ADVERTISEMENT

‘ನಗರದಲ್ಲಿನ ಶೇ 85ರಷ್ಟು ಕೆರೆಗಳು ಕಣ್ಮರೆ’–ನ್ಯಾಯಮೂರ್ತಿ ಬಿ.ವೀರಪ್ಪ ಕಳವಳ

ಹೈಕೋರ್ಟ್‌ ನ್ಯಾಯಮೂರ್ತಿ ಬಿ.ವೀರಪ್ಪ ಕಳವಳ

​ಪ್ರಜಾವಾಣಿ ವಾರ್ತೆ
Published 17 ಮೇ 2022, 21:04 IST
Last Updated 17 ಮೇ 2022, 21:04 IST
ವಿಚಾರ ಸಂಕಿರಣದಲ್ಲಿ ನ್ಯಾ.ಬಿ. ವೀರಪ್ಪ ಮಾತನಾಡಿದರು. ಎನ್ವಿರಾನ್ಮೆಂಟ್ ಸಪೋರ್ಟ್‌ ಗ್ರೂಪ್‌ ಟ್ರಸ್ಟಿ ಭಾರ್ಗವಿ ಎಸ್. ರಾವ್, ನ್ಯಾ.ಎನ್ ಕೆ. ಪಾಟೀಲ, ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಶಶಿಧರ ಶೆಟ್ಟಿ ಹಾಗೂ ಎನ್ವಿರಾನ್ಮೆಂಟ್ ಸಪೋರ್ಟ್‌ ಗ್ರೂಪ್‌ನ ಸಂಯೋಜಕ ಲಿಯೋ ಎಫ್. ಸಲ್ಡಾನ್ಹಾ ಇದ್ದಾರೆ  – ಪ್ರಜಾವಾಣಿ ಚಿತ್ರ
ವಿಚಾರ ಸಂಕಿರಣದಲ್ಲಿ ನ್ಯಾ.ಬಿ. ವೀರಪ್ಪ ಮಾತನಾಡಿದರು. ಎನ್ವಿರಾನ್ಮೆಂಟ್ ಸಪೋರ್ಟ್‌ ಗ್ರೂಪ್‌ ಟ್ರಸ್ಟಿ ಭಾರ್ಗವಿ ಎಸ್. ರಾವ್, ನ್ಯಾ.ಎನ್ ಕೆ. ಪಾಟೀಲ, ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಶಶಿಧರ ಶೆಟ್ಟಿ ಹಾಗೂ ಎನ್ವಿರಾನ್ಮೆಂಟ್ ಸಪೋರ್ಟ್‌ ಗ್ರೂಪ್‌ನ ಸಂಯೋಜಕ ಲಿಯೋ ಎಫ್. ಸಲ್ಡಾನ್ಹಾ ಇದ್ದಾರೆ  – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ರಾಜಧಾನಿ ಬೆಂಗಳೂರಿನಲ್ಲಿ ಈ ಮೊದಲು ಸಾವಿರಕ್ಕೂ ಅಧಿಕ ಕೆರೆಗಳು ಇದ್ದವು. ಆದರೆ, ಸಮೀಕ್ಷೆಯೊಂದರ ಪ್ರಕಾರ ನಗರೀಕರಣದಿಂದಾಗಿ ಶೇ 85 ರಷ್ಟು ಕೆರೆಗಳು ಈಗಾಗಲೇ ಕಣ್ಮರೆ ಆಗಿವೆ’ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಬಿ. ವೀರಪ್ಪ ಕಳವಳ ವ್ಯಕ್ತಪಡಿಸಿದರು.

ಎನ್ವಿರಾನ್ಮೆಂಟ್ ಸಪೋರ್ಟ್‌ ಗ್ರೂಪ್‌ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಜಂಟಿಯಾಗಿ ನಗರದಲ್ಲಿ ಮಂಗಳವಾರ ಆಯೋಜಿಸಿದ ‘ಕರ್ನಾಟಕ ಕೆರೆಗಳ, ಕಾಲುವೆಗಳ ಮತ್ತು ಸಾಮೂಹಿಕ ನೀರಿನ ನೆಲೆಗಳ ವಿಕೇಂದ್ರೀಕೃತ, ಸಾಮಾಜಿಕವಾಗಿ ಒಳಗೊಳ್ಳುವ ಮತ್ತು ಪರಿಸರ ವಿವೇಕದ ರಕ್ಷಣೆ ಮತ್ತು ಪುನರ್ವಸತಿ’ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

‘ಬೆಂಗಳೂರಿನ ಬಹುತೇಕ ಕೆರೆಗಳು ನಿರ್ಮಾಣಗೊಂಡಿದ್ದು ನಾಡಪ್ರಭು ಕೆಂಪೇಗೌಡ, ಮೈಸೂರು ಮಹಾರಾಜರು ಮತ್ತು ಬ್ರಿಟಿಷರಿಂದ.1780ರ ವೇಳೆ ಬೆಂಗಳೂರು ಸಾವಿರಾರು ಕೆರೆಗಳನ್ನು ಒಳಗೊಂಡು, ಹಸಿರಿನಿಂದ ಕಂಗೊಳಿಸುತ್ತಿತ್ತು. ಕಟ್ಟಡಗಳ ನಿರ್ಮಾಣದಿಂದಾಗಿ ಕೆರೆಗಳ ಒತ್ತುವರಿ ಎಲ್ಲಡೆ ನಡೆಯಿತು. 1970ರ ಬಳಿಕ ಕುಡಿಯುವ ನೀರಿನ ಸಮಸ್ಯೆ ತಲೆದೋರಿತು. ಆಗ ಸರ್ಕಾರ ಹಾಗೂ ಸಾರ್ವಜನಿಕರು ಎಚ್ಚೆತ್ತುಕೊಳ್ಳದಿದ್ದರಿಂದ ಸಮಸ್ಯೆ ಇನ್ನಷ್ಟು ಗಂಭೀರ ಸ್ವರೂಪ ಪಡೆದುಕೊಂಡಿತು’ ಎಂದು ತಿಳಿಸಿದರು.

ADVERTISEMENT

ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಎನ್.ಕೆ. ಪಾಟೀಲ, ‘ಬೆಂಗಳೂರು ದೇಶದಲ್ಲಿಯೇ ವಿಭಿನ್ನವಾದ ನಗರವಾಗಿದೆ. ನಗರದ ಸೌಂದರ್ಯ ಹೆಚ್ಚಿಸುತ್ತಿದ್ದ ಹಲವು ಕೆರೆಗಳು ಈಗ ಇಲ್ಲವಾಗಿವೆ. ಕೆರೆಗಳ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ ನೀರಿನ ಕೊರತೆ ಎದುರಾಗಿ, ಮುಂದಿನ ಪೀಳಿಗೆ ಇದರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.