ADVERTISEMENT

ಅಪೂರ್ಣ ಕಾಮಗಾರಿಯೇ ಕಾಂಗ್ರೆಸ್‌ ಸಾಧನೆ

ಬೀದರ್‌: ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ ಹೇಳಿಕೆ

ಚಂದ್ರಕಾಂತ ಮಸಾನಿ
Published 4 ಮೇ 2018, 7:22 IST
Last Updated 4 ಮೇ 2018, 7:22 IST
ಶೈಲೇಂದ್ರ ಬೆಲ್ದಾಳೆ
ಶೈಲೇಂದ್ರ ಬೆಲ್ದಾಳೆ   

ಬೀದರ್‌: ದಶಕದಿಂದ ರಾಜಕೀಯದಲ್ಲಿ ಸಕ್ರೀಯವಾಗಿರುವ ಡಾ. ಶೈಲೇಂದ್ರ ಬೆಲ್ದಾಳೆ ಒಂದು ಬಾರಿ ಚಿಟ್ಟಾ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯರಾಗಿ ಜನ ಸೇವೆ ಮಾಡಿದ್ದಾರೆ. ಪ್ರಸ್ತುತ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದು, ಜಿಲ್ಲೆಯ ರಾಜಕೀಯ ವಿದ್ಯಮಾನಗಳ ಬಗೆಗೆ ತಮ್ಮ ಅಭಿಪ್ರಾಯವನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ನಿಮ್ಮ ಪಕ್ಷವನ್ನು ಏಕೆ ಗೆಲ್ಲಿಸಬೇಕು ಎಂದು ಬಯಸುತ್ತೀರಿ?

ಕಾಂಗ್ರೆಸ್‌ ಸರ್ಕಾರದ ಜನ ವಿರೋಧಿ ಹಾಗೂ ರೈತ ವಿರೋಧಿ ನೀತಿಗೆ ಜನ ಬೇಸತ್ತಿದ್ದಾರೆ. ರಾಜ್ಯದಲ್ಲಿ ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಬೊಟ್ಟು ಮಾಡಿ ತೋರಿಸುವಂತಹ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ವೈದ್ಯಕೀಯ ಕಾಲೇಜು ಕಟ್ಟಡ ಹಾಗೂ ಜಿಲ್ಲಾ ಕ್ರೀಡಾಂಗಣ ಕಾಮಗಾರಿ ಅಪೂರ್ಣವಾಗಿವೆ. ಎಂಜಿನಿಯರಿಂಗ್‌ ಕಾಲೇಜು ಕಟ್ಟಡ ಕಾಮಗಾರಿಯೇ ಆರಂಭವಾಗಿಲ್ಲ.
ಐದು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಒಂದೇ ಒಂದು ಕೈಗಾರಿಕೆ ಸ್ಥಾಪನೆಯಾಗಿಲ್ಲ. ಕಡತಗಳಲ್ಲಿ ಮಾತ್ರ ಯೋಜನೆಗಳ ಪ್ರಗತಿ ಬಿಂಬಿಸಲಾಗಿದೆ. ವಾಸ್ತವದಲ್ಲಿ ಯಾವ ಕೆಲಸವೂ ಆಗಿಲ್ಲ. ಜನಪರವಾದ ಕೆಲಸ ಮಾಡಲು ಮತದಾರರು ಬಿಜೆಪಿಯನ್ನು ಗೆಲ್ಲಿಸಬೇಕಾಗಿದೆ.

ADVERTISEMENT

ಯಾವ ವಿಷಯಗಳನ್ನು ಇಟ್ಟುಕೊಂಡು ಮತದಾರರ ಬಳಿ ಹೋಗುತ್ತೀರಿ?
ಕಾರಂಜಾ ನೀರಾವರಿ ಯೋಜನೆಯ ನಿರಾಶ್ರಿತರು ಇಂದಿಗೂ ತೊಂದರೆಯಲ್ಲಿದ್ದಾರೆ. ಯೋಜನೆಯಲ್ಲಿ ಹೊಲಗಳು ಮುಳುಗಡೆಯಾದ ಕಾರಣ ನಿರಾಶ್ರಿತರು ಬೀದರ್‌ ನಗರಕ್ಕೆ ಬಂದು ನೆಲೆಸಿದ್ದಾರೆ. ಕೆಲವರು ಉದ್ಯೋಗ ಅರಿಸಿ ಬೇರೆ ಬೇರೆ ಕಡೆಗೆ ವಲಸೆ ಹೋಗಿದ್ದಾರೆ. ಕೃಷಿಯನ್ನೇ ನಂಬಿಕೊಂಡಿದ್ದ ಜನರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಅವರಿಗೆ ಪರಿಹಾರ ಒದಗಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಿದೆ. ಚಿಟಗುಪ್ಪ ತಾಲ್ಲೂಕಿನ ಮನ್ನಾಎಖ್ಖೆಳ್ಳಿಯಲ್ಲಿ ನಾಡ ತಹಶೀಲ್ದಾರ್‌ ಕಚೇರಿ ಇಲ್ಲ. ಜಿಲ್ಲೆಯಲ್ಲಿ ಕೈಗಾರಿಕೆಗಳು ಬಾರದ ಕಾರಣ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದೆ. ಹೀಗಾಗಿ ಸಣ್ಣ ಕೈಗಾರಿಕೆಗಳನ್ನು ಆರಂಭಿಸಲು ಒತ್ತುಕೊಡಲಿದೆ.

ವೀರಶೈವ– ಲಿಂಗಾಯತ ವಿಷಯ ಚುನಾವಣೆಯ ಮೇಲೆ ಪರಿಣಾಮ ಬೀರುತ್ತಿದೆಯೇ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ವೀರಶೈವ– ಲಿಂಗಾಯತ ವಿಷಯವನ್ನು ಕೆದಕಿದ್ದಾರೆ.
ಸಮುದಾಯದಲ್ಲಿ ಗೊಂದಲ ಸೃಷ್ಟಿಸಲು ಪ್ರಯತ್ನಿಸಿದ್ದಾರೆ. ಈ ವಿಷಯವಾಗಿ ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ. ವಿವಾದ ಸೃಷ್ಟಿಸಿರುವವರಿಗೆ ದೇವರು ಒಳ್ಳೆಯದು ಮಾಡುವುದಿಲ್ಲ.

ಪಕ್ಷಾಂತರಿಗಳಿಗೆ ಮಣೆ, ನಿಷ್ಠಾವಂತರ ಕಡೆಗಣನೆ ಏಕೆ? ಹೇಗೆ?

ಪಕ್ಷ ಪ್ರತಿಯೊಂದು ಕ್ಷೇತ್ರದಲ್ಲಿ ಸಮೀಕ್ಷೆ ನಡೆಸಿದ ನಂತರ ಗೆಲ್ಲುವ ಅಭ್ಯರ್ಥಿಯನ್ನು ಗುರುತಿಸಿ ಚುನಾವಣೆಯಲ್ಲಿ ಟಿಕೆಟ್‌ ಕೊಟ್ಟಿದೆ. ಕೆಲವರು ಟಿಕೆಟ್‌ ದೊರೆಯದ ಕಾರಣ ನೊಂದು ಪಕ್ಷ ಬಿಟ್ಟು ಹೋಗಿದ್ದಾರೆ. ಎಲ್ಲರಿಗೂ ಟಿಕೆಟ್‌ ಕೊಟ್ಟು ಸಮಾಧಾನ ಪಡಿಸಲು ಸಾಧ್ಯವಿಲ್ಲ. ವರಿಷ್ಠರ ನಿರ್ಧಾರಕ್ಕೆ ತಲೆಬಾಗಬೇಕಾದದ್ದು ನಿಷ್ಠಾವಂತ ಕಾರ್ಯಕರ್ತರ ಕರ್ತವ್ಯವಾಗಿದೆ. ಪಕ್ಷದಲ್ಲಿ ಉಳಿದುಕೊಂಡಿದ್ದರೆ ಅವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಬಹುದಾಗಿತ್ತು.

ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿ ಆದ್ಯತೆಗಳೇನು?

ಬಿಜೆಪಿ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡಲಿದೆ. ಬೀದರ್‌ನಲ್ಲಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ಆರಂಭಿಸಲಿದೆ. ನಿರುದ್ಯೋಗಿ ಯುವಕ, ಯುವತಿಯರಿಗೆ ಉಚಿತ ಕೌಶಲ ತರಬೇತಿ ಕೊಡಿಸಲು ಕೇಂದ್ರೀಯ ಪ್ಲಾಸ್ಟಿಕ್ಸ್ ತಂತ್ರಜ್ಞಾನ ಸಂಸ್ಥೆ(ಸಿಪೆಟ್‌)ಯ ಘಟಕವನ್ನು ಆರಂಭಿಸಲಿದೆ. ಹಲವು ಕಾರಣಗಳಿಂದ ಮುಚ್ಚಿರುವ ಬಿಎಸ್‌ಎಸ್‌ಕೆ ಹಾಗೂ ಸಣ್ಣ ಕೈಗಾರಿಕೆಗಳನ್ನು ಆರಂಭಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಮದುವೆ, ಮುಂಜಿವೆಗಳಿಗೆ ಅನುಕೂಲವಾಗುವಂತೆ ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಲ್ಯಾಣ ಮಂಟಪ ನಿರ್ಮಿಸಲಾಗುವುದು.

ನಿಮ್ಮ ಪಕ್ಷ ಗೆಲ್ಲಲು ಇರುವ ಅವಕಾಶಗಳೇನು?

ಔರಾದ್‌ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ಶಾಸಕ ಪ್ರಭು ಚವಾಣ್‌ ಎದುರು ಸಮರ್ಥ ಎದುರಾಳಿಯೇ ಇಲ್ಲ ಎಂದು ಹೇಳಬಹುದು.
ಭಾಲ್ಕಿಯಲ್ಲಿ ಆಡಳಿತ ವಿರೋಧಿ ಅಲೆ ಇದ್ದರೆ, ಬೀದರ್‌ನಲ್ಲಿ ಕಾಂಗ್ರೆಸ್‌ ಶಾಸಕರ ಕಾರ್ಯವೈಖರಿಗೆ ಜನ ಬೇಸತ್ತಿದ್ದಾರೆ. ಇನ್ನುಳಿದ ಕಡೆ ತ್ರಿಕೋನ ಸ್ಪರ್ಧೆ ಇದೆ. ಜಿಲ್ಲೆಯ ಪ್ರತಿಯೊಂದು ಕ್ಷೇತ್ರದಲ್ಲಿ ಕಾರ್ಯಕರ್ತರ ಪಡೆ ಇದೆ. ಈಗಿನ ಕೇಂದ್ರ ಸರ್ಕಾರ ಹಾಗೂ ಹಿಂದಿನ ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿನ ಸಾಧನೆಗಳನ್ನು ವಿವರಿಸುತ್ತಿರುವ ಕಾರಣ ಮತದಾರರು ಸಹಜವಾಗಿ ಬಿಜೆಪಿಯ ಪರವಾಗಿ ಒಲವು ತೋರಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.