ADVERTISEMENT

ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ!

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2012, 5:15 IST
Last Updated 17 ಆಗಸ್ಟ್ 2012, 5:15 IST
ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ!
ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ!   

ಹುಮನಾಬಾದ್: ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಕೆಸರು ಎರಚಿ, ಅವಮಾನ ಗೈದಿರುವ ಘಟನೆ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ  9ಕ್ಕೆ ಹೊಂದಿಕೊಂಡ ಕಪ್ಪರಗಾಂವ ಗ್ರಾಮದಲ್ಲಿ ಬುಧವಾರ ಮಧ್ಯರಾತ್ರಿ ಸಂಭವಿಸಿದ್ದಾಗಿ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ಘಟನೆ ನಡೆದಿರುವ ಕುರಿತು ಗ್ರಾಮದ ವ್ಯಕ್ತಿ ಒಬ್ಬರು ಗುರುವಾರ ಬೆಳಿಗ್ಗೆ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರಿಂದ ಡಿ.ವೈ.ಎಸ್ಪಿ ಅಂಬಣ್ಣ ಚಿಪ್ಪಾರ, ಸರ್ಕಲ್ ಇನ್‌ಸ್ಪೆಕ್ಟರ್ ಕೆ.ಎಂ.ಸತೀಶ, ಸಬ್ ಇನ್‌ಸೆಪಕ್ಟರ್ ಸುರೇಶ ಬಾವಿಮನಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ವೃತ್ತದ ಸುತ್ತ ನೆರೆದಿದ್ದ ನೂರಾರು ಮಂದಿಯನ್ನು ದೂರ ಚದುರಿಸಿ, ವೃತ್ತದ ಫಲಕದ ಮೇಲಿನ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಕೆಸರು ಎರಚಿದ ಕುರಿತು ಸೂಕ್ಷ್ಮ ಪರಿಶೀಲಿಸಿದರು.

ನಂತರ ದಲಿತ ಸಂಘರ್ಷ ಸಮಿತಿ(ಭೀಮವಾದ) ಕಪ್ಪರಗಾಂವ ಗ್ರಾಮದ ಸಂಚಾಲಕ ಉತ್ತಮ ಟಿ.ಭಾಸ್ಕರ ಅವರು ನೀಡಿರುವ ಲಿಖಿತ ದೂರಿನ ಮೇರೆಗೆ ತಾಲ್ಲೂಕಿನ ಹಳ್ಳಿಖೇಡ(ಬಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದಲಿತ ಮುಖಂಡರಾದ ಸುದರ್ಶನ ಮಾಳಗೆ, ದಲಿತ ಸಂಘರ್ಷ ಸಮಿತಿ(ಭೀಮವಾದ) ತಾಲ್ಲೂಕು ಸಂಚಾಲಕ ಮಾಣಿಕರಾವ ಬಿ.ಪವಾರ ಮತ್ತಿತರರು ವೃತ್ತದಲ್ಲಿ ಪ್ರತಿಭಟನೆ ನಡೆಸಲು ಮುಂದಾದಾಗ ಕೃತ್ಯ ಎಸಗಿರುವ ಕಿಡಿಗೇಡಿಗಳು ಯಾರಾದರೂ ಸರಿ ಅವರನ್ನು ಶೀಘ್ರ ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ ನಂತರ ಮುಖಂಡರು ಪ್ರತಿಭಟನೆ ಹಿಂದಕ್ಕೆ ಪಡೆದರು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.