ADVERTISEMENT

ಉತ್ತಮ ಸೇವೆಗೆ ಬದ್ಧ: ಹಂದೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2012, 6:45 IST
Last Updated 9 ಫೆಬ್ರುವರಿ 2012, 6:45 IST

ರಾಯಚೂರು: ಬ್ಯಾಂಕಿಂಗ್ ಕ್ಷೇತ್ರದಲ್ಲಿ ತನ್ನದೇ ವಿಶಿಷ್ಟ ರೀತಿಯಲ್ಲಿ ಗ್ರಾಹಕರಿಗೆ ಸೇವೆ ಒದಗಿಸುತ್ತ ಬಂದಿರುವ ಕರ್ಣಾಟಕ ಬ್ಯಾಂಕ್ ರಾಜ್ಯ ಹಾಗೂ ಹೊರ ರಾಜ್ಯದಲ್ಲಿ ಈಗ 490 ಶಾಖೆ ಹಾಗೂ 350 ಎಟಿಎಂಗಳನ್ನು ಹೊಂದಿದೆ. ಮಾರ್ಚ್ ತಿಂಗಳೊಳಗೆ ಇನ್ನೂ 60 ಶಾಖೆ ಆರಂಭಗೊಳ್ಳಲಿದೆ. ಒಟ್ಟು 550 ಶಾಖೆ ಮೂಲಕ ಗ್ರಾಹಕರಿಗೆ ಪರಿಣಾಮಕಾರಿ ರೀತಿ ಸೇವೆ ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಕರ್ಣಾಟಕ ಬ್ಯಾಂಕ್‌ನ ಮಹಾ ಪ್ರಬಂಧಕ ಪಿ.ಜೈರಾಮ ಹಂದೆ ಹೇಳಿದರು.

ಬುಧವಾರ ಇಲ್ಲಿನ ಮಕ್ತಲ್‌ಪೇಟೆಯ ಸಿಟಿ ಟಾಕೀಸ್ ರಸ್ತೆಯ ಹತ್ತಿರ ಕರ್ಣಾಟಕ ಬ್ಯಾಂಕ್‌ನ ರಾಯಚೂರು ಶಾಖೆಯ ಸ್ಥಳಾಂತರ ಹಾಗೂ ಎಟಿಎಂ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.

ಕರ್ಣಾಟಕ ಬ್ಯಾಂಕ್ ನಿನ್ನೆಯವರೆಗೆ( ಮಂಗಳವಾರ) 50,000 ಕೋಟಿ ವ್ಯವಹಾರ ಮಾಡಿದೆ. ಮಾರ್ಚ್ ತಿಂಗಳಷ್ಟೊತ್ತಿಗೆ 54,000 ಕೋಟಿ ವ್ಯವಹಾರ ಮಾಡುವ ಗುರಿ ಹೊಂದಿದೆ. ಬ್ಯಾಂಕ್‌ನ ರಾಯಚೂರು ಶಾಖೆಯಲ್ಲಿ 35 ಕೋಟಿ ವ್ಯವಹಾರ ಆಗಿದೆ. ರಾಜ್ಯದಲ್ಲಿಯೇ ಗರಿಷ್ಠ 297 ಶಾಖೆಗಳನ್ನು ಬ್ಯಾಂಕ್ ಹೊಂದಿದೆ ಎಂದು ತಿಳಿಸಿದರು.

ಮುಂಬರುವ ದಿನಗಳಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು, ಮಾನ್ವಿ, ಲಿಂಗಸುಗೂರಲ್ಲಿ ಬ್ಯಾಂಕ್ ತನ್ನ ಶಾಖೆ ಆರಂಭಿಸಲಿದೆ. ಸದ್ಯ ಬ್ಯಾಂಕಿನ ಬಹುಪಾಲು ಶಾಖೆಗಳು ಗ್ರಾಮೀಣ ಮಟ್ಟದಲ್ಲಿಯೇ ಕೆಲಸ ಮಾಡುತ್ತಿವೆ. ಗ್ರಾಹಕರ ಅನುಕೂಲಕ್ಕಾಗಿ ಗೋಲ್ಡ್ ಕಾರ್ಡ್ ಹೊರ ತರುತ್ತಿದೆ. ಈ ಕಾರ್ಡ್ ಹೊಂದಿದ ಗ್ರಾಹಕರು ಎಟಿಎಂನಿಂದ 25 ಸಾವಿರ ಮೊತ್ತವನ್ನು ಏಕಕಾಲಕ್ಕೆ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಸ್ಥಳಾಂತರ ಶಾಖೆ ಉದ್ಘಾಟಿಸಿದ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಜವಾಹರ ಜೈನ್ ಮಾತನಾಡಿ, ಕರ್ಣಾಟಕ ಬ್ಯಾಂಕ್ ಎಲ್ಲ ವರ್ಗದ ಜನತೆಗೆ ಉತ್ತಮ ರೀತಿ ಸೇವೆ ಒದಗಿಸುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಶಾಖೆ ಆರಂಭಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಎಟಿಎಂ ಉದ್ಘಾಟಿಸಿದ ಉದ್ಯಮಿ ಈ.ಆಂಜನೇಯ ಮಾತನಾಡಿ, ಉದ್ಯಮ ಕ್ಷೇತ್ರದಲ್ಲಿ ತಮ್ಮ ಏಳ್ಗೆಗೆ ಕರ್ಣಾಟಕ ಬ್ಯಾಂಕ್ ಸಾಕಷ್ಟು ಸಹಕಾರ ನೀಡಿದೆ ಎಂದು ತಿಳಿಸಿದರು.
ಮತ್ತೊಬ್ಬ ಅತಿಥಿ ಜಯಂತರಾವ್ ಪತಂಗೆ ಮಾತನಾಡಿ, ಬ್ಯಾಂಕ್‌ನ ಈ ಶಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದ ಸೌಜನ್ಯ, ಸ್ನೇಹಪರ ನಡತೆ ಬ್ಯಾಂಕಿನ ಏಳ್ಗೆಗೆ ಕಾರಣವಾಗಿದೆ ಎಂದು ನುಡಿದರು.
ಬ್ಯಾಂಕಿನ ಪ್ರಾದೇಶಿಕ ಸಹ ವ್ಯವಸ್ಥಾಪಕ ರುದ್ರಯ್ಯ ಅವರು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಬ್ಯಾಂಕ್‌ನ ವ್ಯವಸ್ಥಾಪಕ ರಾಘವೇಂದ್ರ ಡಿ. ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.