ADVERTISEMENT

ಅನುಭಾವ ಮಂಟಪ ಮನುಕುಲದ ಮುಕ್ತ ವಿಶ್ವವಿದ್ಯಾಲಯ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2017, 6:28 IST
Last Updated 6 ಡಿಸೆಂಬರ್ 2017, 6:28 IST

ಬೀದರ್‌: ಜಗತ್ತಿನಲ್ಲಿ ಏಕಕಾಲಕ್ಕೆ ಒಂದೇ ಸ್ಥಳದಲ್ಲಿ ಎಲ್ಲ ಕೆಳಸಮುದಾಯದವರಿಂದ ಹೊರಹೊಮ್ಮಿದ ಜ್ಞಾನಕೇಂದ್ರವೆಂದರೆ ಕಲ್ಯಾಣದ ಅನುಭವ ಮಂಟಪ. ಅನೇಕ ಧರ್ಮಗಳು ಗ್ರಂಥಪ್ರಮಾಣವಾಗಿದ್ದು, ಪ್ರಶ್ನಾತೀತವಾಗಿದ್ದವು. ಅನುಭಾವ ಮಂಟಪದಲ್ಲಿ ವಚನಗಳು ಎಲ್ಲ ಸಮುದಾಯದವರು ಸೇರಿ ಕಟ್ಟಿರುವಂಥವು. ಸಹಜವಾಗಿ ಎಲ್ಲರೂ ಜ್ಞಾನಿಗಳಾಗಿರುತ್ತಾರೆ, ಸುಜ್ಞಾನಿಗಳಾಗಿರುತ್ತಾರೆ. ಆದರೆ ಅನುಭಾವಿಗಳಾಗಿರುವುದಿಲ್ಲ. ಅನುಭಾವ ಮಂಟಪ ಎಂದರೆ ಮಾನವ ಜನಾಂಗದ ಮೊದಲ ಮುಕ್ತ ವಿಶ್ವವಿದ್ಯಾಲಯ.

ಶರಣರು ಜ್ಞಾನವನ್ನು ಎಲ್ಲರಿಗೂ ಹಂಚಿದರು. ವೇದ ಕೇವಲ ಹೇಳಲ್ಪಡುತ್ತದೆ, ವಚನ ಅನುಭವಿಸಲ್ಪಡುತ್ತದೆ. ಅನುಭಾವವೆಂದರೆ ತಾನಾರೆಂದು ತಿಳಿಯುವ ವಿದ್ಯೆ. ಅದು ತನ್ನೊಳಗಿರುವ ಅಸ್ಮಿತೆ. ಮನುಷ್ಯನಿಗೆ ಎಲ್ಲಕ್ಕಿಂತಲೂ ದೊಡ್ಡ ಗೌರವ ಎಂದರೆ ಆತ್ಮಗೌರವ. ನಮ್ಮ ಶರಣರು ನಮ್ಮ ಅಸ್ಮಿತೆಗೆ ಗೌರವ ಕೊಡುವವರಾಗಿದ್ದರು. ಉತ್ತಮ ಕುಲದಲ್ಲಿ ಹುಟ್ಟಿದವರೆ ಜ್ಞಾನಿಗಳಾಗಬೇಕು ಎನ್ನುವ ವ್ಯವಸ್ಥೆಯನ್ನು ಶರಣರು ಕಿತ್ತು ಒಗೆದರು. ಈ ಸಮಾಜದಲ್ಲಿ ಸ್ವಾಮಿಗಳಿಗೆ, ವಿರಕ್ತತ್ವಕ್ಕೆ ಬೆಲೆ ಕಡಿಮೆಯಾಗುತ್ತಿದೆ. ಸ್ವಾಮಿಗಳು ಈ ಸಮಾಜದ ಬೇರುಗಳು. ಭಕ್ತರು ನೀರೆರೆಯಬೇಕು. ಬೇರು ಕೊಳೆಯಬಾರದು. ಅದು ಗಟ್ಟಿಯಾಗಿರಬೇಕು. ಸಮಾಜ ಸ್ವಾಮಿಗಳ ಮೂಗು ಹಿಡಿಯುವಂತಿರಬೇಕು. ಮಠಾಧೀಶರು ಶಾಲಾ ಕಾಲೇಜುಗಳು ತೆರೆಯುವ ಸ್ವಾತಂತ್ರ್ಯಪೂರ್ವದ ಅಗತ್ಯ ಈಗಿಲ್ಲ. ಅವರು ವ್ಯಾಪಾರಿಕರಣದಿಂದ ಹೊರಬಂದು ಧರ್ಮಪ್ರಸಾರದಲ್ಲಿ ಮುನ್ನಡೆಯಬೇಕು.


ಜಗತ್ತಿನಲ್ಲಿ ಅತಿ ದೊಡ್ಡ ಭಾಷೆ ಇಂಗ್ಲಿಷ್, ಫ್ರೆಂಚ್. ಆದರೆ ಜಗತ್ತಿನ ಅತಿ ದೊಡ್ಡ ಅನುಭಾವ ಸಾಹಿತ್ಯ ವಚನ. ಕನ್ನಡ ಸಾಹಿತ್ಯದ ಕಿರೀಟ ವಚನ ಸಾಹಿತ್ಯ. ಪ್ರತಿಯೊಬ್ಬರೂ ತಮ್ಮ ದುಡಿಮೆಯ ಬೆಲೆಯಲ್ಲಿಯೇ ಊಟ ಮಾಡಬೇಕು. ಜೊತೆಗೆ ಸಮಾಜದಲ್ಲಿ ಜಾತಿ ವೈಶಮ್ಯ ನಿವಾರಣೆಯಾಗಿ ಅಸ್ಪ್ರಶ್ಯತೆ ತೊಲಗಬೇಕು. ಅನುಭಾವ ಮಂಟಪಕ್ಕೆ ಬಂದವರು, ಕಾಶ್ಮೀರದಿಂದ ಕನ್ಯಾಕುಮಾರಿ ಸೇರಿದಂತೆ ಎಲ್ಲ ಕಡೆಯಿಂದ ಬಂದು ಕಲ್ಯಾಣ ಸೇರಬೇಕಾದರೆ ಬಸವಣ್ಣ ಎಂತಹ ಲೋಹಚುಂಬಕ ಶಕ್ತಿ ಹೊಂದಿದ್ದರು. ಕಳ್ಳತನ, ವೇಶ್ಯಾವಾಟಿಕೆ ಒಳಗೊಂಡಂತೆ ಎಲ್ಲ ರೀತಿಯ ವ್ಯಸನಗಳನ್ನು ಬಸವಣ್ಣ ಹೊಡೆದೋಡಿಸಿದರು. ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.