ADVERTISEMENT

ಔರಾದ್: ಯೋಧರ ಪಥ ಸಂಚಲನ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2012, 8:15 IST
Last Updated 17 ಮಾರ್ಚ್ 2012, 8:15 IST

ಔರಾದ್: ಹೈದರಾಬಾದ್‌ನ ರ‌್ಯಾಪಿಡೆಕ್ಸನ್ (ಆರ್.ಎ.ಎಫ್.) ಯೋಧರು ಶುಕ್ರವಾರ ನಗರದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಿ ಜನರ ಗಮನ ಸೆಳೆದರು.

ಪುರುಷೋತ್ತಮಕುಮಾರ ಅವರ ನೇತೃತ್ವದ 68 ಯೋಧರ ತಂಡ ಮಧ್ಯಾಹ್ನ ನಗರದ ಪ್ರಮುಖ ಧಾರ್ಮಿಕ ಸ್ಥಳಗಳಿಗೆ ಬೇಟಿ ನೀಡಿ ಮಾಹಿತಿ ಕಲೆ ಹಾಕಿತು. ಇಲ್ಲಿಯ ಖ್ಯಾತ ಅಮರೇಶ್ವರ ದೇವಸ್ಥಾನ, ಹನುಮಾನ ದೇವಾಲಯ ಮತ್ತು ಪಕ್ಕದಲ್ಲಿನ ಮಸೀದಿಗೂ ಭೇಟಿ ನೀಡಿ ಚಿತ್ರಸಹಿತಿ ಮಾಹಿತಿ ಸೆರೆ ಹಿಡಿದುಕೊಂಡರು.

ನಂತರ ಪುರಾತನ ಕಾಲದ ಅಗಸಿ ಮೂಲಕ ಗಾಂಧಿ ವೃತ್ತದಿಂದ ಪೊಲೀಸ್ ಠಾಣೆಗೆ ತೆರಳಿದರು. ಅಲ್ಲಿ ವಿವಿಧ ಸಮುದಾಯ ಧುರೀಣರೊಂದಿಗೆ ಸಮಾಲೋಚನೆ ನಡೆಸಿ ತಾವು ಇಲ್ಲಿಗೆ ಬಂದ ಉದ್ದೇಶ ಹೇಳಿದರು. ಅಯೋಧ್ಯ ಘಟನೆ ವೇಳೆ ದೇಶಾದ್ಯಂತ ಕೋಮು ಸೌಹಾರ್ದತೆಗೆ ಧಕ್ಕೆಯಾಗಿ ಅಮಾಯಕ ಜನ ಬಲಿಯಾಗಬೇಕಾಯಿತು. ಈ ಹಿನ್ನೆಲೆಯ್ಲ್ಲಲಿ ಕೇಂದ್ರ ಗೃಹ ಇಲಾಖೆ ದೇಶದ ವಿವಿಧೆಡೆ ಆರ್‌ಎಎಫ್ ಯೋಧರ ತಂಡ ರಚನೆ ಮಾಡಿದೆ ಎಂದು ಮುಖ್ಯಸ್ಥ ಪುರುಷೋತ್ತಮಕುಮಾರ ಹೇಳಿದರು.

ಹೈದರಾಬಾದ್‌ನಲ್ಲಿರುವ ನಮ್ಮ ತಂಡ ಬೀದರ್, ಗುಲ್ಬರ್ಗ ಸೇರಿದಂತೆ ಈ ಭಾಗದಲ್ಲಿ ಕೋಮು ಗಲಭೆಯಾದಾಗ ನಾವು ಜನರ ನೆರವಿಗೆ ಬರುತ್ತೇವೆ ಎಂದರು. ಸ್ಥಳೀಯ ಪೊಲೀಸರಿಗೆ ಘಟನೆ ನಿಯಂತ್ರಿಸಲು ಕಷ್ಟವಾದಾಗ ಆರ್‌ಎಎಫ್ ತಂಡ ಘಟನಾ ಸ್ಥಳಕ್ಕೆ ತಕ್ಷಣ ಧಾವಿಸಲಿದೆ.

ಈ ಯೋಧರ ಪಡೆ 24 ಗಂಟೆಗಳ ಕಾಲ ಜಾಗೃತವಾಗಿದ್ದು, ಮಾಹಿತಿ ಬಂದ 10ರಿಂದ 15 ನಿಮಿಷದೊಳಗೆ ಕೇಂದ್ರ ಸ್ಥಾನದಿಂದ ಹೊರಡುತ್ತೇವೆ. ಪರಿಸ್ಥಿತಿ ನಿಯಂತ್ರಿಸುವ ಸಂಬಂಧ ನಮ್ಮಲ್ಲಿ ಎಲ್ಲ ರೀತಿಯ ಅತ್ಯಾಧುನಿಕ ಸೌಲಭ್ಯಗಳಿವೆ. ಮತ್ತು 15 ದಿನಗಳ ಕಾಲ ಸಾಕಾಗುವಷ್ಟು ಆಹಾರ ಸಾಮಗ್ರಿಗಳು ನಮ್ಮ ಜೊತೆ ಇರುತ್ತವೆ ಎಂದು ತಿಳಿಸಿದರು.

ಪಿಎಸ್‌ಐ ಜಿ.ಎಸ್. ಬಿರಾದಾರ, ಧುರೀಣರಾದ ಶಿವರಾಜ ರಾಗಾ, ರಹೀಮ್‌ಸಾಬ್, ಅಮಿರೋದ್ದಿನ್, ಶರಣಪ್ಪ ಪಾಟೀಲ, ದಯಾನಂದ ಘುಳೆ ಸೇರಿದಂತೆ ವಿವಿಧ ಸಮುದಾಯ ಮುಖಂಡರು ಉಪಸ್ಥಿತರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.