ADVERTISEMENT

ಈಶ್ವರಪ್ಪಗೆ ರೈತರ ಘೇರಾವ್

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2012, 7:50 IST
Last Updated 17 ಅಕ್ಟೋಬರ್ 2012, 7:50 IST

ಬೀದರ್:  ಕಬ್ಬಿನ ಬಾಕಿ ಪಾವತಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳನ್ನು ಇಟ್ಟುಕೊಂಡು ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದ ರೈತರು ಉಪ ಮುಖ್ಯಮಂತ್ರಿಗಳ ಕಾರು ಅಡ್ಡಗಟ್ಟಿ ಘೇರಾವ್ ಮಾಡಿದ್ದು, ಒಂದು ಹಂತದಲ್ಲಿ ಗಾಳಿಯಲ್ಲಿ ಚಪ್ಪಲಿಯನ್ನು ಬೀಸುತ್ತಾ ಅಸಹನೆ ಹೊರಹಾಕಿದರು.

ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನೆಗೆ ಆಗಮಿಸಿದ್ದ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಇಂಥ ಪ್ರತಿಭಟನೆಯನ್ನು ಎದುರಿಸಬೇಕಾಯಿತು. ಈಶ್ವರಪ್ಪ ಅವರ ಕಾರನ್ನು ಅಡ್ಡಗಟ್ಟಿ `ಈಶ್ವರಪ್ಪ ಅವರಿಗೆ ಧಿಕ್ಕಾರ~ ಎಂದು ಘೋಷಣೆ ಕೂಗಿದರು. ಕಾರು ಮುನ್ನುಗ್ಗಿದಂತೆ ಲಬೋ ಲಬೋ ಬಾಯಿ ಬಡಿದು ಆಕ್ರೋಶ ವ್ಯಕ್ತಪಡಿಸಿದರು.

ಸಭೆ ಮುಗಿಸಿ ಹೊರಬಂದ ಉಪ ಮುಖ್ಯಮಂತ್ರಿಗಳಿಗೆ ರೈತರ ನಿಯೋಗ ಮನವಿ ಸಲ್ಲಿಸಲು ಮುಂದಾಯಿತು. `ಅವರು ಮನವಿ ಸ್ವೀಕರಿಸಲಿಲ್ಲ. ನಮ್ಮ ಮನವಿಯನ್ನೇ ನೋಡದ, ಅದನ್ನು ಸ್ವೀಕರಿಸಿದ ಈಶ್ವರಪ್ಪ ಅವರು `ನಾನು ಆದೇಶ ಮಾಡುತ್ತೇನೆ~ ಎಂದು ಹೇಳಿ ಕಾರು ಏರಿದರು~ ಎಂಬುದು  ರೈತರ ಅಸಮಾಧಾನಕ್ಕೆ ಕಾರಣವಾಯಿತು.

ಘೋಷಣೆ, ಪ್ರತಿಭಟನೆ ಮೂಲಕ ದಿಢೀರ್ ಅಸಹನೆ ಹೊರಚೆಲ್ಲಿದ ರೈತರು ಉಪ ಮುಖ್ಯಮಂತ್ರಿಗಳ ಕಾರಿಗೆ ಮುತ್ತಿಗೆ ಹಾಕಿದರು. ಕಾರು ಅಡ್ಡಗಟ್ಟಿದರು. ಪೊಲೀಸರು ಅವರನ್ನು ಸರಿಸಿ ಕಾರಿಗೆ ಹಾದಿಯನ್ನು ಮಾಡಿ ಕೊಡಲು ಮುಂದಾದಾಗ ಅವರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಲಬೋ ಲಬೋ ಎಂದು ಬಾಯಿ ಬಡಿದುಕೊಂಡರು.
ಈಶ್ವರಪ್ಪ ಅವರ ಕಾರು ಮುಂದೆ ಚಲಿಸುತ್ತಿದ್ದಂತೆ ಹಿಂದೆಯೇ ರೈತರೊಬ್ಬರು ಚಪ್ಪಲಿಯನ್ನು ಗಾಳಿಯಲ್ಲಿ ಅಲ್ಲಾಡಿಸುತ್ತಾ ತಮ್ಮ ನೋವನ್ನು ಹೊರಹಾಕಿದರು.

ಈ ಗೊಂದಲದಲ್ಲಿಯೇ ಉಪ ಮುಖ್ಯಮಂತ್ರಿಗಳಿದ್ದ ಕಾರು ಸ್ಥಳದಿಂದ ನಿರ್ಗಮಿಸಿದಾಗ, ರೈತರು ಇತ್ತ ರಸ್ತೆಯಲ್ಲಿ ಧರಣಿ ಮಾಡಿ ತಮ್ಮ ಪ್ರತಿಭಟನೆ ಮುಂದುವರಿಸಿದರು.`ರೈತರ ಸಮಸ್ಯೆಗಳನ್ನು ಆಲಿಸಲು ಮನಸ್ಸಿಲ್ಲ ಎಂದರೆ ಹೇಗೆ, ನಾವು ಯಾರನ್ನು ಕೇಳಬೇಕು. ಆದೇಶ ಮಾಡುತ್ತೇನೆ ಎಂದು ಹೊರಟುಹೋದರೂ, ಸಮಸ್ಯೆಯನ್ನೇ ಆಲಿಸದೆ ಏನೆಂದು ಆದೇಶ ಮಾಡುತ್ತಾರೆ~ ಎಂದು ರೈತ ಪ್ರತಿನಿಧಿಗಳು ಬಳಿಕ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.