ADVERTISEMENT

ಅಬ್ಬರಿಸಿದ ಮುಂಗಾರು ಮಳೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2012, 10:00 IST
Last Updated 19 ಜೂನ್ 2012, 10:00 IST

ಚಿತ್ತಾಪುರ: ದಿನಕರ ತನ್ನ ದಿನಚರಿ ಮುಗಿಸಿಕೊಂಡು ಭಾನುವಾರ ಸಂಜೆ ಪಶ್ಚಿಮದಲ್ಲಿ ಅಸ್ತಂಗತವಾಗುವ            ಸಮಯದಲ್ಲಿ ಆಗಸದಲ್ಲಿ ತೇಲಿ ಬಂದ ಮೋಡಗಳು ತಾಲ್ಲೂಕಿನ ವಿವಿಧೆಡೆ ಮಳೆ ಸುರಿಸಿದವು. 

    ರಾತ್ರಿಯಿಡಿ ಜಿಟಿಜಿಟಿ ಮಳೆ ಸುರಿದಿದೆ. ತಡವಾಗಿಯಾದರೂ ಮುಂಗಾರು ಮಳೆ ಸೋಮವಾರ ಮಧ್ಯಾಹ್ನ ಅಬ್ಬರಿಸಿದೆ. ತಾಲ್ಲೂಕಿನಾದ್ಯಂತ ಜೋರಾಗಿ ಮಳೆಯಾಗಿದೆ. ರೈತರ ಮುಖದಲ್ಲಿ ಮಂದಹಾಸ ಅರಳಿದೆ.
ಬೇಸಿಗೆ ಸಮಯದಲ್ಲಿ ಪ್ರತಿ ವರ್ಷ ಅಕಾಲಿಕ ಮಳೆ ಬರುವುದು ವಾಡಿಕೆ. ಈ ವರ್ಷ ಹೇಳಿಕೊಳ್ಳುವಂತೆ ಅಕಾಲಿಕ ಮಳೆ ಬರಲೇ ಇಲ್ಲ. ಮಳೆಗಾಲ ಆರಂಭವಾಗಿ 11 ದಿವಸ ಕಳೆದರೂ ಮಳೆಯ ಸುಳಿವೇ ಇಲ್ಲದ ಪರಿಣಾಮ ರೈತರು ಆಕಾಶದತ್ತ ಮುಖ ಮಾಡಿ ಮಳೆ ಬರುವ ನಿರೀಕ್ಷೆಯಲ್ಲಿದ್ದರು.

ರೋಹಿಣಿ ಮಳೆ ಬಂದರೆ ಮುಂಗಾರು ಬೆಳೆಗಳಾದ ಹೆಸರು ಮತ್ತು ಉದ್ದು ಬಿತ್ತನೆ ಮಾಡಿ ರೈತರು ಆರ್ಥಿಕ ಲಾಭ ಮಾಡಿಕೊಳ್ಳುವ ಕೆಲಸಕ್ಕೆ ಮುಂದಾಗುತ್ತಿದ್ದರು. ಆದರೆ, ರೋಹಿಣಿ ಮಳೆ ಬರಲೇ ಇಲ್ಲ. ಭೂಮಿ ಹದ ಮಾಡಿದ ರೈತರು ಮಳೆಯ ದಾರಿ ಕಾಯುತ್ತಿದ್ದರು. ಕೃಷಿ ಚಟುವಟಿಕೆಗಳು ಆರಂಭವಾಗಿರಲಿಲ್ಲ.

ಮುಂಗಾರು ಮಳೆ ಶುರುವಾಗಲು ತಡವಾದ ಪರಿಣಾಮ ಹೆಸರು, ಉದ್ದು ಬಿತ್ತನೆ ಮಾಡುತ್ತೆವೆಯೋ ಇಲ್ಲವೋ ಎಂದು ರೈತರು ಆತಂಕದಲ್ಲಿದ್ದರು. ಆದರೆ, ಭಾನುವಾರ ಸಂಜೆ, ರಾತ್ರಿ ಮತ್ತು ಸೋಮವಾರ ಸುರಿದ ಭಾರಿ ಮಳೆಯಿಂದ ರೈತರು ಖುಷಿಯಾಗಿದ್ದಾರೆ. ಹೆಸರು ಉದ್ದು ಬಿತ್ತನೆ ಮಾಡಬಹುದು ಎಂದು ಲೆಕ್ಕಾಚಾರ              ಹಾಕುತ್ತಿದ್ದಾರೆ. ನಿಧಾನವಾಗಿ ಬೀಸುವ ಗಾಳಿ, ಗುಡುಗಿನ ಆರ್ಭಟವಿಲ್ಲ. ಮಿಂಚಿನ ಬೆಳಕಿಲ್ಲ. ಸದ್ದುಗದ್ದಲವಿಲ್ಲದಂತೆ ಮಳೆರಾಯ ಆರ್ಭಟಿಸಿದ್ದಾನೆ. ಬಿಸಿಲಿಗೆ ಕಾದು ಕೆಂಡವಾದ ಇಳೆಯನ್ನು ತಂಪು ಮಾಡಿದ.  ಭೂಮಿಯಲ್ಲಿ ನೀರು ಹರಿದಾಡಿತು.

ತಾಲ್ಲೂಕಿನ ಇವಣಿ, ದಂಡೋತಿ, ಮರಗೋಳ, ಮುಡಬೂಳ, ಭಾಗೋಡಿ, ಕದ್ದರಗಿ, ಯರಗಲ್, ರಾವೂರ, ಮೊಗಲಾ, ಇಟಗಾ, ದಿಗ್ಗಾಂವ, ಡೋಣಗಾಂವ ಭಂಕಲಗಾ, ಹೊಸೂರ, ಸಾತನೂರ, ಅಳ್ಳೊಳ್ಳಿ, ದಂಡಗುಂಡ, ಸಂಕನೂರ, ಅಲ್ಲೂರ್(ಬಿ), ರಾಮತೀರ್ಥ, ಭೀಮನಹಳ್ಳಿ ಮುಂತಾದೆಡೆ ಉತ್ತಮ ಮಳೆಯಾಗಿದೆ ಎಂದು ತಿಳಿದು ಬಂದಿದೆ.

ಮೃಗಶಿರ ಮಳೆ ರೈತರಲ್ಲಿ ಮುಂಗಾರು ಬಿತ್ತನೆಗೆ ಭರವಸೆ ಮೂಡಿಸಿದೆ. ಇನ್ನೊಮ್ಮೆ ಇಂತಹ ಮಳೆ ಬಂದರೆ ಮುಂಗಾರು ಬಿತ್ತನೆ ಚುರುಕು ಪಡೆಯುತ್ತದೆ. ಕೃಷಿ ಚಟುವಟಿಕೆಗಳು ಬಿರುಸಿನಿಂದ ಸಾಗುತ್ತವೆ.

ಮಳೆ ಬರಬಹುದು ಎನ್ನುವ ಭರವಸೆಯಿಂದ ಮುಂಗಾರು ಬೆಳೆಗಳಾದ ಹೆಸರು, ಉದ್ದು ಹಾಗೂ ತೊಗರಿ ಬಿತ್ತನೆ ಮಾಡಲು ಮುಂದಾಗಬಹುದು              ಎನ್ನುವುದು ರೈತರ  ಲೆಕ್ಕಾಚಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.