ADVERTISEMENT

ಯುವಿಸಿಇಯಲ್ಲಿ ‘ಸಿಬಿಸಿಎಸ್’ ಜಾರಿ

ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಕೆ.ಆರ್.ವೇಣುಗೋಪಾಲ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2018, 19:36 IST
Last Updated 4 ಜುಲೈ 2018, 19:36 IST

ಬೆಂಗಳೂರು: ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ (ಯುವಿಸಿಇ)ಪ್ರಸಕ್ತ ಶೈಕ್ಷಣಿಕ ವರ್ಷದಿಂದಆಯ್ಕೆ ಆಧಾರಿತ ಗುಣಾಂಕ ಪದ್ಧತಿ (ಚಾಯ್ಸ್ ಬೇಸ್ಡ್ ಕ್ರೆಡಿಟ್ ಸಿಸ್ಟಂ- ಸಿಬಿಸಿಎಸ್) ಜಾರಿಗೆ ಬರಲಿದೆ.

‘ಸಿಬಿಸಿಎಸ್‌ ಪದ್ಧತಿ ಅಳವಡಿಸಲು ಫ್ಯಾಕಲ್ಟಿ ಆಫ್‌ ಎಂಜಿನಿಯರಿಂಗ್‌ ಮಂಡಳಿ ಬುಧವಾರ ಸಮ್ಮತಿ ನೀಡಿದೆ. ಯುವಿಸಿಇಯನ್ನುಡೀಮ್ಡ್ ವಿಶ್ವವಿದ್ಯಾಲಯವಾಗಿ ಮಾಡುವನಿಟ್ಟಿನಲ್ಲಿ ಇದು ಮೊದಲ ಹೆಜ್ಜೆಯಾಗಿದೆ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಕೆ.ಆರ್‌.ವೇಣುಗೋಪಾಲ್‌ ಹೇಳಿದರು.

ಇತ್ತೀಚೆಗಷ್ಟೆ 8ನೇ ಸೆಮಿಸ್ಟರ್‌ಸಿವಿಲ್‌ ಎಂಜಿನಿಯರಿಂಗ್ ಪರೀಕ್ಷೆ ಫಲಿತಾಂಶವನ್ನು ಮೂರು ತಾಸಿನಲ್ಲಿ ನೀಡಿ ಅಚ್ಚರಿ ಮೂಡಿಸಿದ್ದ, ಯುವಿಸಿಇ ಈಗ ಇನ್ನೊಂದು ಹಂತ ಮುಂದೆ ಹೋಗಿದೆ. ಈ ವರ್ಷದಲ್ಲಿ ದಾಖಲಾತಿ ಪಡೆದ ಸುಮಾರು 1,500 ವಿದ್ಯಾರ್ಥಿಗಳು ಅಂಕಗಳ ಬದಲಿಗೆ ಗ್ರೇಡ್‌ಗಳನ್ನು ಪಡೆಯಲಿದ್ದಾರೆ.

ADVERTISEMENT

‘ವಿದ್ಯಾರ್ಥಿಗಳಿಗೆ ಕಲಿಕೆಯ ವಿಷಯಗಳನ್ನು ಆಯ್ದುಕೊಳ್ಳಲು ಹೆಚ್ಚಿನ ಸ್ವಾತಂತ್ರ್ಯ ನೀಡುವ ಸಿಬಿಸಿಎಸ್‌ ಪದ್ಧತಿ ವಿದ್ಯಾರ್ಥಿ ಕೇಂದ್ರಿತವಾಗಿದೆ. ಮಾರ್ಗಸೂಚಿಯ ಪ್ರಕಾರ ಸಾರ ವಿಷಯಗಳ (ಕೋರ್ ಸಬ್ಜೆಕ್ಟ್) ಜೊತೆಗೆ ಬಹುಶಿಸ್ತುಗಳ ಹಾಗೂ ಕೌಶಲಾಧಾರಿತ ವಿಷಯಗಳ ಕಲಿಕೆಗೂ ಇಲ್ಲಿ ಅವಕಾಶವಿದೆ’ ಎಂದರು.

‘ಒಂದು ಕಾಲೇಜು ಸ್ವಾಯತ್ತಗೊಳ್ಳಬೇಕು ಎಂದರೆ, ಅಲ್ಲಿ ಸಿಬಿಸಿಎಸ್‌ ಪದ್ಧತಿ ಇರಬೇಕು. 6 ತಿಂಗಳಿನಿಂದ ಪಠ್ಯವನ್ನು ಸಿದ್ಧಪಡಿಸುವ ಕೆಲಸ ಮಾಡುತ್ತಿದ್ದೆವು. ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಕಾಯಂ ಕುಲಪತಿ ಇರದಿದ್ದರಿಂದ ಇದನ್ನು ಅನುಷ್ಠಾನ ಮಾಡಲು ಸಾಧ್ಯವಾಗಿರಲಿಲ್ಲ. ಮುಂದಿನ ಹಂತದಲ್ಲಿ ಪ್ರಾಧ್ಯಾಪಕರ ನೇಮಕಾತಿ ಮಾಡಲಾಗವುದು. ನಂತರ ಸ್ವಾಯತ್ತ ಕಾಲೇಜಿನ ಮಾನ್ಯತೆ ಪಡೆಯಲುರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್‌ಬಿಎ) ಅರ್ಜಿ ಸಲ್ಲಿಸುತ್ತೇವೆ’ ಎಂದು ವಿವರಿಸಿದರು.

‘ಯುವಿಸಿಇಯನ್ನು ಸ್ವಾಯತ್ತಗೊಳಿಸಲು ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ. ಒಂದೂವರೆ ವರ್ಷದೊಳಗೆ ಅದನ್ನು ಸಾಧಿಸುತ್ತೇವೆ. ಹಂತ ಹಂತವಾಗಿ ಕ್ರಮಕೈಗೊಳ್ಳುತ್ತಿದ್ದೇವೆ. ಇದು ಡೀಮ್ಡ್‌ ವಿವಿಯಾದರೆ,ಸಂಶೋಧನೆಗೂ ಹೆಚ್ಚು ಆದ್ಯತೆ ಸಿಗುತ್ತದೆ. ಯುವಿಸಿಇ ಹಿಂದಿನ ವೈಭವ ಮರೆಯಾಗಿದ್ದು, ಮರು ಚೈತನ್ಯ ಪಡೆಯಲು ಇದು ಸ್ವಾಯತ್ತಗೊಳ್ಳಲೇಬೇಕು’ ಎಂದು ಹೇಳಿದರು.

ಯುವಿಸಿಇ ಜೀರ್ಣೋದ್ಧಾರಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಇನ್ನಷ್ಟು ಕ್ರಮಕೈಗೊಳ್ಳಲಿದೆ. ಈಗಾಗಲೇ ವಿಶ್ವವಿದ್ಯಾಲಯದಿಂದ ₹25 ಕೋಟಿ ನೀಡಲಾಗಿದ್ದು, ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಎಂದರು.

ಮೆಕ್ಯಾನಿಕಲ್‌, ಎಲೆಕ್ಟ್ರಾನಿಕ್ಸ್‌ ಅಂಡ್‌ ಕಮ್ಯೂನಿಕೇಷನ್‌, ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಿಕಲ್‌ ಅಂಡ್‌ ಎಲೆಕ್ಟ್ರಾನಿಕ್ಸ್‌ – ನಾಲ್ಕು ಎಂಜಿನಿಯರಿಂಗ್‌ ವಿಭಾಗಗಳು ಯುವಿಸಿಇ ಕ್ಯಾಂಪಸ್‌ನಲ್ಲಿವೆ. ವಾಸ್ತುಶಿಲ್ಪ ಮತ್ತು ಸಿವಿಲ್‌ ಎಂಜಿನಿಯರಿಂಗ್‌ ವಿಭಾಗಗಳು ಜ್ಞಾನಭಾರತಿ ಆವರಣದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.