ADVERTISEMENT

`ಎರೆಹುಳು ಗೊಬ್ಬರ: ಉತ್ತಮ ಲಾಭ'

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 9:05 IST
Last Updated 19 ಜುಲೈ 2013, 9:05 IST

ಹುಮನಾಬಾದ್: ಎರೆಹುಳು ಗೊಬ್ಬರ ತಯಾರಿಕೆ ಒಂದು ಲಾಭಾದಾಯಕ ಉದ್ಯಮ, ಆಸಕ್ತರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮೋಳಕೇರಾ ಗ್ರಾಮದ ಬ್ಲೇಸ್ ಗ್ರಾಮೀಣ ಹಾಗೂ ನಗರಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ವೈಜಿನಾಥ ಬಂಡೆನೋರ ಸಲಹೆ ನೀಡಿದರು.

ತಾಲ್ಲೂಕಿನ ಮದರಗಾಂವ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ರೈತರಿಗೆ ಮಾರ್ಗದರ್ಶನ ನೀಡಿದರು. ಗುಲ್ಬರ್ಗ ಜಿಲ್ಲೆಯಲ್ಲಿ 3ಸಾವಿರ, ಬೀದರ್ ಜಿಲ್ಲೆಯಲ್ಲಿ 2ಸಾವಿರ ಸೇರಿ ಒಟ್ಟು 5ಸಾವಿರ ರೈತರಿಗೆ ತಲಾ ರೂ.11ಸಾವಿರ ವಿತರಿಸುವ ಸಂಬಂಧ ರೂ. 5ಕೋಟಿ ವಿನಿಯೋಗಿಸಲಾಗುತ್ತಿದೆ ಎಂದು ತಿಳಸಿದರು.

ಭೂಮಿಯ ಫಲವತ್ತತೆ ಹೆಚ್ಚುವುದರ ಜೊತೆಗೆ ಪ್ರತಿ ಫಲಾನುಭವಿ ವರ್ಷಕ್ಕೆ ಕನಿಷ್ಠ ರೂ.1ಲಕ್ಷ ಆದಾಯ ಗಳಿಸಬಹುದು ಎಂದರು. ಯೋಜನೆಯಡಿ ಕನಿಷ್ಟ 10ಸಾವಿರ ಜನರಿಗೆ ಉದ್ಯೋಗ ಸಿಗಲಿದೆ. ಸೌರ ದೀಪ ಅಳವಡಿಸಲು ಬೀದರ್ ಮತ್ತು ಗುಲ್ಬರ್ಗ ಜಿಲ್ಲೆ ಚಿಂಚೋಳಿ ತಾಲ್ಲೂಕಿನ 20ಸಾವಿರ ಜನರಿಗೆ ಸೋಲಾರ್ ವಿದ್ಯುತ್ ದೀಪ ಅಳವಡಿಸಲು ತಲಾ ರೂ. 15ಸಾವಿರ ಮಂಜೂರು ಮಾಡಲಾಗುವುದು ಎಂದು ಹೇಳಿದರು. ಹಳ್ಳಿಗಳಲ್ಲಿ ಸಂಚರಿಸಿ ಗ್ರಾಮೀಣ ಜನರ ಸದಸ್ಯತ್ವ ನೋಂದಣಿಗೆ ಮುಂದಾದ ಸಂಸ್ಥೆಯ ಕಾರ್ಯವನ್ನು ಪಂಡಿತ ದೀನ್ ದಯಾಳ ಉಪಾಧ್ಯಾಯ, ಸಹಕಾರ ಬ್ಯಾಂಕ್ ನಿರ್ದೇಶಕ ಶಿವಪುತ್ರ ಸ್ವಾಮಿ ಶ್ಲಾಘಿಸಿದರು.

ಎರಡು ಯೋಜನೆಗಳಿಗಾಗಿ ಒಟ್ಟು ರೂ. 35ಕೋಟಿ ವಿನಿಯೋಗಿಸಲಾಗುತ್ತಿದೆ ಎಂದು ಸಂಸ್ಥೆ ಯೋಜನಾಧಿಕಾರಿ ಮಲ್ಲಿಕಾರ್ಜುನ ಬುಳ್ಳಾ ವಿವರಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜಶೇಖರ ಪಾಟೀಲ ಮದರಗಾಂವ, ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ ಹುಡೆದ್, ಬಸವರಾಜ ಕುರುಬಖೇಳಗಿ, ಕಂಟೆಪ್ಪ ಉಡಬಾಳಕರ್, ಬಸವರಾಜ ಹುಣಸಗೇರಿ, ಮಹೇಶ ಯಶವಂತರಾವ, ನಾಗಣ್ಣ ಮೋಳಕೇರಿ, ರಮೇಶ ಧುಮ್ಮನಸೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.