ADVERTISEMENT

ಈದ್ ಮುಬಾರಕ್ : ನೆಮನೆಯಲ್ಲಿ ಸುರಕುಂಬಾದ ಸವಿ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2012, 5:15 IST
Last Updated 21 ಆಗಸ್ಟ್ 2012, 5:15 IST

ಬಸವಕಲ್ಯಾಣ: ಕಣ್ಣಿಗೆ ಕಾಡಿಗೆ ತಲೆಮೇಲೆ ಟೊಪ್ಪಿಗೆ, ಮೈಮೇಲೆ ಹೊಸ ಪೈಜಾಮಾ ಕುರ್ತಾ; ಅದರ ಮೇಲೆ ಚಿಮುಕಿಸಿದ ಅತ್ತರ್. ಹೀಗಾಗಿ ಬಳಿಗೆ ಹೋದರೆ ಮೂಗಿಗೆ ಬಡಿಯುವ ಸುವಾಸನೆ. ಇದು ಸೋಮವಾರ ಈದ್ ನಿಮಿತ್ತವಾಗಿ ಇಲ್ಲಿನ ಈದ್ಗಾದಲ್ಲಿ ನಮಾಜ್ ಮಾಡಲು ಜಮಾಯಿಸಿದ ಪ್ರತಿಯೊಬ್ಬರ ವೇಷವಾಗಿತ್ತು.

ನಗರದಲ್ಲಿನ ಸಾವಿರಾರು ಮುಸ್ಲಿಂ ಬಾಂಧವರು ಇಲ್ಲಿಗೆ ಆಗಮಿಸಿದ್ದರಿಂದ ಜಾಗ ಸಾಕಾಗದ ಕಾರಣ ಈದ್ಗಾ ಮೈದಾನದ ಹೊರ ಭಾಗದಲ್ಲಿಯೂ ನಿಂತು ಪ್ರಾರ್ಥನೆ ಸಲ್ಲಿಸಲಾಯಿತು. ಇಡೀ ಊರಿಗೆ ಊರೇ ಇಲ್ಲಿ ಸೇರಿದೆಯೇನೋ ಅನಿಸುತ್ತಿತ್ತು. ಎಲ್ಲರೂ ಸಾಲು ಸಾಲಾಗಿ ಶಿಸ್ತಿನಿಂದ ನಿಂತಿದ್ದರು.

ಮೊದಲಿಗೆ ಕೆಲ ಧಾರ್ಮಿಕ ಮುಖಂಡರು ಕುರಾನ ಸಂದೇಶ ಕುರಿತು ಮಾತನಾಡಿದರು. ನಂತರ ಎಲ್ಲರೂ ಬಂದು ಸೇರಿದಾಗ ನಮಾಜ್ ಆರಂಭವಾಯಿತು. ತಾವು ತಂದಿದ್ದ ಹಾಸಿಗೆಯ ಬಟ್ಟೆಯನ್ನು ಹಾಸಿ ಅದರ ಮೇಲೆ ಕುಳಿತು ನಮಾಜ್ ಮಾಡಲಾಯಿತು.

ನಂತರ ಒಬ್ಬರಿಗೊಬ್ಬರು ತಬ್ಬಿಕೊಂಡು `ಈದ್ ಮುಬಾರಕ್~ ಎನ್ನುತ್ತ ಶುಭಾಶಯ ವಿನಿಮಯ ಮಾಡಿಕೊಂಡರು. ಮಕ್ಕಳು, ಪಾಲಕರು, ಸಂಬಂಧಿಕರಿಗೆ ಶುಭಾಶಯ ಹೇಳಿದ ನಂತರ ತಮ್ಮ ಭೇಟಿಗೆ ಆಗಮಿಸಿದ್ದ ಅನ್ಯ ಧರ್ಮೀಯರ ಜತೆಯೂ ಆತ್ಮೀಯತೆಯಿಂದ ಕೈ ಕುಲುಕಿ, ತಬ್ಬಿಕೊಳ್ಳಲಾಯಿತು. ತಮ್ಮ ಮನೆಗಳಿಗೆ ಊಟಕ್ಕೆ ಆಗಮಿಸುವಂತೆ ಬಿನ್ನವಿಸಿಕೊಳ್ಳಲಾಯಿತು.

ಮಧ್ಯಾಹ್ನ ಮುಸ್ಲಿಂ ಬಾಂಧವರ ಮನೆಗಳ ವರಾಂಡಾ, ದೊಡ್ಡದಾದ ಕೋಣೆಗಳಲ್ಲಿ ದಸ್ತರಖಾನಾಗಳನ್ನು ಹಾಸಿ ರುಚಿಕರ ಖಾದ್ಯಗಳನ್ನು ಬಡಿಸಲಾಯಿತು. ಸುರಕುಂಬಾ, ಗುಲಗುಲೆ, ಚಪಾತಿ, ಸಾರು, ಅನ್ನ ಬಡಿಸಲಾಯಿತು. ಕೆಲವೆಡೆ ಮಾಂಸದ ಊಟದ ವ್ಯವಸ್ಥೆ ಸಹ ಮಾಡಲಾಗಿತ್ತು. ಅನ್ಯ ಧರ್ಮೀಯರೇ ಹೆಚ್ಚಾಗಿ ಪಾಲ್ಗೊಂಡಿದ್ದರು. ವ್ಯಾಪಾರಿಗಳು, ನೌಕರರು ಮತ್ತು ರಾಜಕೀಯ ಮುಖಂಡರು ಹೆಚ್ಚಾಗಿ ದಾವತ್‌ಗಳ ಆಯೋಜನೆ ಮಾಡಿದ್ದರು. ತಾಲ್ಲೂಕಿನ ರಾಜೇಶ್ವರ, ಪ್ರತಾಪುರ, ಹುಲಸೂರ, ಮಂಠಾಳದಲ್ಲಿಯೂ ಈದ್‌ನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.