ADVERTISEMENT

ನಮ್ಮ ಮೆಟ್ರೊ | ಹಳದಿ ಮಾರ್ಗ: ಡಿ.22ರಿಂದ 6ನೇ ರೈಲು ಸಂಚಾರ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 23:30 IST
Last Updated 12 ಡಿಸೆಂಬರ್ 2025, 23:30 IST
ನಮ್ಮ ಮೆಟ್ರೊ ಹಳದಿ ಮಾರ್ಗದ ರೈಲು
ನಮ್ಮ ಮೆಟ್ರೊ ಹಳದಿ ಮಾರ್ಗದ ರೈಲು   

ಬೆಂಗಳೂರು: ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ಡಿ.22ರಿಂದ 6ನೇ ರೈಲು ಸಂಚರಿಸಲಿದೆ. ಸದ್ಯ 15 ನಿಮಿಷಕ್ಕೊಂದು ರೈಲು ಸಂಚರಿಸುತ್ತಿದ್ದು, ಈ ಅವಧಿ 12 ನಿಮಿಷಕ್ಕೆ ಇಳಿಯಲಿದೆ.

ಪಶ್ಚಿಮ ಬಂಗಾಳದ ಟಿಟಾಗರ್‌ ರೈಲ್ ಸಿಸ್ಟಂ ಲಿಮಿಟೆಡ್‌ (ಟಿಆರ್‌ಎಸ್‌ಎಲ್‌) ಕಾರ್ಯಾಗಾರದಿಂದ ನವೆಂಬರ್‌ ಕೊನೇ ವಾರದಲ್ಲಿ ರವಾನೆಯಾಗಿದ್ದ ಆರನೇ ರೈಲಿನ ಬೋಗಿಗಳು ಡಿಸೆಂಬರ್‌ ಮೊದಲ ವಾರದಲ್ಲಿ ಹೆಬ್ಬಗೋಡಿ ಮೆಟ್ರೊ ಡಿಪೊಗೆ ತಲುಪಿದ್ದವು. ಇನ್‌ಸ್ಪೆಕ್ಷನ್‌ ಬೇ ಲೈನ್‌ನಲ್ಲಿ ಆರಂಭಿಕ ಪರೀಕ್ಷೆಗಳು ನಡೆದಿದ್ದವು. ಬಳಿಕ ರಾತ್ರಿ ವೇಳೆ ಪರೀಕ್ಷಾರ್ಥ ಸಂಚಾರ ನಡೆಸಲಾಗಿತ್ತು.

19.15 ಕಿ.ಮೀ. ದೂರದ ಆರ್‌.ವಿ. ರಸ್ತೆ–ಡೆಲ್ಟಾ ಎಲೆಕ್ಟ್ರಾನಿಕ್ಸ್‌ ಬೊಮ್ಮಸಂದ್ರ ನಡುವೆ ಆಗಸ್ಟ್‌ 11ಕ್ಕೆ ಆರಂಭವಾಗಿರುವ ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ಸದ್ಯ ಐದು ರೈಲುಗಳು ಪ್ರತಿ 15 ನಿಮಿಷಕ್ಕೊಂದು ಟ್ರಿಪ್‌ನಂತೆ ಸಂಚರಿಸುತ್ತಿವೆ. ಐಟಿ ಹಬ್‌ ಆಗಿರುವ ಎಲೆಕ್ಟ್ರಾನಿಕ್ ಸಿಟಿಯನ್ನು ಈ ಮಾರ್ಗ ಹಾದು ಹೋಗುತ್ತಿರುವುದರಿಂದ ನಿರೀಕ್ಷೆ ಮೀರಿ ಪ್ರಯಾಣಿಕರು ಮೆಟ್ರೊದಲ್ಲಿ ಸಂಚರಿಸುತ್ತಿದ್ದಾರೆ.

ADVERTISEMENT

ಚೀನಾದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕೋ ಲಿಮಿಟೆಡ್‌ನೊಂದಿಗೆ ಉಪ-ಒಪ್ಪಂದದ ಅಡಿಯಲ್ಲಿ ಪಶ್ಚಿಮ ಬಂಗಾಳದ ಟಿಟಾಗರ್ ರೈಲ್ ಸಿಸ್ಟಮ್ಸ್ ಲಿಮಿಟೆಡ್‌ನಿಂದ (ಟಿಆರ್‌ಎಸ್‌ಎಲ್) ರೈಲು ಕೋಚ್‌ಗಳು ಪೂರೈಕೆಯಾಗುತ್ತಿವೆ. ಹಳದಿ ಮಾರ್ಗಕ್ಕೆ 15 ರೈಲುಗಳು ಸೇರಿದಂತೆ ಒಟ್ಟು 36 ರೈಲು ಕೋಚ್‌ ಸೆಟ್‌ಗಳನ್ನು ₹1,578 ಕೋಟಿ ವೆಚ್ಚದಲ್ಲಿ ಟಿಆರ್‌ಎಸ್‌ಎಲ್  ಪೂರೈಸುತ್ತಿದೆ.

ಟಿಟಾಗರ್‌ನಿಂದ ಒಟ್ಟು 15 ರೈಲುಗಳು ಹಾಗೂ ಬಿಇಎಂಎಲ್‌ನಿಂದ ಹೆಚ್ಚುವರಿಯಾಗಿ 6 ರೈಲುಗಳು ಹಳದಿ ಮಾರ್ಗಕ್ಕೆ ಪೂರೈಕೆಯಾಗಲಿವೆ. ರೈಲುಗಳ ಪೂರೈಕೆಯಾಗುತ್ತಿದ್ದಂತೆ ಟ್ರಿಪ್‌ಗಳ ನಡುವಿನ ಅಂತರ ಕಡಿಮೆಯಾಗಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.