ADVERTISEMENT

ಕಬ್ಬಿಗೆ ಹನಿ ನೀರಾವರಿ ಬಳಕೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 5:39 IST
Last Updated 16 ಡಿಸೆಂಬರ್ 2013, 5:39 IST

ಔರಾದ್: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಕಬ್ಬಿಗೆ ಹನಿ ನೀರಾವರಿ ಅಳವಡಿಸಿಕೊಂಡರೆ ಶೇ 40 ರಷ್ಟು ನೀರು ಉಳಿತಾಯ ಮಾಡಬಹುದು ಎಂದು ಕೃಷಿ ಇಲಾಖೆ ತಾಂತ್ರಿಕ ವ್ಯವಸ್ಥಾಪಕ ಪಾಂಡುರಂಗ ಪಾಟೀಲ ಸಲಹೆ ನೀಡಿದ್ದಾರೆ.

ಕಬ್ಬು ಬೆಳೆಯುವ ರೈತರಿಗೆ ಕೆಲ ಮಾಹಿತಿ ನೀಡಿದ ಅವರು, ಕಬ್ಬಿಗೆ ಹನಿ ನೀರಾವರಿ ಅಳವಡಿಸಿಕೊಳ್ಳುವ ರೈತರಿಗೆ ಸರ್ಕಾರದ ಪ್ರೋತ್ಸಾಹ ಸಿಗಲಿದೆ. ಸಾಮಾನ್ಯ ವರ್ಗದ ರೈತರಿಗೆ ಶೇ 75 ಮತ್ತು ಪರಿಶಿಷ್ಟ ಜಾತಿ ಪಂಗಡದ ರೈತರಿಗೆ ಶೇ 90ರಷ್ಟು ರಿಯಾಯ್ತಿ ದೊರೆಯಲಿದೆ ಎಂದು ಹೇಳಿದರು.

ಹವಾಗುಣ ಆಧರಿಸಿ ಕಬ್ಬಿಗೆ ನೀರುಣಿಸಬೇಕು. ಮೊಳಕೆ ಒಡೆ­ಯುವಾಗ 8ರಿಂದ 35 ದಿನಗಳ ವರೆಗೆ ಏಳು ದಿನಕ್ಕೊಮ್ಮೆ, ಮರಿ ಒಡೆ­ಯು­ವಾಗ 36ರಿಂದ 100 ದಿನಗಳ ವರೆಗೆ 10 ದಿನಕೊಮ್ಮೆ ನೀರು ಕೊಡಬೇಕು.

ಬೆಳವಣಿಗೆ ಹಂತದಲ್ಲಿ ಅಂದರೆ 101ರಿಂದ 270 ದಿನಗಳ ವರೆಗೆ ಏಳು ದಿನಕ್ಕೊಮ್ಮೆ ನೀರು ಹಾಯಿಸಬೇಕು. ಕೊನೆಯ ಹಂತದಲ್ಲಿ (ಮಾಗುವಾಗ) 271ರಿಂದ 365 ದಿನಗಳ ವರೆಗೆ 15 ದಿನಕ್ಕೊಮ್ಮೆ ನೀರು ಬಿಡುವಂತೆ  ಸಲಹೆ ನೀಡಿದರು.

ನೀರಿನ ಸಂಗ್ರಹ ಕಡಿಮೆ ಇದ್ದಲ್ಲಿ ಸಾಲು ಬಿಟ್ಟು ನೀರು ಹಾಯಿಸುವುದ­ರಿಂದ ನೀರಿನ ಉಳಿ­ತಾಯ­ವಾಗುತ್ತದೆ. ಬೇಸಿಗೆ ವೇಳೆ ಸಾಲು ಬಿಟ್ಟು ಸಾಲಿನಲ್ಲಿ ರವದಿ (ವಾಡಿ) ಹಾಕಬೇಕು.

ಖಾಲಿ ಸಾಲು­ಗಳಲ್ಲಿ ನೀರು ಹಾಯಿಸಬೇಕು. ಕೊನೆಯ ನೀರು ಕೊಡುವಾಗ ಎಕರೆಗೆ 20 ಕೆಜಿ ಎಂಒಪಿ ಗೊಬ್ಬರ ಕೊಟ್ಟು ಎಲ್ಲ ಸಾಲುಗಳಿಗೆ ವಾಡಿ ಹೊದಿಸಬೇಕು. ಶೇ. 2.5 ಯುರಿಯಾ ಅಥವಾ ಶೇ. 2.5 ಎಂಒಪಿ ದ್ರಾವಣ ಪ್ರತಿ 15–20 ದಿನಕ್ಕೊಮ್ಮೆ ಎಲೆಗಳ ಮೇಲೆ ಸಿಂಪರಣೆ ಮಾಡುವಂತೆ ತಿಳಿಸಿದ್ದಾರೆ.

ರೈತರು ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಸೂಕ್ತ ಮಾಹಿತಿ ಪಡೆದುಕೊಂಡು ತಾಂತ್ರಿಕತೆ ಅಳವಡಿಸಿ­ಕೊಂಡರೆ  ಎಕರೆಗೆ 50 ಟನ್‌ ಕಬ್ಬು ಬೆಳೆಯಬಹುದು ಎಂದು ಪಾಂಡುರಂಗ ಪಾಟೀಲ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.