ADVERTISEMENT

ಅತ್ಯುತ್ತಮ ಫಲಿತಾಂಶದ ಶಾಲೆಗೆ ಆಕರ್ಷಕ ಬಹುಮಾನ

​ಪ್ರಜಾವಾಣಿ ವಾರ್ತೆ
Published 18 ಜನವರಿ 2012, 5:45 IST
Last Updated 18 ಜನವರಿ 2012, 5:45 IST

ಹುಮನಾಬಾದ್: ಎಸ್.ಎಸ್.ಎಲ್.ಸಿಯಲ್ಲಿ ಅತ್ಯುತ್ತಮ ಫಲಿತಾಂಶ ತರುವ ತಾಲ್ಲೂಕಿನ ಮೂರು ಶಾಲೆಗಳಿಗೆ ಕ್ರಮವಾಗಿಪ್ರಥಮ, ದ್ವಿತೀಯ ಮತ್ತು ತೃತೀಯ ಆಕರ್ಷಕ ಬಹುಮಾನ ನೀಡುವುದಾಗಿ ಶಾಸಕ ರಾಜಶೇಖರ ಪಾಟೀಲ ಘೋಷಿಸಿದರು. ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಕರೆಯಲಾಗಿದ್ದ ಪ್ರೌಢಶಾಲಾ ಮುಖ್ಯಗುರುಗಳ ಸಭೆಯಲ್ಲಿ ಅವರು ತಿಳಿಸಿದರು.

ಸರ್ಕಾರಿ ಶಾಲೆಗಳ ಬಗ್ಗೆ ಜನಸಾಮಾನ್ಯರಲ್ಲಿ ಇರುವ ಕೇವಲ ಭಾವನೆ ಹೋಗಲಾಡಿಸಲು ತಾಲ್ಲೂಕಿನ ಸಮಸ್ತ ಮುಖ್ಯಗುರು ಮತ್ತು ಸಿಬ್ಬಂದಿ ಪ್ರಾಮಾಣಿಕ ಪ್ರಯತ್ನಿಸಬೇಕು. ಸುಧಾರಣೆ ಮಾಡುವುದಕ್ಕೆ ಮುಂದಾಗುವ ಶಿಕ್ಷಕರು ಮತ್ತು ಶಾಲೆಗಳಿಗೆ ಸರ್ಕಾರದಿಂದ ದೊರೆಯಬೇಕಾದ ಅಗತ್ಯ ಸೌಲಭ್ಯ ಕಲ್ಪಿಸಲು ಸದಾಸಿದ್ಧ ಎನ್ನುವ ಮೂಲಕ ಉಪಸ್ಥಿತರಿದ್ದ ಮುಖ್ಯುಗುರುಗಳಲ್ಲಿ ಶಾಸಕ ಪಾಟೀಲ ಆತ್ಮಸ್ಥೈರ್ಯ ತುಂಬಿದರು.

ಶಾಲಾಕೋಣೆ, ಶೌಚಾಲಯ ನಿರ್ಮಾಣ ಮೊದಲಾದ ಕಾಮಗಾರಿ ವಿಷಯದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುವ ವ್ಯಕ್ತಿ ಯಾರಾದರೂ ಸರಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದಾಗಿಸ್ಪಷ್ಟಪಡಿಸಿದರು. ಗುಣಮಟ್ಟದ ಕಾಮಗಾರಿ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡುವುದಕ್ಕೆ ಮುಂದಾಗಬೇಕು. ನಿಮ್ಮ ಮಕ್ಕಳ ಬಗ್ಗೆ ನೀವು ವಹಿಸುವ ಕಾಳಜಿ ನೀವು ಸೇವೆ ಸಲ್ಲಿಸುವ ಸರ್ಕಾರಿ ಶಾಲೆ ಮಕ್ಕಳ ಬಗ್ಗೆಯೂ ಹೊಂದಿರಬೇಕು. 

 ಹಾಗಾದಲ್ಲಿ ಮಾತ್ರ 40-50 ಪ್ರತಿಶತಕ್ಕೆ ಸೀಮಿತ ಇರುವ ಫಲಿತಾಂಶ 80ರಿಂದ 90ಪ್ರತಿಶತಕ್ಕೆ ಹೆಚ್ಚಿಸಲು ಸಾಧ್ಯ ಎಂದರು. ತಾಲ್ಲೂಕಿನ ಬೆರಳೆಣಿಕೆ ಪ್ರೌಢಶಾಲೆ ಹೊರತುಪಡಿಸಿದರೇ ತಾಲ್ಲೂಕಿನ ಬಹುತೇಕ ಶಾಲೆಗಳ ಫಲಿತಾಂಶ ಪ್ರಗತಿಯಲ್ಲಿದೆ. ಮುಂಬರುವ ದಿನಗಳಲ್ಲಿ ಈ ಎಲ್ಲ ಶಾಲೆಗಳು ಉತ್ತಮ ಫಲಿತಾಂಶ ತರುತ್ತವೆ ಎಂಬ ಆಶಾಭಾವನೆ ಹೊಂದಿರುವುದಾಗಿ  ವಿಶ್ವಾಸ ವ್ಯಕ್ತಪಡಿಸಿದರು. 

 ಈ ವಿಷಯದಲ್ಲಿ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿ, ಬಿ.ಆರ್.ಸಿ ಅಧಿಕಾರಿಗಳು ಆಗಾಗಾ ತಾಲ್ಲೂಕಿನ ಶಾಲೆಗಳಿಗೆ ಖುದ್ದು ಭೇಟಿನೀಡಿ, ಪ್ರಗತಿ ಪರಿಶೀಲಿಸುವ ಮೂಲಕ ಅಗತ್ಯ ಮಾರ್ಗದರ್ಶನ ನೀಡಬೇಕು ಎಂದು ಆದೇಶಿಸಿದರು. ಕರ್ತವ್ಯಲೋಪ ಎಸಗುವ ವ್ಯಕ್ತಿ ಅಧಿಕಾರಿ. ಮುಖ್ಯಗುರು ಅಥವಾ ಶಿಕ್ಷಕ ಯಾರಾದರೂ ಸರಿ ಅಂಥವರ ಅನಿವಾರ್ಯವಾದರೇ ಕ್ರಮ ಜರುಗಿಸಲು ಹಿಂದೇಟು ಹಾಕುವುದಿಲ್ಲ.
 
ಶಿಕ್ಷಕರ ಬಗ್ಗೆ ಅಪಾರ ಗೌರವ ಹೊಂದಿರುವ ತಮಗೆ ಕ್ರಮ ಜರುಗಿಸುವಂತ ಅನಿವಾರ್ಯ ಸ್ಥಿತಿ ಬಾರದಂತೆ ನೋಡಿಕೊಳ್ಳಬೇಕು ಎಂದು ಸೂಚ್ಯವಾಗಿ ನುಡಿದರು. ಶಿಕ್ಷಕರ ಕೊರತೆ, ಪಾಠೋಪಕರಣ, ಪೀಠೋಪಕರಣ, ಶಾಲಾಕೋಣೆ, ಶೌಚಾಲಯ ಮೊದಲಾದ ಯಾವುದೇ ತೊಂದರೆಗಳು ಇದ್ದಲ್ಲಿ ಬಗೆಹರಿಸಲು ಸದಾಸಿದ್ಧ ಇರುವುದಾಗಿ ಪ್ರಕಟಿಸಿದರು. ತಾಲ್ಲೂಕು ಪಂಚಾಯಿತಿ ಯೋಜನಾ ಅಧಿಕಾರಿ ಮಠಪತಿ ವೇದಿಕೆಯಲ್ಲಿ ಇದ್ದರು.

ತಾಲ್ಲೂಕಿನ 38ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಸಭೆಯಲ್ಲಿ ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಧಿಕಾರಿ ಎಂ.ಬಿ.ಭಜಂತ್ರಿ ಸ್ವಾಗತಿಸಿದರು. ಬಿ.ಆರ್.ಸಿ ಅಧಿಕಾರಿ ಓಂಕಾರ ರೂಗನ್ ವಂದಿಸಿದರು. ಸಂಗಣ್ಣ ಬಿದರೆಡ್ಡಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.