ADVERTISEMENT

ಏಪ್ರಿಲ್ 7ರಿಂದ ಬೀದರ್ ಉತ್ಸವ: ಸಮೀರ್ ಶುಕ್ಲ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2012, 10:05 IST
Last Updated 20 ಮಾರ್ಚ್ 2012, 10:05 IST

ಬೀದರ್: ಏಪ್ರಿಲ್ 7ರಿಂದ 9 ರವರೆಗೆ ಬೀದರ್ ಉತ್ಸವವನ್ನು ಅದ್ದೂರಿಯಿಂದ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಮೀರ್ ಶುಕ್ಲ ಸೋಮವಾರ ತಿಳಿಸಿದರು.ರಾಜ್ಯದಾದ್ಯಂತ ಬರ ಇದ್ದ ಕಾರಣದಿಂದಾಗಿ ಉತ್ಸವ ನಡೆಸದಂತೆ ಸರ್ಕಾರ ಆದೇಶಿಸಿದ ಹಿನ್ನೆಲೆಯಲ್ಲಿ ಈ ಹಿಂದೆ ಫೆಬ್ರವರಿ 17ರಿಂದ 19ರವರೆಗೆ ನಿಗದಿ ಪಡಿಸಲಾಗಿದ್ದ ಉತ್ಸವ ಮುಂದೂಡಲಾಗಿತ್ತು.

ಪ್ರತಿ ವರ್ಷದಂತೆ ಈ ಬಾರಿಯೂ ಉತ್ಸವ ಆಯೋಜಿಸಲಾಗುವುದು. ದೇಶದ ಖ್ಯಾತ ಕಲಾವಿದರು ಕಾರ್ಯಕ್ರಮ ನೀಡಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಜಾನಪದ ಮತ್ತು ಸಾಂಪ್ರದಾಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ರಂಗಮಂದಿರದಲ್ಲಿ ನಡೆಯಲಿದೆ. ಇಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಮತ್ತು ಬೀದರಿನ ವಿವಿಧ ತಾಲ್ಲೂಕುಗಳ ಕಲಾವಿದರಿಗೆ ಅವಕಾಶ ನೀಡಲಾಗುವುದು.

ಈಗಾಗಲೇ ಕಲಾವಿದರ ಪಟ್ಟಿಯನ್ನು ಬಹುತೇಕ ಅಂತಿಮಗೊಳಿಸಲಾಗಿದೆ. ಸಂಜೆ ಬೀದರ್ ಕೋಟೆಯ ಮುಖ್ಯ ವೇದಿಕೆಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಏಪ್ರಿಲ್ 7ರಂದು ಗುರುಕಿರಣ್, ಫ್ಲೊರಾ ಸೈನಿ, ಕುನಾಲ್ ಗಂಜಾವಾಲ, ಏಪ್ರಿಲ್ 8ರಂದು ಸಾಬ್ರಿ ಬ್ರದರ್ಸ್‌, ಗುಜರಾತಿನ ಸಿದ್ಧಿ ಧಮಾಲ್ ನೃತ್ಯ, ಏಪ್ರಿಲ್ 9ರಂದು ಜಾವೇದ್ ಅಲಿ, ಕಾಶ್ಮೀರ್ ಷಾ ನೃತ್ಯದ ತಂಡದ ಕಾರ್ಯಕ್ರಮಗಳು ರಂಜಿಸಲಿವೆ.
 
ಜಿಲ್ಲೆಯ ಆಯ್ದ ಆರು ತಂಡಗಳಿಗೆ ಮುಖ್ಯ ವೇದಿಕೆಯಲ್ಲಿ ಕಾರ್ಯಕ್ರಮ ನೀಡಲು ಅವಕಾಶ ಕಲ್ಪಿಸಲಾಗುವುದು ಎಂದರು.ತಾಲ್ಲೂಕುಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಮಾರ್ಚ್ 26ರಂದು ಔರಾದ್, 27ರಂದು ಭಾಲ್ಕಿ, 28ರಂದು ಹುಮನಾಬಾದ್, 29ರಂದು ಬಸವಕಲ್ಯಾಣ ಮತ್ತು 30ರಂದು ಬೀದರ್ ತಾಲ್ಲೂಕಿನಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಏಪ್ರಿಲ್ 8ರಂದು ಮಹಮೂದ್ ಗಾವಾನ್ ಮದರಸಾದಲ್ಲಿ ಮುಷೈರಾ ನಡೆಯಲಿದೆ. ಇದರಲ್ಲಿ ರಾಹತ್ ಇಂದೋರಿ, ಮಂಜರ್ ಭೋಪಾಲಿ ಸೇರಿದಂತೆ 13ಮಂದಿ ಖ್ಯಾತ ಶಾಯರ್‌ಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಮಕ್ಕಳಿಗಾಗಿ ಈ ಬಾರಿ ದೊಡ್ಡ ಪ್ರಮಾಣದಲ್ಲಿ ಕಿಡ್ ಜೋನ್ ಸಜ್ಜುಗೊಳಿಸಲಾಗುವುದು. ಇಲ್ಲಿ ಮಕ್ಕಳಿಗಾಗಿ 25ಬಗೆಯ ಆಟಗಳು ಇರಲಿವೆ. ವೈವಿಧ್ಯಮಯ ಸಾಹಸ ಕ್ರೀಡೆಗಳನ್ನು ಸಂಘಟಿಸಲಾಗುವುದು. ಪತಂಗ ಉತ್ಸವ, ಬಾಡಿಬಿಲ್ಡಿಂಗ್, ಕುಸ್ತಿ ಸ್ಪರ್ಧೆಗಳು ನಡೆಯಲಿವೆ.

ಮಕ್ಕಳ ಮತ್ತು ಮಹಿಳಾ ಉತ್ಸವಗಳನ್ನು ಆಯೋಜಿಸಲಾಗುವುದು. ಉತ್ಸವ ಆರಂಭಕ್ಕೆ ಮೊದಲು ಎಲ್ಲಾ ರೀತಿಯ ಕ್ರೀಡಾಕೂಟಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.

ಉತ್ಸವದ ದಿನ ಬೆಳಿಗ್ಗೆ 9ಗಂಟೆಗೆ ಬರೀದ್ ಶಾಹಿ ಉದ್ಯಾನದಿಂದ ಕೋಟೆಯವರೆಗೆ ಮೆರವಣಿಗೆ ನಡೆಯಲಿದೆ. ಬಿಸಿಲು ಹೆಚ್ಚಾಗುವ ಕಾರಣ ಕೋಟೆಯ ಒಳಗೆ ಕುಡಿಯುವ ನೀರಿನ ಸೂಕ್ತ ವ್ಯವಸ್ಥೆ ಕಲ್ಪಿಲಾಗುವುದು. ಧೂಳು ಏಳದಂತೆ ಕ್ರಮ ಕೈಗೊಳ್ಳಲಾಗುವುದು. ಪ್ರತಿ ವರ್ಷದಂತೆ ಈ ಬಾರಿ ವಿವಿಧ ಇಲಾಖೆಗಳ ಮಳಿಗೆಗಳನ್ನು ಸಹ ತೆರಯಲಾಗುವುದು ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.