ADVERTISEMENT

ಎಪಿಎಂಸಿ ಅವ್ಯವಸ್ಥೆ: ಅಧಿಕಾರಿಗಳ ಅಸಹಾಯಕತೆ!

​ಪ್ರಜಾವಾಣಿ ವಾರ್ತೆ
Published 8 ಜೂನ್ 2013, 9:17 IST
Last Updated 8 ಜೂನ್ 2013, 9:17 IST

ಬೀದರ್: `ನನಗೆ ರಾಜಕಾರಣಿಗಳಿಂದ ಜೀವ ಬೆದರಿಕೆ ಇದೆ. ನನ್ನ ಜೀವಕ್ಕೆ ಅಪಾಯ ಆದರೆ ನನ್ನ ಹೆಂಡತಿ, ಮಕ್ಕಳಿಗೆ ಯಾರು ಆಸರೆ? ನೋಡಿಕೊಳ್ಳುವರು ಯಾರು? ನೀವು ನೋಡುತ್ತಿರಾ'...

ಬೀದರ್ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಸಿ.ಆರ್. ಮಂಜುನಾಥ ಅವರ ಪ್ರಶ್ನೆ ಇದು. ಎಪಿಎಂಸಿ ವಾರ್ಷಿಕ ಕ್ರಿಯಾ ಯೋಜನೆಯ ವಿವರ ತಿಳಿಸಲು ಅಧ್ಯಕ್ಷರು ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಎದುರಾದ ಮಾರುಕಟ್ಟೆ ಅವ್ಯವಸ್ಥೆ ಕುರಿತ ಪ್ರಶ್ನೆಗೆ ಕಾರ್ಯದರ್ಶಿಗಳು ಉತ್ತರಿಸಿದ ಪರಿ ಇದು.

ಆವರಣದಲ್ಲಿ ಮಳೆ ನೀರು ಹರಿದು ಹೋಗಲಾಗದ ಸ್ಥಿತಿ, ರಸ್ತೆ ದುಃಸ್ಥಿತಿ ಸರಿಪಡಿಸಲಾಗುವುದಿಲ್ಲವೇ ಎಂಬ ಪ್ರಶ್ನೆಗೆ ಅಸಹಾಯಕತೆ ವ್ಯಕ್ತಪಡಿಸಿದ ಅವರು, `ಅನೇಕ ಬಾರಿ ಈ  ಅವ್ಯವಸ್ಥೆ ಬಗೆಗೆ ಸಂಬಂಧಿಸಿದವರ ಗಮನಕ್ಕೆ ತಂದಿದ್ದೇನೆ. ಅದಕ್ಕೆ ಸ್ಪಂದಿಸುತ್ತಲೇ ಇಲ್ಲ. ಬದಲಾಗಿ, ನನಗೆ ಜೀವ ಬೆದರಿಕೆ ಹಾಕಿದ್ದಾರೆ' ಎಂದರು.

ಗಾಂಧಿಗಂಜ್‌ನಲ್ಲಿ ತರಕಾರಿ ವ್ಯಾಪಾರಿಗಳು ರಸ್ತೆಯಲ್ಲಿ ನಿಂತುಕೊಂಡೇ ತರಕಾರಿ ಮಾರುತ್ತಾರೆ. ಇದರಿಂದ ವಾಹನಗಳ ಸಂಚಾರಕ್ಕೆ ತೊಂದರೆ ಆಗಿದೆ. ಈ ಬಗ್ಗೆ ಏನು ಕ್ರಮ ತೆಗೆದು ಕೊಂಡಿದ್ದೀರಿ ಎಂಬ ಪ್ರಶ್ನೆ ಎದುರಾದಾಗ ಕಾರ್ಯದರ್ಶಿ ಮಂಜುನಾಥ  ಅವರು ಏಕಾಏಕಿ ಕೋಪಗೊಂಡರು.

`ತರಕಾರಿ ವ್ಯಾಪಾರಿಗಳಿಗೆ ಅನೇಕ ಬಾರಿ ಸೂಚನೆ ನೀಡಿದ್ದರೂ ಕೇಳುತ್ತಿಲ್ಲ. ಏನು ಮಾಡಬೇಕು? ಪೊಲೀಸರಿಗೆ ದೂರು ನೀಡಿದ್ದರೂ ಪ್ರಯೋಜನ ಆಗುತ್ತಿಲ್ಲ. ತರಕಾರಿ ವ್ಯಾಪಾರಿಗಳಿಗೆ ಒತ್ತಡ ಹಾಕಿದ್ದರೆ ರಾಜಕಾರಣಿಗಳಿಂದ ಜೀವ ಬೆದರಿಕೆ ಬರುತ್ತಿದೆ, ಈ ರೀತಿ ಜೀವ ಬೆದರಿಕೆ ಬಂದರೆ ಹೇಗೆ ಕೆಲಸ ಮಾಡಬೇಕು? ಎಂದು ಪ್ರಶ್ನಿಸಿದರು.

ಅವ್ಯವಸ್ಥೆಯನ್ನು ಕುರಿತಂತೆ ಗಮನಸೆಳೆದ ಪತ್ರಕರ್ತರ ಮೇಲೇ ಏರು ದನಿಯಲ್ಲಿ ಅವರು ತಿರುಗಿ ಬಿದ್ದರು. ಆದರೆ,  ತಮಗೆ ಯಾವ ಅಧಿಕಾರಿ ಅಥವಾ ರಾಜಕಾರಣಿಯಿಂದ ಜೀವ ಬೆದರಿಕೆ ಇದೆ ಎಂಬುದನ್ನು ಬಹಿರಂಗ ಪಡಿಸಲಿಲ್ಲ.

`ವ್ಯಾಪಾರಿಗಳ ಮೇಲೆ ಒತ್ತಡ ಹಾಕಿ ಜೀವ ಕಳೆದುಕೊಂಡು ಕೆಲಸ ಮಾಡಿ ಅಂತಿರಾ, ಜೀವ ಹೋದರೆ ನನ್ನ ಹೆಂಡತಿ, ಮಕ್ಕಳಿಗೆ ಯಾರು ನೋಡುತ್ತಾರೆ, ನೀವೂ ನೋಡುತ್ತಿರಾ ಎಂದು ಪ್ರಶ್ನೆ ಹಾಕಿದರು.  `ಗಾಂಧಿಗಂಜ್‌ನ ಅವ್ಯವಸ್ಥೆ ಸರಿಪಡಿಸುವ ವಿಷಯದಲ್ಲಿಯೂ ನಾವು ನಿರ್ಲಕ್ಷ್ಯ ವಹಿಸಿಲ್ಲ. ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ' ಎಂದು ನಿರ್ಗಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.