ಔರಾದ್: ಪಟ್ಟಣದ ಕೆಲ ಸರ್ಕಲ್‌ಗಳಲ್ಲಿ ಸುಗಮ ಸಂಚಾರಕ್ಕಾಗಿ ಸೋಲಾರ್ ಸಿಗ್ನಲ್ ದೀಪಗಳನ್ನು ಅಳವಡಿಸಲಾಗಿದೆ.
ಪಟ್ಟಣದ ಕನ್ನಡಾಂಬೆ ವೃತ್ತ, ಬಸ್ ನಿಲ್ದಾಣ, ಬಸವೇಶ್ವರ ವೃತ್ತ, ಸಿದ್ಧರಾಮೇಶ್ವರ ಚೌಕ್, ಪ್ರವಾಸಿ ಮಂದಿರ ಮತ್ತು ಮಿನಿ ವಿಧಾನಸೌಧ ಬಳಿ ಸೋಲಾರ್ ಸಿಗ್ನಲ್ ದೀಪಗಳನ್ನು ಹಾಕಲಾಗಿದೆ.
2010-11ನೇ ಸಾಲಿನ ಪಟ್ಟಣ ಪಂಚಾಯಿತಿ ಎಸ್‌ಎಫ್‌ಸಿ ಮುಕ್ತ ನಿಧಿ ಯೋಜನೆಯಡಿ ರೂ. 10 ಲಕ್ಷ ವೆಚ್ಚದಲ್ಲಿ ಈ ಸಿಗ್ನಲ್ ದೀಪಗಳನ್ನು ಅಳವಡಿಸಲಾಗಿದೆ. ಸುಗಮ ಸಂಚಾರಕ್ಕಾಗಿ ವಾಹನ ಸವಾರರಿಗೆ ಈ ಸಿಗ್ನಲ್ ದೀಪಗಳು ಮಾರ್ಗ ತೋರಿಸುತ್ತವೆ. ಅಲ್ಲದೆ ಹೊಂದಿಸಿದ ಸಮಯಕ್ಕೆ ತಕ್ಕಂತೆ ಸ್ವಯಂ ಚಾಲಿತವಾಗಿ ಕೆಲಸ ಮಾಡುತ್ತವೆ.
ಜನರಿಗೆ ಮಾಹಿತಿ: ಈ ಸೋಲಾರ್‌ಸಿಗ್ನಲ್ ದೀಪಗಳ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿ ನೀಡಬೇಕಾಗಿದೆ. ಜನರಿಗೆ ಇದರ ಬಗ್ಗೆ ಸಂಪೂರ್ಣ ಪರಿಜ್ಞಾನ ಇದ್ದಾಗ ಮಾತ್ರ ಅದರ ಉಪಯೋಗವಾಗುತ್ತದೆ. ಈ ನಿಟ್ಟಿನಲ್ಲಿ ಸಂಚಾರ ನಿಮಯದ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಪಿಎಸ್‌ಐ ಜಿ.ಎಸ್. ಬಿರಾದಾರ ತಿಳಿಸಿದ್ದಾರೆ.
ಸಿಗ್ನಲ್ ದೀಪ: ಬೀದರ್ ನಾಂದೇಡ್ ಹೆದ್ದಾರಿ ಕನ್ನಡಾಂಬೆ ವೃತ್ತದ ಬಳಿ ಸಿಗ್ನಲ್ ದೀಪ ಹಾಕಲಾಗಿದೆ. ಸದ್ಯ ಈ ದೀಪಗಳು ಚಾಲನೆಯಲ್ಲಿ ಇಲ್ಲ. ಸಂಚಾರ ದಟ್ಟಣೆ ನೋಡಿಕೊಂಡು ದೀಪಗಳು ಕೆಲಸ ಮಾಡಲಿವೆ. ಬಸ್ ನಿಲ್ದಾಣದ ಬಳಿ ವಾಹನ ದಟ್ಟಣೆ ಜಾಸ್ತಿ ಇದ್ದ ಕಾರಣ ಇಲ್ಲಿಯೂ ಸಿಗ್ನಲ್ ದೀಪ ಹಾಕಲು ಚಿಂತನೆ ನಡೆಸಿದ್ದಾರೆ.
ಪಟ್ಟಣದ ಮುಖ್ಯ ರಸ್ತೆಯ ಎರಡು ಬದಿ ಫುಟ್‌ಪಾತ್ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಮುಗಿದ ತಕ್ಷಣ ಅಲ್ಲಲ್ಲಿ ಸ್ಪೀಡ್ ಲಿಮಿಟ್, ನೋ ಪಾರ್ಕಿಂಗ್ ಸೇರಿದಂತೆ ಸಂಚಾರಿ ಸಂಕೇತಗಳ ಫ್ಲೆಕ್ಸ್ ಹಾಕಲು, ಬಸ್ ನಿಲ್ದಾಣ ಮತ್ತು ಸುತ್ತಲೂ ಖಾಸಗಿ ವಾಹನಗಳ ನಿಲುಗಡೆ ನಿಷೇಧ ಸೇರಿದಂತೆ ಪಟ್ಟಣದಲ್ಲಿ ಸಂಚಾರ ನಿಯಮ ಬಿಗಿಗೊಳಿಸಲು ಪೊಲೀಸರು ಮುಂದಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.