ADVERTISEMENT

‘ಬೆತ್ತಲೆ ಬ್ಲ್ಯಾಕ್‌ಮೇಲ್‌’ಗೆ ಹೆದರಿ ಆತ್ಮಹತ್ಯೆ

ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದ ಯುವಕ l ರಾಜಸ್ಥಾನದಲ್ಲಿ ಸಿಕ್ಕಿಬಿದ್ದ ವಂಚಕರು

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 20:31 IST
Last Updated 15 ಏಪ್ರಿಲ್ 2021, 20:31 IST
ರಾಬಿನ್
ರಾಬಿನ್   

ಬೆಂಗಳೂರು: ಕೆ.ಆರ್.ಪುರ ಠಾಣೆ ವ್ಯಾಪ್ತಿಯಲ್ಲಿ ಅಭಿಗೌಡ ಅಲಿಯಾಸ್ ಅವಿನಾಶ್ (26) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು, ‘ಬೆತ್ತಲೆ ಬ್ಲ್ಯಾಕ್‌ಮೇಲ್‌’ ಮಾಡುತ್ತಿದ್ದ ವಂಚಕರ ಜಾಲವನ್ನು ಭೇದಿಸಿದ್ದಾರೆ.

‘ಫೇಸ್‌ಬುಕ್‌ನಲ್ಲಿ ಯುವತಿ ಹೆಸರಿನಲ್ಲಿ ನಕಲಿ ಖಾತೆ ತೆರೆದು ಸಾರ್ವಜನಿಕರನ್ನು ಪರಿಚಯಿಸಿಕೊಂಡು ವಂಚಿಸುತ್ತಿದ್ದ ರಾಜಸ್ಥಾನ ಭರತಪುರ್ ಜಿಲ್ಲೆಯ ರಸೂಲ್‌ಪುರ ಗ್ರಾಮದ ರಾಬಿನ್ (22) ಹಾಗೂ ಜಾವೇದ್ (25) ಎಂಬುವರನ್ನು ಬಂಧಿಸಲಾಗಿದೆ. ಇಬ್ಬರನ್ನು ಕಸ್ಟಡಿಗೆ ಪಡೆದು ತನಿಖೆ ಮುಂದುವರಿಸಲಾಗಿದೆ. ಜಾಲದ ರೂವಾರಿ ತಲೆಮರೆಸಿಕೊಂಡಿದ್ದಾರೆ’ ಎಂದು ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ದೇವರಾಜ್ ಹೇಳಿದರು.

‘ಎಂಬಿಎ ಪದವೀಧರರಾಗಿದ್ದ ಅಭಿಗೌಡ, ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು. ನೇಹಾ ಶರ್ಮಾ ಎಂಬ ಯುವತಿ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದ ಆರೋಪಿಗಳು, ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಅಭಿಗೌಡ ಸ್ನೇಹ ಬೆಳೆಸಿದ್ದರು. ಯುವತಿ ಹೆಸರಿನಲ್ಲೇ ಸಂದೇಶ ಹಾಗೂ ಫೋಟೊ ಕಳುಹಿಸಿ ಸಲುಗೆಯಿಂದ ಮಾತನಾಡುತ್ತಿದ್ದರು.’

ADVERTISEMENT

‘ರಾತ್ರಿ ಹೊತ್ತಿನಲ್ಲಿ ವಿಡಿಯೊ ಕರೆ ಮಾಡಿದ್ದ ಆರೋಪಿಗಳು, ಅಪರಿಚಿತ ಯುವತಿಯ ನಗ್ನ ವಿಡಿಯೊ ತೋರಿಸಿ ಪ್ರಚೋದಿಸಿ ಅಭಿಗೌಡ ಬಟ್ಟೆ ಬಿಚ್ಚಿಸಿ ಬೆತ್ತಲೆಗೊಳಿಸಿದ್ದರು. ಆ ದೃಶ್ಯವನ್ನು ಚಿತ್ರೀಕರಿಸಿಟ್ಟುಕೊಂಡಿದ್ದರು. ಮರುದಿನದಿಂದಲೇ ಅಭಿಗೌಡ ಅವರಿಗೆ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಲಾರಂಭಿಸಿದ್ದರು. ಹಣ ಕೊಡದಿದ್ದರೆ ಫೇಸ್‌ಬುಕ್‌, ಯೂಟ್ಯೂಬ್‌ನಲ್ಲಿ ವಿಡಿಯೊ ಅಪ್‌
ಲೋಡ್ ಮಾಡುವುದಾಗಿ ಹೇಳಿದ್ದರು’ ಎಂದೂ ದೇವರಾಜ್ ಹೇಳಿದರು.

‘ಬ್ಲ್ಯಾಕ್‌ಮೇಲ್‌ಗೆ ಹೆದರಿದ್ದ ಯುವಕ, ಅಕ್ಕ ಹಾಗೂ ಇತರರಿಂದ ₹ 30,000 ಪಡೆದು ಆರೋಪಿಗಳಿಗೆ ನೀಡಿದ್ದರು. ಅಷ್ಟಾದರೂ ಆರೋಪಿಗಳು ಮತ್ತಷ್ಟು ಹಣ ಕೇಳಿದ್ದರು. ಅದರಿಂದ ಬೇಸತ್ತ ಅಭಿಗೌಡ, ಮಾರ್ಚ್ 23ರಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಅವರ ಅಕ್ಕ ದೂರು ನೀಡಿದ್ದರು’ ಎಂದೂ ತಿಳಿಸಿದರು.

ಅಂತ್ಯಕ್ರಿಯೆ ಬಳಿಕವೂ ಹಣಕ್ಕೆ ಬೇಡಿಕೆ: ‘ಅಭಿಗೌಡ ಅಂತ್ಯಕ್ರಿಯೆ ಮುಗಿಸಿದ್ದ ನಂತರ ಅಕ್ಕನಿಗೂ ಆರೋಪಿಗಳು ಸಂದೇಶ ಕಳುಹಿಸಿದ್ದರು. ‘ನೀವು ಅಭಿಗೌಡ ಸಂಬಂಧಿಯಲ್ಲವೇ? ಅಭಿಗೌಡ ಎಲ್ಲಿದ್ದಾರೆ? ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ ಏಕೆ?’ ಎಂದು ಕೇಳಿದ್ದರು’ ಎಂದು ಪೊಲೀಸರು ಹೇಳಿದರು.

‘ಬಾಕಿ ಹಣ ಕೊಟ್ಟರೆ ವಿಡಿಯೊ ಅಪ್‌ಲೋಡ್ ಮಾಡುವುದಿಲ್ಲ. ಕೊಡದಿದ್ದರೆ, ಅಪ್‌ಲೋಡ್‌ ಮಾಡಿ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಕಳುಹಿಸುತ್ತೇನೆ’ ಎಂದು ಪುನಃ ಬ್ಲ್ಯಾಕ್‌ಮೇಲ್ ಮಾಡಿದ್ದರು. ಆರೋಪಿಗಳ ವರ್ತನೆಯಿಂದ ಅನುಮಾನಗೊಂಡ ಅಕ್ಕ, ಅಭಿಗೌಡ ಬ್ಯಾಂಕ್ ಖಾತೆ ವಹಿವಾಟಿನ ವಿವರ ಪಡೆದು ಪರಿಶೀಲಿಸಿದ್ದರು. ಆರೋಪಿಗಳಿಗೆ ಹಣ ಜಮೆ ಆಗಿದ್ದು ಗೊತ್ತಾಗಿದೆ’ ಎಂದು ಹೇಳಿದರು.

18 ಮಂದಿಗೆ ವಂಚನೆ: ‘ವೈಟ್‌ಫೀಲ್ಡ್ ವಿಭಾಗ ವ್ಯಾಪ್ತಿಯಲ್ಲಿ ವಾಸವಿರುವ 18 ಮಂದಿಯನ್ನು ಆರೋಪಿಗಳು ವಂಚಿಸಿರುವುದು ಗೊತ್ತಾಗಿದೆ. ಈ ಬಗ್ಗೆ ಆರೋಪಿಗಳನ್ನು ಪ್ರಶ್ನಿಸಲಾಗುತ್ತಿದೆ’ ಎಂದು ದೇವರಾಜ್ ಹೇಳಿದರು.

ರಸೂಲ್‌ಪುರ ಗ್ರಾಮದಲ್ಲಿ ‘ಮಿನಿ ಕಚೇರಿ’

‘ಆನ್‌ಲೈನ್ ಮೂಲಕ ಬ್ಯಾಂಕೊಂದರ ಸರ್ಜಾಪುರ ಖಾತೆಯಲ್ಲಿ ಖಾತೆ ತೆರೆದಿದ್ದ ಆರೋಪಿಗಳು, ಅದೇ ಖಾತೆಗೆ ಅಭಿಗೌಡ ಅವರಿಂದ ಹಣ ಹಾಕಿಸಿಕೊಂಡಿದ್ದರು. ಅದೇ ಮಾಹಿತಿ ಆಧರಿಸಿ ಕೆ.ಆರ್.ಪುರ ಠಾಣೆ ಪೊಲೀಸರ ತಂಡ, ರಾಜಸ್ಥಾನಕ್ಕೆ ಹೋಗಿ ಆರೋಪಿಗಳನ್ನು ಬಂಧಿಸಿ ನಗರಕ್ಕೆ ಕರೆತಂದಿದೆ. ಭರತ್‌ಪುರ ಪೊಲೀಸರೂ ಆರೋಪಿಗಳನ್ನು ಹಿಡಿಯಲು ಸಹಕರಿಸಿದರು’ ಎಂದು ಡಿಸಿಪಿ ದೇವರಾಜ್ ಹೇಳಿದರು.

‘ರಸೂಲ್‌ಪುರ ಗ್ರಾಮದಲ್ಲಿ ಮಿನಿ ಕಚೇರಿ ತೆರೆದಿದ್ದ ಆರೋಪಿಗಳು, ಹೆಚ್ಚು ಓದಿರದ ಯುವಕರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದರು. ಅವರಿಗೆ ತರಬೇತಿಯನ್ನೂ ನೀಡಿದ್ದರು. ಅವರಿಂದಲೇ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆಸಿ ಸಾರ್ವಜನಿಕರನ್ನು ಜಾಲಕ್ಕೆ ಬೀಳಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು. ಒನ್‌ ಟೈಂ ಪಾಸ್‌ವರ್ಡ್ (ಒಟಿಪಿ), ಒಎಲ್‌ಎಕ್ಸ್‌ ಜಾಲತಾಣ, ಬ್ಯಾಂಕಿಂಗ್‌ ಸೇರಿದಂತೆ ಹಲವು ಬಗೆಯ ವಂಚನೆಗಳನ್ನು ಜಾಲ ಎಸಗಿದೆ' ಎಂದರು.

ಜಾಲಕ್ಕೆ ಸಿಲುಕದಿರಲು ಹೀಗೆ ಮಾಡಿ

l ಅಪರಿಚಿತರಿಂದ ಬರುವ ರಿಕ್ವೆಸ್ಟ್‌ಗಳನ್ನು ಸ್ವೀಕರಿಸುವ ಮುನ್ನ ಎಚ್ಚರಿಕೆ ಇರಲಿ

l ಸಾಮಾಜಿಕ ಜಾಲತಾಣದಲ್ಲಿರುವ ತಮ್ಮ ಖಾತೆಗಳನ್ನು, ಪ್ರೊಫೈಲ್‌ ಪ್ರೈವೇಸಿ ಆಯ್ಕೆ ಬಳಸಿ ಲಾಕ್ ಮಾಡಿ

l ಅಪರಿಚಿತರಿಂದ ಬರುವ ವಿಡಿಯೊ ಕರೆ ಬಗ್ಗೆ ಜಾಗೃತಿ ಇರಲಿ

l ಅಪರಿಚಿತರು ಯಾರಾದರೂ ಅನುಮಾನಾಸ್ಪದ ರೀತಿಯಲ್ಲಿ ಸಂದೇಶ ಕಳುಹಿಸಿದರೆ ಪೊಲೀಸರಿಗೆ ಮಾಹಿತಿ ನೀಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.