ADVERTISEMENT

ಕಬ್ಬು: ಗಮನ ಸೆಳೆದ ಮೂರು ಕಣ್ಣು, 14 ತಳಿ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2012, 10:37 IST
Last Updated 30 ಡಿಸೆಂಬರ್ 2012, 10:37 IST
ಶನಿವಾರ ಆರಂಭಗೊಂಡ ಕೃಷಿ ಮೇಳದಲ್ಲಿ ರೈತರು ಕಬ್ಬಿನ ವಿವಿಧ ತಳಿಗಳ ಬಗೆಗೆ ಮಾಹಿತಿ ಪಡೆದರು
ಶನಿವಾರ ಆರಂಭಗೊಂಡ ಕೃಷಿ ಮೇಳದಲ್ಲಿ ರೈತರು ಕಬ್ಬಿನ ವಿವಿಧ ತಳಿಗಳ ಬಗೆಗೆ ಮಾಹಿತಿ ಪಡೆದರು   

ಜನವಾಡ: ಮೂರು ಕಣ್ಣಿನ ತಳಿ ಸೇರಿದಂತೆ ಕಬ್ಬಿನ ವಿವಿಧ 14 ತಳಿಗಳು ಬೀದರ್ ತಾಲ್ಲೂಕಿನ ಜನವಾಡ ಕೃಷಿ ವಿಜ್ಞಾನ ಕೇಂದ್ರದ ಪರಿಸರದಲ್ಲಿ ಶನಿವಾರ ಆರಂಭಗೊಂಡ ಕೃಷಿ, ತೋಟಗಾರಿಕೆ ಹಾಗೂ ಜಾನುವಾರು ಮೇಳದಲ್ಲಿ ರೈತರನ್ನು ಆಕರ್ಷಿಸುತ್ತಿವೆ.

ತಾಲ್ಲೂಕಿನ ಬದಗಲ್ ದರ್ಗಾದ ಮುಖ್ಯಸ್ಥ, ಪ್ರಗತಿಪರ ರೈತ ಅಲ್‌ಹಾಜ್ ಷಾಹ ಖಲೀಫಾ ಮಹಮ್ಮದ್ ಇದ್ರೀಸ್ ಮಹಮ್ಮದ್ ಖಾದ್ರಿ ಅವರು ತಮ್ಮ ಹೊಲದಲ್ಲಿ ಬೆಳೆದ ವಿವಿಧ ತಳಿಯ ಕಬ್ಬುಗಳನ್ನು ಪ್ರದರ್ಶನಕ್ಕೆ ಇರಿಸಿದ್ದಾರೆ.

ಸಿಒ 2001-13, ಸಿಒ 2001-15, 93ವಿ297, ಸಿಒವಿಐ 9805, ಸಿಒ 94012 ಮತ್ತಿತರ ತಳಿಯ ಕಬ್ಬುಗಳು ಪ್ರದರ್ಶನದಲ್ಲಿ ಇವೆ.
ಆಧುನಿಕ ಕೃಷಿ ಅಳವಡಿಸಿಕೊಂಡು ಹೊಸ ತಳಿಯ ಮೂಲಕ ಸಮೃದ್ಧ ಕಬ್ಬು ಇಳುವರಿ ಪಡೆದಿದ್ದಾಗಿ ತಿಳಿಸುತ್ತಾರೆ ಖಾದ್ರಿ ಅವರು. ತಮ್ಮ ಜಮೀನಿನಲ್ಲಿ ಎಕರೆಗೆ 118 ಟನ್ ವರೆಗೂ ಕಬ್ಬು ಇಳುವರಿ ಬಂದಿದೆ ಎನ್ನುತ್ತಾರೆ.

ತಾವು ಸಂಕೇಶ್ವರ, ತುಮಕೂರು, ಕೊಯಿಮುತ್ತೂರು, ಮಹಾರಾಷ್ಟ್ರದಿಂದ ಕಬ್ಬಿನ ಬೀಜ ತರಿಸಿದ್ದಾಗಿ ಹೇಳುತ್ತಾರೆ. ಮೂರು ಕಣ್ಣಿನ ಕಬ್ಬು ತಳಿ ಬಾಗಲಕೋಟೆ ಜಿಲ್ಲೆಯಿಂದ ತರಿಸಲಾಗಿದೆ ಎಂದು ತಿಳಿಸುತ್ತಾರೆ.

ಮೇಳದಲ್ಲಿ ರೈತರು ವಿವಿಧ ತಳಿಯ ಕಬ್ಬಿನ ಕುರಿತು ಮಾಹಿತಿ ಪಡೆದರು. ಖಾದ್ರಿ ಅವರ ಮಳಿಗೆಯಲ್ಲಿ ಇದ್ದ ಶ್ರೀಲಂಕಾ ತಳಿ ಗೋಧಿ, ಇಂಗ್ಲೆಂಡ್ ತಳಿ ಮೆಕ್ಕೆಜೋಳ ಕೂಡ ರೈತರನ್ನು  ಸೆಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.