ADVERTISEMENT

ಅಪಘಾತ ತಡೆಗೆ ನಿಯಮ ಪಾಲಿಸಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2012, 6:05 IST
Last Updated 6 ಜನವರಿ 2012, 6:05 IST

ಬಸವಕಲ್ಯಾಣ: ರಸ್ತೆ ಅಪಘಾತಗಳು ಸಂಭವಿಸುವುದನ್ನು ತಡೆಯಲು ಪ್ರತಿಯೊಬ್ಬರು ಸಂಚಾರಿ ನಿಯಮಗಳನ್ನು ಪಾಲಿಸುವುದು ಅಗತ್ಯವಾಗಿದೆ ಎಂದು ಇಲ್ಲಿನ ಸಂಚಾರ ಠಾಣೆಯ ಸಬ್ ಇನಸ್ಪೆಕ್ಟರ್ ರಘುವೀರಸಿಂಗ್ ಹೇಳಿದರು.
ಇಲ್ಲಿನ ಹಳೆಯ ತಹಸೀಲ ಕಚೇರಿಯ ಸಮುದಾಯ ಭವನದಲ್ಲಿ ಬುಧವಾರ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಹಮ್ಮಿಕೊಂಡ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇತ್ತೀಚೆಗೆ ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ರಸ್ತೆಗಳಲ್ಲಿನ ವಾಹನ ದಟ್ಟಣೆ ಹೆಚ್ಚುತ್ತಿದೆ. ಆದರೂ ಕೆಲವರು ವಾಹನ ಚಲಿಸುತ್ತಿರುವಾಗಲೇ ಮೊಬೈಲ್‌ನಲ್ಲಿ ಮಾತಾಡುತ್ತಾರೆ. ಬಹಳಷ್ಟು ಜನ ಪಾದಚಾರಿಗಳಿಗೆ ಸಂಚಾರಿ ನಿಯಮಗಳ ಮಾಹಿತಿ ಇರುವುದಿಲ್ಲ. ಆದ್ದರಿಂದ ಈ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ. ಶಾಲೆಗಳಲ್ಲಿ ಮಕ್ಕಳಿಗೆ ರಸ್ತೆಯಲ್ಲಿ ಹೇಗೆ ಹೋಗಬೇಕು ಎಂಬುದರ ಬಗ್ಗೆ ಮಾಹಿತಿ ಕೊಡಬೇಕಾಗಿದೆ ಎಂದರು.

ನಿಯಮಗಳ ಪಾಲನೆ ಜತೆಗೆ ವಾಹನ ಚಾಲನಾ ಪರವಾನಿಗೆ ಹಾಗೂ ವಾಹನ ಖರೀದಿಗೆ ಸಂಬಂಧಿಸಿದ ದಾಖಲೆಗಳನ್ನು ಸಹ ಹೊಂದುವುದು ಅನಿವಾರ್ಯ ಎಂದರು.

ತಹಸೀಲ್ದಾರ ಜಗನ್ನಾಥರೆಡ್ಡಿ, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎಂ.ಎಂ.ತಂಬಾಕೆ, ತಾಲ್ಲೂಕು ವೈದ್ಯಾಧಿಕಾರಿ ಡಾ.ಜಿ.ಎಸ್.ಭುರಳೆ, ಮುಖಂಡ ಮನೋಹರ ಮೈಸೆ, ಆಸೀಫಅಲಿ ಮಾತನಾಡಿದರು.

ಪ್ರಮುಖರಾದ ಯುವರಾಜ ಭೆಂಡೆ, ದೈಹಿಕ ಶಿಕ್ಷಣಾಧಿಕಾರಿ ಪ್ರಕಾಶ ಮೋರೆ, ಬಾಬುರಾವ ಕ್ಯಾಸೆ, ಬಸವರಾಜ ಹಿರೇಮಠ ಉಪಸ್ಥಿತರಿದ್ದರು. ಶರಣಪ್ಪ ಸ್ವಾಗತಿಸಿದರು. ದೇವೇಂದ್ರಪ್ಪ ನಿರೂಪಿಸಿದರು. ಶಶಿಕಾಂತ ವಂದಿಸಿದರು. ಕಾರ್ಯಕ್ರಮದ ಮೊದಲು ನಗರದ ಕೋಟೆಯಿಂದ ಮುಖ್ಯರಸ್ತೆಯ ಮೂಲಕ ಮಕ್ಕಳ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.