ADVERTISEMENT

‘ಗಾಂಜಾ ನಶೆಯಲ್ಲಿ ಯುವಕರು’

‘ಮಾಸಿಕ ಜನಸಂಪರ್ಕ ಸಭೆ’: ವೈಯಾಲಿಕಾವಲ್‌ ಠಾಣೆ ವ್ಯಾಪ್ತಿಯ ಜನರ ದೂರು

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 21:31 IST
Last Updated 23 ಅಕ್ಟೋಬರ್ 2021, 21:31 IST
ಕಮಲ್ ಪಂತ್
ಕಮಲ್ ಪಂತ್   

ಬೆಂಗಳೂರು: ‘ಸಂಚಾರ ಪೊಲೀಸರು ನಿಯಮಬಾಹಿರವಾಗಿ ವಾಹನಗಳ ಟೋಯಿಂಗ್ ಮಾಡುತ್ತಾರೆ. ಕೆಲ ಯುವಕರು ಗಾಂಜಾ ನಶೆ ಏರಿಸಿಕೊಂಡು ಜನರಿಗೆ ಕಿರಿಕಿರಿಯನ್ನುಂಟು ಮಾಡುತ್ತಾರೆ. ಕೆಲ ಕಿಡಿಗೇಡಿಗಳು, ಯುವತಿಯರನ್ನು ಚುಡಾಯಿಸುತ್ತಾರೆ...' ಇವು ವೈಯಾಲಿಕಾವಲ್ ಠಾಣೆ ವ್ಯಾಪ್ತಿಯ ಜನರ ದೂರುಗಳು.

ನಗರದ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರು ಶನಿವಾರ ನಡೆಸಿದ ‘ಮಾಸಿಕ ಜನಸಂಪರ್ಕ ಸಭೆ’ಯಲ್ಲಿ ಪಾಲ್ಗೊಂಡಿದ್ದ ಜನ, ಸಮಸ್ಯೆಗಳನ್ನು ಹೇಳಿಕೊಂಡರು.

ವಾಹನ ಟೋಯಿಂಗ್‌ ವೇಳೆ ನಿಯಮ ಪಾಲಿಸದ ಬಗ್ಗೆ ಸಭೆಯಲ್ಲಿ ಗಮನ ಸೆಳೆದ ಮಹಿಳೆಯೊಬ್ಬರು, ‘ವಾಹನ ಟೋಯಿಂಗ್ ಮಾಡುವ ವೇಳೆ ಪೊಲೀಸರು, ಧ್ವನಿವರ್ಧಕದಲ್ಲಿ ನೋಂದಣಿ ಸಂಖ್ಯೆ ಕೂಗುವುದಿಲ್ಲ. ಇತ್ತೀಚೆಗಷ್ಟೇ ನನ್ನ ದ್ವಿಚಕ್ರ ವಾಹನವನ್ನು ನಿಯಮಬಾಹಿರವಾಗಿ ಟೋಯಿಂಗ್ ಮಾಡಿದ್ದರು’ ಎಂದರು.

ADVERTISEMENT

ಕಮಿಷನರ್, ‘ಟೋಯಿಂಗ್ ವೇಳೆ ನಿಯಮ ಉಲ್ಲಂಘಿಸುವ ಪೊಲೀಸರು ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ. ನಿರ್ದಿಷ್ಟ ಸಮಸ್ಯೆ ಇದ್ದರೆ, ದೂರು ನೀಡಬಹುದು. ಪರಿಶೀಲಿಸಲಾಗುವುದು’ ಎಂದರು.

ಇನ್ನೊಬ್ಬ ಮಹಿಳೆ, ‘ಠಾಣೆ ವ್ಯಾಪ್ತಿಯಲ್ಲಿ ಹೆಚ್ಚು ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಇದರಿಂದ ಅಪರಾಧಗಳಿಗೆ ಕಡಿವಾಣ ಹಾಕಬಹುದು’ ಎಂದರು.

ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್, ‘ಬಸ್ ಪ್ರಯಾಣಿಕರ ತಂಗು
ದಾಣ, ಶಾಲೆ–ಕಾಲೇಜು, ಜನರ ಹೆಚ್ಚು ಓಡಾಡುವ 48 ಸ್ಥಳಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ’ ಎಂದರು.

ವೃದ್ಧರೊಬ್ಬರು, ‘ಉದ್ಯಾನಗಳ ಬಳಿ ಸೇರುವ ಕೆಲ ಯುವಕರು, ಗಾಂಜಾ ನಶೆ ಏರಿಸಿಕೊಂಡು ವಿಚಿತ್ರವಾಗಿ ವರ್ತಿಸುತ್ತಾರೆ. ವಾಯುವಿಹಾರಿಗಳಿಗೆ ಕಿರಿಕಿರಿಯನ್ನುಂಟು ಮಾಡುತ್ತಾರೆ. ಕೆಲ ಕಿಡಿಗೇಡಿಗಳು, ಯುವತಿಯರನ್ನು ಚುಡಾಯಿಸುತ್ತಾರೆ’ ಎಂದು ದೂರಿದರು.

ಕಮಿಷನರ್, ‘ಇಂತಹ ದೂರುಗಳು ಪದೇ ಪದೇ ಬರುವಂತಹ ಸ್ಥಳಗಳಲ್ಲಿ ಗಸ್ತು ಹೆಚ್ಚಿಸಲಾಗುವುದು. ಗಾಂಜಾ ಸೇವಿಸುವವರನ್ನು ಪತ್ತೆ ಮಾಡಿ ಪ್ರಕರಣ ದಾಖಲಿಸಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.