು. ನಂತರ ಪ್ರತಿ ವಿದ್ಯಾರ್ಥಿಯು ‘ಒಬ್ಬ ವಿದ್ಯಾರ್ಥಿ-ಒಂದು ಮರ’ ಎಂಬ ತತ್ವದಡಿ ಒಂದೊಂದು ಸಸಿಯನ್ನು ನೆಟ್ಟರು.
ಮಾರ್ವಾಡಿ ವಿಶ್ವವಿದ್ಯಾಲಯದ ಟ್ರಸ್ಟಿ ಎಂ.ಡಿ.ಜೀತ್ ಮಾರ್ವಾಡಿ, ರೇವಾ ವಿಶ್ವವಿದ್ಯಾಲಯದ ಕುಲಪತಿ ಸಂಜಯ್.ಆರ್ ಚಟ್ನಿಸ್, ಕುಲಸಚಿವ ಕೆ.ಎಸ್.ನಾರಾಯಣಸ್ವಾಮಿ, ಬ್ಯುಸಿನೆಸ್ ಸ್ಕೂಲ್‌ನ ಡೀನ್ ಶುಭ.ಎ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.