ADVERTISEMENT

ಕನ್ನಡಿಗನಿಗೆ ಕಿರುಕುಳ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2011, 10:10 IST
Last Updated 19 ಜೂನ್ 2011, 10:10 IST

ಔರಾದ್: ತಾಲ್ಲೂಕಿನ ಮರಾಠಿ ಭಾಷಿಕ ಪ್ರದೇಶದಲ್ಲಿ ಕನ್ನಡ ಶಾಲೆಗಳು ತೆರೆದು ಕನ್ನಡ ಕಟ್ಟುವ ಕೆಲಸದಲ್ಲಿ ತೊಡಗಿರುವ ಶಿಕ್ಷಕ ಶಂಕರ ರಾಠೋಡ ಅವರನ್ನು ಕೆಲ ಭಾಷಾ ವಿರೋಧಿಗಳು ಮಾನಸಿಕ ಕಿರುಕುಳ ನೀಡುತ್ತಿವೆ ಎಂದು ಆರೋಪಿಸಿ ಕೆಲ ಕನ್ನಡಪರ ಸಂಘಟನೆಗಳು ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದವು.

ಕರ್ನಾಟ ರಕ್ಷಣಾ ವೇದಿಕೆ ಅಧ್ಯಕ್ಷ ಶರಣಪ್ಪ ಪಾಟೀಲ, ಸಿದ್ದು ಪಾಟೀಲ, ರಮೇಶ ಮುಳೆ, ಮಲ್ಲಿಕಾರ್ಜುನ ರಾಗಾ ನೇತೃತ್ವದಲ್ಲಿ ತಹಸೀಲ್ದಾರ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಭೇಟಿ ಮಾಡಿ ಈ ಕುರಿತು ಮನವಿಪತ್ರ ಸಲ್ಲಿಸಿದರು.

ಶಂಕರ ರಾಠೋಡ ದಶಕಗಳಿಂದ ಗಡಿ ಭಾಗದಲ್ಲಿ ಕನ್ನಡ ಶಾಲೆ ತೆರೆದು ರಚನಾತ್ಮಕ ಕೆಲಸದಲ್ಲಿ ತೊಡಗಿದ್ದಾರೆ. ಇವರ ಕನ್ನಡ ಸೇವೆ ಪರಿಗಣಿಸಿ ಈಚೆಗೆ ಬೀದರ್‌ನಲ್ಲಿ ನಡೆದ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೌರವಿಸಲಾಗಿದೆ. ಇದನ್ನು ಸಹಿಸದ ಕೆಲ ಭಾಷಾ ದ್ವೇಷಿಗಳು ಇವರಿಗೆ ಮಾನಸಿಕ ಕಿರುಕುಳ ನೀಡಿ ಕನ್ನಡ ಕೆಲಸದಿಂದ ದೂರ ಇಡುವ ಹುನ್ನಾರ ನಡೆದಿದೆ ಎಂದು ವೇದಿಕೆ ಪ್ರಮುಖರು ದೂರಿದರು.

ಹುನ್ನಾರದ ಪ್ರಥಮ ಹಂತದಲ್ಲಿ ಇವರನ್ನು ಮರಾಠಿ ಭಾಷಿಕರು ಜಾಸ್ತಿ ಇರುವ ದಾಬಕಾ ಶಾಲೆಗೆ ವರ್ಗಾಯಿಸುವುದು. ನಂತರ ಅಲ್ಲಿಂದ ಬೆಳಗಾವಿ ವಿಭಾಗಕ್ಕೆ ವರ್ಗಾಯಿಸಿ ಗಡಿಯಲ್ಲಿ ಕನ್ನಡ ಕುಂಠಿತ ಮಾಡುವ ವ್ಯವಸ್ಥಿತ ಪಿತೂರಿ ನಡೆದಿದೆ. ಇಂಥ ಕನ್ನಡ ವಿರೋಧಿ ಕೆಲಸಕ್ಕೆ ಅಧಿಕಾರಿಗಳು ಕೈಜೋಡಿಸಿ ಶಂಕರ ರಾಠೋಡ ಅವರನ್ನು ವರ್ಗಾವಣೆ ಮಾಡಿದ್ದಾರೆ. ಸಭೆ ಸಮಾರಂಭಗಳಲ್ಲಿ ನಾನು ಕನ್ನಡ ಅಭಿಮಾನಿ ಎಂದು ಹೇಳಿಕೊಳ್ಳುವ ಶಾಸಕ ಪ್ರಭು ಚವ್ಹಾಣ ಒಳ ಒಳಗೆ ಕನ್ನಡ ವಿರೋಧಿ ಕೆಲಸಕ್ಕೆ ಸಹಕರಿಸುತ್ತಿದ್ದಾರೆ ಎಂದು ರಕ್ಷಣಾ ವೇದಿಕೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.