ಬೀದರ್: ಪ್ರಮುಖ ರಾಜಕೀಯ ಪಕ್ಷ ಬಿಜೆಪಿ ಬೀದರ್ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿ ಪ್ರಕಟಿಸಲು ಇನ್ನೂ ತಿಣುಕಾಟ ಆರಂಭಿಸಿರುವಂತೆಯೇ, ಜೆಡಿಎಸ್ ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ ಅವರ ಹೆಸರು ಪ್ರಕಟಿಸಿದೆ.
ಈ ನಡುವೆ, ಸೋಮವಾರ ರಾತ್ರಿಯ ಬೆಳವಣಿಗೆಯಲ್ಲಿ ಆಮ್ ಅದ್ಮಿ ಪಾರ್ಟಿಯು ಚಂದ್ರಕಾಂತ ಕುಲಕರ್ಣಿ ಎಂಬವರನ್ನು ತನ್ನ ಅಭ್ಯರ್ಥಿಯಾಗಿ ಘೋಷಿಸಿ ಅಚ್ಚರಿ ಮೂಡಿಸಿದೆ.
ಕಾಂಗ್ರೆಸ್ ಈಗಾಗಲೇ ಹಾಲಿ ಸಂಸದ ಧರ್ಮಸಿಂಗ್ ಅವರಿಗೆ ಟಿಕೆಟ್ ನೀಡುವ ಮೂಲಕ ಪ್ರಚಾರದ ಸಿದ್ಧತೆಯನ್ನು ನಡೆಸಿದ್ದು, ಬಿಜೆಪಿ ಅಭ್ಯರ್ಥಿ ಯಾರು ಎಂಬ ಕುತೂಹಲವಷ್ಟೇ ಈಗ ಉಳಿದಿದೆ.
ರಾಜ್ಯದ ಪ್ರಮುಖ ಪಕ್ಷವಾದ ಜನತಾದಳ (ಎಸ್) ನಿರೀಕ್ಷೆಯಂತೆ ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದ್ದು, ಪ್ರಬಲ ಸ್ಪರ್ಧೆ ನೀಡುವ ಗುರಿ ಹೊಂದಿದೆ.
ಬಂಡೆಪ್ಪ ಅವರಿಗೆ ಇದು ಪ್ರಥಮ ಲೋಕಸಭೆ ಚುನಾವಣೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೀದರ್ ದಕ್ಷಿಣ ಕ್ಷೇತ್ರದಿಂದ ಸತತ ಗೆಲುವಿನ ನಿರೀಕ್ಷೆಯಲ್ಲಿದ್ದ ಅವರು ಅಶೋಕ್ ಖೇಣಿ ವಿರುದ್ಧ ಪರಾಭವಗೊಂಡರು.
ಹಿಂದೆ 1999ರಲ್ಲಿ ಬೀದರ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಂತು ಸೋತಿದ್ದರು. ನಂತರ 2004ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು.
ಅದೇ ವರ್ಷದ ಅಕ್ಟೋಬರ್ ತಿಂಗಳು, ಸಂಸದರಾಗಿದ್ದ ರಾಮಚಂದ್ರ ವೀರಪ್ಪ ಅವರ ಅಗಲಿಕೆಯ ಪರಿಣಾಮ ನಡೆದ ಉಪ ಚುನಾವಣೆ ಸಂದರ್ಭದಲ್ಲಿ ಬಂಡೆಪ್ಪ ಕಾಶೆಂಪುರ ಅವರು ಜೆಡಿಎಸ್ ಜೊತೆಗೆ ಗುರುತಿಸಿಕೊಂಡರು.
ನಂತರದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿ ಸರ್ಕಾರ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಾಗ ಕೃಷಿ ಸಚಿವರಾಗಿ ಪ್ರಮಾಣ ಸ್ವೀಕರಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಕೃಷಿ ನೀತಿ ರೂಪಿಸಿರುವುದು, ಕೃಷಿ ಕಾರ್ಯಕ್ರಮಗಳ ಜಾರಿ ಮತ್ತು ಅಭಿವೃದ್ಧಿ ಸಲಹೆ ನೀಡಲು ಜಿಲ್ಲಾ ಹಂತದಲ್ಲಿಯೇ ಕಾರ್ಯಪಡೆ ರಚಿಸಿದರು; ಜನರಿಗೆ ಸಿಗುತ್ತಾರೆ ಎಂಬ ಸಕಾರಾತ್ಮಕ ಅಂಶಗಳು ಇವೆ. ವಿಧಾನಸಭೆಗೆ ಹಿಂದೆ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಜೆಡಿಎಸ್ ಜೊತೆಗೆ ಗುರುತಿಸಿಕೊಂಡಾಗ ಧರ್ಮಸಿಂಗ್ ಅವರು ರಾಜ್ಯದ ಮುಖ್ಯಮಂತ್ರಿ. ಈಗ ಕ್ಷೇತ್ರದ ಸಂಸದರು. ಚುನಾವಣೆಯಲ್ಲಿ ಅವರಿಗೆ ಮುಖಾಮುಖಿ ಆಗಲು ಬಂಡೆಪ್ಪ ಅವರನ್ನೇ ಜೆಡಿಎಸ್ ಅಯ್ಕೆ ಮಾಡಿದೆ ಎಂಬುದು ಗಮನಾರ್ಹ.
‘ಆಪ್ ಅಭ್ಯರ್ಥಿ ಚಂದ್ರಕಾಂತ್ ಸ್ವಾತಂತ್ರ್ಯ ಸೇನಾನಿ ಪುತ್ರ’
ಬೀದರ್: ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಅದ್ಮಿ ಪಕ್ಷವು ಬೀದರ್ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವ ಚಂದ್ರಕಾಂತ್ ಕುಲಕರ್ಣಿ ಸ್ವಾತಂತ್ರ್ಯ ಸೇನಾನಿಯೊಬ್ಬರ ಪುತ್ರ.
ಬೀದರ್ ನಿವಾಸಿಯೇ ಆಗಿರುವ ಚಂದ್ರಕಾಂತ್ ಅವರು ಗುರುನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದು, ಪ್ರಸ್ತುತ ಪದವಿ ಕಾಲೇಜಿನಲ್ಲಿ ಅಧ್ಯಯನ ವಿಭಾಗದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿ ಸಮೂಹದಲ್ಲಿ ಅವರು ‘ಸಿ.ಕೆ ಸರ್’ ಎಂದೇ ಗುರುತಿಸಲ್ಪಡುತ್ತಾರೆ.
‘ನನ್ನ ತಂದೆ ಸ್ವಾತಂತ್ರ್ಯ ಸೇನಾನಿಯಾಗಿ ದಿ. ಇಂದಿರಾಗಾಂಧಿ ಅವರ ಸರ್ಕಾರದಿಂದ ತಾಮ್ರ ಪತ್ರ ಸ್ವೀಕರಿಸಿದ್ದರು. ಈಗ ತಂದೆ–ತಾಯಿ ಇಬ್ಬರು ಇಲ್ಲ. ವಿದ್ಯಾರ್ಥಿ ಸಮೂಹವನ್ನು ಕ್ರಿಯಾಶೀಲವಾಗಿಸಲು ವ್ಯಕ್ತಿತ್ವ ವಿಕಸನ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇನೆ. ವಿದ್ಯಾರ್ಥಿಗಳ ಸಮೂಹ ನನ್ನೊಂದಿಗಿದೆ. ಹೀಗಾಗಿ, ಸ್ಪರ್ಧೆ ನೀಡುವ ವಿಶ್ವಾಸವಿದೆ’ ಎಂದು ದೂರವಾಣಿ ಮೂಲಕ ತಮ್ಮನ್ನು ಸಂಪರ್ಕಿಸಿದ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಆಪ್ ಅಭ್ಯರ್ಥಿಯಾಗಲು ಕೋರಿ ಅರ್ಜಿಯನ್ನು ಸಲ್ಲಿಸಿದ್ದೆ. ನನ್ನ ಕೆಲಸವನ್ನು ಗಮನಿಸಿದ 9 ಮಂದಿ ಇದ್ದ ಆಯ್ಕೆ ಮಂಡಳಿ ಆಯ್ಕೆ ಮಾಡಿದೆ. ನಾಮಪತ್ರ ಎಂದು ಸಲ್ಲಿಸಬೇಕು ಎಂದು ಇನ್ನೂ ನಿರ್ಧಾರ ಮಾಡಿಲ್ಲ. ಬೆಂಗಳೂರಿನಲ್ಲಿ ಪಕ್ಷದ ಸಭೆಯಲ್ಲಿದ್ದರು, ಬೀದರ್‌ಗೆ ಮರಳಿದ ನಂತರ ನಿರ್ಧರಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.