ADVERTISEMENT

ಉದ್ದಿಗೆ ಕಡಿಮೆ ಬೆಲೆ: ರೈತರ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 5:10 IST
Last Updated 4 ಅಕ್ಟೋಬರ್ 2012, 5:10 IST
ಉದ್ದಿಗೆ ಕಡಿಮೆ ಬೆಲೆ: ರೈತರ ಮುತ್ತಿಗೆ
ಉದ್ದಿಗೆ ಕಡಿಮೆ ಬೆಲೆ: ರೈತರ ಮುತ್ತಿಗೆ   

ಬಸವಕಲ್ಯಾಣ: ಉದ್ದಿಗೆ ಕೇಂದ್ರ ಸರ್ಕಾರ ಹೆಚ್ಚಿನ ಬೆಲೆ ನಿಗದಿ ಮಾಡಿದ್ದರೂ ಇಲ್ಲಿನ ಅಡತ್ ಬಜಾರ್‌ನವರು ಅತ್ಯಂತ ಕಡಿಮೆ ಬೆಲೆ ಕೊಡುತ್ತಿರುವುದನ್ನು ಖಂಡಿಸಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘದಿಂದ ಇಲ್ಲಿನ ಎಪಿಎಂಸಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.

ಸಂಘದ ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ ಜಮಖಂಡಿ ಮಾತನಾಡಿ, ಕೇಂದ್ರ ಸರ್ಕಾರ ಉದ್ದಿಗೆ ರೂ. 4,300 ಬೆಲೆ ನಿಗದಿಪಡಿಸಿದೆ. ಅದಕ್ಕೆ ರಾಜ್ಯ ಸರ್ಕಾರದವರು ರೂ. 500 ಸೇರಿಸಿ 4,800 ರೂಪಾಯಿ ಬೆಂಬಲ ಬೆಲೆ ಕೊಟ್ಟು ಖರೀದಿಸಬೇಕಾಗಿದೆ. ಇದಲ್ಲದೆ ಅಡತ್‌ನವರು ಸಹ ಇದೇ ಬೆಲೆಗೆ ಖರೀದಿ ಮಾಡಬೇಕು. ಆದರೆ ಕೇವಲ ರೂ. 2,500-2,800 ದರದಲ್ಲಿ ಮಾತ್ರ ಖರೀದಿ ಮಾಡಿ ರೈತರಿಗೆ ಮೋಸ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಮುಖಂಡ ವಿಶ್ವನಾಥ ಪಾಟೀಲ ಮಾತನಾಡಿ ಸರ್ಕಾರ ಬೆಂಬಲ ಬೆಲೆ ಕೊಟ್ಟು ಉದ್ದನ್ನು ಖರೀದಿಸದಿದ್ದರೆ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲಾಗುವುದು. ರೈತರಲ್ಲಿ ಜಾಗೃತಿ ಇಲ್ಲದ್ದರಿಂದ ಮತ್ತು ಸಂಘಟಿತರಾಗದ ಕಾರಣ ಹೀಗೆ ಶೋಷಣೆ ನಡೆಯುತ್ತಿದೆ ಎಂದರು.

ಶ್ರೀಮಂತ ಬಿರಾದಾರ ಮಾತನಾಡಿ ಯಾವುದೇ ಸರ್ಕಾರ ರೈತರ ಪರವಾಗಿಲ್ಲ ಎಂದು ಕಿಡಿ ಕಾರಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಸ್ವಾಮಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸುಭಾಷ ರಗಟೆ, ಪ್ರಮುಖರಾದ ಭೀಮಣ್ಣ ಕುಡತೆ, ಸಿದ್ರಾಮಪ್ಪ ಅಣದೂರೆ, ಮಾಣಿಕಪ್ಪ ಮೇಟಿಕಾರ್, ಸತೀಶ ನಾಗೂರೆ ಮಾತನಾಡಿ ರೈತರ ಉತ್ಪನ್ನಕ್ಕೆ ಸರ್ಕಾರ ಸರಿಯಾದ ಬೆಲೆ ಕೊಡುತ್ತಿಲ್ಲ ಎಂದು ದೂರಿದರು.

ಪ್ರಮುಖರಾದ ಸಿದ್ಧಣ್ಣ ಸಣ್ಮಣಿ, ಸಂಜೀವ ಕುಂಟೆಗಾವೆ, ಸಿದ್ರಾಮ ಖಂಡಾಳೆ, ಖಂಡು ಕುಲಕರ್ಣಿ, ಬಸವರಾಜ ಉಸ್ತುರೆ, ಉದಯಭಾನು ಪಾಟೀಲ, ಶಶಿಕಾಂತ ಮಾನೆ, ಬಸವರಾಜ ಮಠಪತಿ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.