ADVERTISEMENT

ಕನ್ನಡ ಸಮ್ಮೇಳನಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 8:05 IST
Last Updated 1 ಜೂನ್ 2011, 8:05 IST

ಭಾಲ್ಕಿ: ತಾಲ್ಲೂಕು ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬರುವ ಜುಲೈ ಮೊದಲ ವಾರದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ, ಮಂಗಳವಾರ ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಲಾಯಿತು.

ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರನ್ನಾಗಿ ಶಾಸಕ ಈಶ್ವರ ಖಂಡ್ರೆ ಅವರನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಜಿಲ್ಲಾ ಉಸ್ತುವಾರಿ ಸಚಿವ ರೇವು ನಾಯಕ ಬೆಳಮಗಿ ಮತ್ತು ಪೋಷಕರಾಗಿ ಸಂಸದ ಧರ್ಮಸಿಂಗ್ ಅವರನ್ನು ಆರಿಸಲಾಯಿತು.

ಶಾಸಕ ಈಶ್ವರ ಖಂಡ್ರೆ ಮಾತನಾಡಿ, ಎಲ್ಲ ಸಂಘಟನೆ ಪ್ರಮುಖರು, ಸರ್ವ ಸಮುದಾಯಗಳ ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಒಗ್ಗಟ್ಟಾಗಿ ಶ್ರಮಿಸುವ ಮೂಲಕ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು.

ವೇದಿಕೆ,   ಮೆರವಣಿಗೆ, ಹಣಕಾಸು, ಪ್ರಸಾದ, ಅಲಂಕಾರ, ವಸತಿ ಮುಂತಾದ ಉಪ ಸಮಿತಿಗಳನ್ನು ರಚಿಸುವ ಮೂಲಕ ಕಾರ್ಯಗಳನ್ನು ಹಂಚಿಕೊಂಡು ವಾರದೊಳಗೆ ಮತ್ತೊಂದು ಸಭೆಯಲ್ಲಿ ಅಂತಿಮ ರೂಪರೇಷೆಗಳನ್ನು ಅಖೈರುಗೊಳಿಸೋಣವೆಂದು ತಿಳಿಸಿದರು. ಉದ್ಘಾಟನೆಗೆ ಸಾಹಿತಿಗಳು, ಲೇಖಕರೂ ಆಗಿರುವ ಕೇಂದ್ರದ ಕಾನೂನು ಸಚಿವ ಎಂ.ವೀರಪ್ಪ ಮೊಯಿಲಿ ಅವರನ್ನು ಕರೆಸಲಾಗುವದು ಎಂದು ಖಂಡ್ರೆ ತಿಳಿಸಿದರು.

ಇದಕ್ಕೂ ಮುನ್ನ ಸಮ್ಮೇಳನದ ಯಶಸ್ವಿಗಾಗಿ ವಿಜಯಕುಮಾರ ಪರ್ಮಾ, ಉಮಾಕಾಂತ ವಾರದ, ಸಂತೋಷ ಹಡಪದ, ಕಾಶಿನಾಥ ಚಲವಾ, ರಾಜಕುಮಾರ ಭಾತಂಬ್ರೆ, ಶಿವರಾಜ ಮಲ್ಲೇಶಿ, ವೈಜಿನಾಥ ಕುಂಟೆಸಿರ್ಸ್ಗಿ, ಶಿವಾನಂದ ಗುಂದಗಿ, ಮಾಳಸ್ಕಾಂತ ವಗ್ಗೆ, ಶಿವರಾಜ ಮೇತ್ರೆ, ಕಿರಣ ಖಂಡ್ರೆ ಸಲಹೆಗಳನ್ನು ನೀಡಿದರು.

ಕಸಾಪ ಅಧ್ಯಕ್ಷ ವೀರಶಟ್ಟಿ ಬಾವುಗೆ, ಪುರಸಭೆ ಅಧ್ಯಕ್ಷೆ ಜೈಶ್ರೀ ಮಾನಕರಿ, ಉಪಾಧ್ಯಕ್ಷ ಚಂದ್ರಕಾಂತ ಪಾಟೀಲ, ತಹಸೀಲ್ದಾರ ಸಿದ್ದಲಿಂಗಪ್ಪ, ಬಿಇಓ ಎಚ್. ಬಸಪ್ಪ, ಸಿಪಿಐ ಭಾಲಚಂದ್ರ ಬಿ.ಎಸ್. ಜೇಕರಕಲ್, ಪಿಎಸ್‌ಐ ಮಹಾದೇವ, ಅಪ್ಪಾಸಾಬ ದೇಶಮುಖ, ಎಲ್.ಜಿ. ಗುಪ್ತಾ, ಸೇರಿದಂತೆ ನೂರಾರು ಮುಖಂಡರುಗಳು ಪಾಲ್ಗೊಂಡಿದ್ದರು.                  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.