ADVERTISEMENT

ಬಿಜೆಪಿ ಮುಖಂಡ ‘ಸಂತೋಷ್‌ ಜೀ’ ಅಣ್ಣನ ಮಗನೆಂದು ₹ 30 ಲಕ್ಷ ವಂಚನೆ

ಕೇಂದ್ರೀಯ ರೇಷ್ಮೆ ಮಂಡಳಿ ಅಧ್ಯಕ್ಷ ಹುದ್ದೆ ಆಮಿಷ * ಯುವರಾಜ್ ವಿರುದ್ಧ ಮತ್ತೊಂದು ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 10 ಜನವರಿ 2021, 20:42 IST
Last Updated 10 ಜನವರಿ 2021, 20:42 IST
ಯುವರಾಜ್
ಯುವರಾಜ್   

ಬೆಂಗಳೂರು: ಬಿಜೆಪಿ ಹಾಗೂ ಆರ್‌ಎಸ್‌ಎಸ್ ಮುಖಂಡರ ಹೆಸರು ಹೇಳಿಕೊಂಡು ನೂರಾರು ಕೋಟಿ ರೂಪಾಯಿ ವಂಚನೆ ಮಾಡಿದ ಆರೋಪದಡಿ ಬಂಧಿಸಲಾಗಿರುವ ಯುವರಾಜ್ ಅಲಿಯಾಸ್ ಸೇವಾಲಾಲ್ ಸ್ವಾಮೀಜಿ, ಬಿಜೆಪಿ ಮುಖಂಡ ‘ಸಂತೋಷ್ ಜೀ’ ಅವರ ಅಣ್ಣನ ಮಗನೆಂದು ಹೇಳಿ ₹ 30 ಲಕ್ಷ ಪಡೆದು ವಂಚಿಸಿರುವ ಸಂಗತಿ ಹೊರಬಿದ್ದಿದೆ.

‘ಕೇಂದ್ರೀಯ ರೇಷ್ಮೆ ಮಂಡಳಿ ಅಧ್ಯಕ್ಷ ಹುದ್ದೆ ಕೊಡಿಸುವುದಾಗಿ ಆಮಿಷವೊಡ್ಡಿದ್ದ ಯುವರಾಜ್, ಸಂತೋಷ್ ಜೀ ಅವರ ಹೆಸರು ಹೇಳಿಕೊಂಡು ₹ 30 ಲಕ್ಷ ಪಡೆದು ವಂಚಿಸಿದ್ದಾರೆ’ ಎಂದು ಆರೋಪಿಸಿ ಗಿರಿನಗರ ನಿವಾಸಿಯೂ ಆಗಿರುವ ಉದ್ಯಮಿ ಎಂ.ಸಿ. ಇನಿತ್‌ಕುಮಾರ್ ಅವರು ಹೈಗ್ರೌಂಡ್ಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ‘ಯುವರಾಜ್‌ ಅವರನ್ನು ಸಿಸಿಬಿ ಅಧಿಕಾರಿಗಳು ಈಗಾಗಲೇ ಬಂಧಿಸಿದ್ದಾರೆ. ಇನಿತ್‌ಕುಮಾರ್ ನೀಡಿರುವ ದೂರಿನ ಬಗ್ಗೆ ಕಮಿಷನರ್ ಅವರಿಗೆ ಮಾಹಿತಿ ನೀಡಲಾಗುವುದು. ಅವರ ಸೂಚನೆ ಮೇರೆಗೆ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗುವುದು’ ಎಂದರು.

ADVERTISEMENT

ದೂರಿನ ವಿವರ: ‘ಸ್ನೇಹಿತ ಸುರೇಶ್ ಎಂಬುವರು ಮೂಲಕ ನಾಲ್ಕು ತಿಂಗಳ ಹಿಂದಷ್ಟೇ ತಾಜ್‌ ವೆಸ್ಟೆಂಡ್ ಹೋಟೆಲ್‌ನಲ್ಲಿ ಯುವರಾಜ್ ಪರಿಚಯ ಆಗಿತ್ತು. ‘ನಾನು ಬಿಜೆಪಿ ಮುಖಂಡ ಸಂತೋಷ್ ಜೀ ಅವರ ಅಣ್ಣನ ಮಗ. ನನಗೆ ಹಲವು ರಾಜಕೀಯ ಮುಖಂಡರ ಪರಿಚಯವಿದೆ. ನೀವು ರಾಜಕೀಯಕ್ಕೆ ಬರಬೇಕು. ನನಗೆ ಗೊತ್ತಿರುವವರಿಂದ ನಿಮಗೆ ರಾಜಕೀಯ ಭವಿಷ್ಯ ಕೊಡಿಸುತ್ತೇನೆ’ ಎಂದು ಯುವರಾಜ್ ಹೇಳಿದ್ದರು. ರಾಷ್ಟ್ರೀಯ ನಾಯಕರ ಜೊತೆಗಿನ ಫೋಟೊಗಳನ್ನು ತೋರಿಸಿದ್ದರು’ ಎಂದು ದೂರಿನಲ್ಲಿ ಇನಿತ್‌ಕುಮಾರ್ ಹೇಳಿದ್ದಾರೆ.

‘ಕೇಂದ್ರೀಯ ರೇಷ್ಮೆ ಮಂಡಳಿ ಅಧ್ಯಕ್ಷ ಹುದ್ದೆ ಖಾಲಿ ಇದ್ದು, ಆ ಹುದ್ದೆಯನ್ನು ನಿಮಗೆ ಕೊಡಿಸುತ್ತೇನೆ. ಬೇರೆಯವರಿಗಾದರೆ ₹ 3 ಕೋಟಿ ಆಗುತ್ತದೆ. ಆದರೆ, ನೀವು ₹ 2 ಕೋಟಿ ಕೊಡಿ ಸಾಕು’ ಎಂದಿದ್ದ ಆರೋಪಿ ಯುವರಾಜ್, ‘ಮುಂಗಡವಾಗಿ ₹ 2 ಲಕ್ಷ ಹಾಗೂ ಹಂತ ಹಂತವಾಗಿ ₹ 28 ಲಕ್ಷ ಸೇರಿ ಒಟ್ಟು ₹ 30 ಲಕ್ಷ ಪಡೆದಿದ್ದರು. ಹುದ್ದೆ ನೇಮಕದ ಆದೇಶ ಪ್ರತಿ ಬಂದ ನಂತರ ಉಳಿದ ಹಣ ಕೊಡುವಂತೆ ಹೇಳಿದ್ದರು’

‘ಆರೋಪಿ ಹೇಳಿದ ಸಮಯಕ್ಕೆ ನೇಮಕಾತಿ ಆದೇಶ ಬಂದಿರಲಿಲ್ಲ. ಆ ಬಗ್ಗೆ ‌ಯುವರಾಜ್‌ ಅವರನ್ನು ವಿಚಾರಿಸಿದಾಗ, ನಿನ್ನ ಬಳಿ ಹಣ ಪಡೆದಿರುವುದು ಹುದ್ದೆ ಕೊಡಿಸಲು ಅಲ್ಲ. ವಂಚನೆ ಮಾಡುವುದೇ ನನ್ನ ಉದ್ದೇಶವಾಗಿತ್ತು. ಇನ್ನೊಮ್ಮೆ ಹಣ ಕೇಳಿದರೆ ಕೊಲೆ ಮಾಡಿಸುತ್ತೇನೆ’ ಎಂದು ಬೆದರಿಕೆವೊಡ್ಡಿದ್ದರು. ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ತಿಳಿದು ದೂರು ನೀಡುತ್ತಿದ್ದೇನೆ’ ಎಂದೂ ಇನಿತ್‌ಕುಮಾರ್ ತಿಳಿಸಿದ್ದಾರೆ.

ಪ್ರಯಾಣಕ್ಕೆ ₹ 8 ಕೋಟಿ; ಮುಖಂಡರ ಪಕ್ಕದಲ್ಲೇ ಆಸನ

‘ವಂಚನೆ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ಯುವರಾಜ್, ತಮ್ಮ ವಿಮಾನ ಪ್ರಯಾಣಕ್ಕಾಗಿಯೇ ಇದುವರೆಗೂ ₹ 8 ಕೋಟಿ ಖರ್ಚು ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ಕೇಂದ್ರ ಮತ್ತು ರಾಜ್ಯದ ಪ್ರಭಾವಿ ಮುಖಂಡರು, ಸಚಿವರು ಬೆಂಗಳೂರಿನಿಂದ ದೆಹಲಿಗೆ ಹೋಗುವ ಹಾಗೂ ದೆಹಲಿಯಿಂದ ಬೆಂಗಳೂರಿಗೆ ಬರುವ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದರು. ಮುಖಂಡರ ಪಕ್ಕದಲ್ಲೇ ಆಸನ ಕಾಯ್ದಿರಿಸುತ್ತಿದ್ದ ಯುವರಾಜ್‌, ಅವರ ಜೊತೆಗೆಯೇ ಪ್ರಯಾಣಿಸುತ್ತಿದ್ದರು. ಅದೇ ವೇಳೆಯೇ ಆರ್‌ಎಸ್‌ಎಸ್ ಕಾರ್ಯಕರ್ತನೆಂದು ಪರಿಚಯಿಸಿಕೊಂಡು ಫೋಟೊ ತೆಗೆಸಿಕೊಳ್ಳುತ್ತಿದ್ದರು. ಅದೇ ಫೋಟೊಗಳನ್ನೇ ವಂಚನೆಗೆ ಬಳಸುತ್ತಿದ್ದರು’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.