ADVERTISEMENT

ಝೂಮ್ ಕಾರು ಬಾಡಿಗೆ ಪಡೆದು ಕಳ್ಳತನ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2018, 19:54 IST
Last Updated 29 ಸೆಪ್ಟೆಂಬರ್ 2018, 19:54 IST

ಬೆಂಗಳೂರು: ಝೂಮ್ ಕಾರನ್ನು ಬಾಡಿಗೆಗೆ ಪಡೆದು ರಾತ್ರಿ ವೇಳೆ ನಗರ ಸುತ್ತುತ್ತಿದ್ದ ರಾಜಸ್ಥಾನದ ಈ ನಾಲ್ವರು, ಅಂಗಡಿಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದರು. ಸಿ.ಸಿ.ಟಿ.ವಿ ಕ್ಯಾಮೆರಾ ನೀಡಿದ ಸುಳಿವು, ಆರೋಪಿಗಳಿಗೆ ಜೈಲಿನ ದಾರಿ ತೋರಿಸಿದೆ.

ವೀರೇಂದ್ರ ಸಿಂಗ್, ವಿನೋದ್ ಸಿರ್ವಿ, ಗೋಪಾಲ್ ಸಿಂಗ್ ಹಾಗೂ ರಾಕೇಶ್ ಪ್ರಜಾಪತ್ ಎಂಬುವರನ್ನು ಬಂಧಿಸಲಾಗಿದೆ. ಕಾರು, ₹ 95 ಸಾವಿರ ಮೌಲ್ಯದ ಬ್ಯಾಟರಿಗಳು ಹಾಗೂ ಮೆಡಿಕಲ್ ಶಾಪ್‌ನಿಂದ ದೋಚಿದ್ದ ಸೌಂದರ್ಯ ವರ್ಧಕದ ಬಾಟಲಿಗಳನ್ನು ಜಪ್ತಿ ಮಾಡಲಾಗಿದೆ ಎಂದು ವರ್ತೂರು ಪೊಲೀಸರು ಹೇಳಿದ್ದಾರೆ.

ನಗರದ ವಿವಿಧ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗಳು, ಇತ್ತೀಚೆಗೆ ವರ್ತೂರಿನ ‘ಕ್ರಿಸಾಲಿನ್’ ಶಾಲೆಯ ಬಸ್‌ಗಳ ಬ್ಯಾಟರಿಗಳನ್ನು ದೋಚಿದ್ದರು. ಅದಾದ ಮರುದಿನ ರಾತ್ರಿಯೇ ಬಳಗೆರೆ ಮುಖ್ಯರಸ್ತೆಯ ಮೆಡಿಕಲ್ ಶಾಪ್‌ನಲ್ಲಿ ಕಳ್ಳತನ ಮಾಡಿದ್ದರು. ಎರಡೂ ಕಡೆಗಳಲ್ಲೂ ಕೃತ್ಯಕ್ಕೆ ಝೂಮ್ ಕಾರನ್ನೇ ಬಳಸಿದ್ದರು. ಸಿ.ಸಿ ಟಿ.ವಿ ಕ್ಯಾಮೆರಾಗಳಲ್ಲಿ ಅದರ ನೋಂದಣಿ ಸಂಖ್ಯೆ ಸೆರೆಯಾಗಿತ್ತು. ಆ ಸುಳಿವು ಆಧರಿಸಿ ಕಾರಿನ ಮೂಲ ಹುಡುಕಿದಾಗ, ಅದು ಮಾರತ್ತಹಳ್ಳಿಯ ಟ್ರಾವೆಲ್ ಏಜೆನ್ಸಿಗೆ ಸೇರಿದ್ದಾಗಿತ್ತು ಎಂದು ಪೊಲೀಸರು ಹೇಳಿದರು.

ADVERTISEMENT

ಆ ಏಜೆನ್ಸಿಯ ನೌಕರರನ್ನು ವಿಚಾರಣೆ ನಡೆಸಿದಾಗ, ಕಾರು ಬಾಡಿಗೆ ಪಡೆದಿದ್ದವರ ಮೊಬೈಲ್ ಸಂಖ್ಯೆ ಕೊಟ್ಟರು. ಆ ಸಂಖ್ಯೆಯ ಜಾಡು ಹಿಡಿದು ಆರೋಪಿಗಳನ್ನು ಪತ್ತೆ ಮಾಡಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದರು.

ಎಚ್ಚರ ವಹಿಸಬೇಕು: ‘ಈಗ ದಾಖಲೆಗಳನ್ನು ಸಲ್ಲಿಸಿ ಯಾರು ಬೇಕಾದರೂ ಝೂಮ್ ಕಾರನ್ನು ಬಾಡಿಗೆ ಪಡೆಯಬಹುದಾಗಿದೆ. ಈ ವ್ಯವಸ್ಥೆ ದುರ್ಬಳಕೆ ಆಗುತ್ತಿದೆ. ಏಜೆನ್ಸಿಯವರು ಇದರ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಅಪರಾಧ ಕೃತ್ಯಗಳಿಗೆ ತಮ್ಮ ವಾಹನಗಳು ಬಳಕೆಯಾದರೆ, ಏಜೆನ್ಸಿ ವಿರುದ್ಧವೂ ಕ್ರಮ ಜರುಗಿಸಬೇಕಾಗುತ್ತದೆ’ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.