ADVERTISEMENT

ಕರ್ತವ್ಯ `ಮುಕ್ತಿ' ಕೋರಿ 575 ಅರ್ಜಿ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2013, 10:35 IST
Last Updated 20 ಏಪ್ರಿಲ್ 2013, 10:35 IST

ಬೀದರ್: ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಸರ್ಕಾರಿ ನೌಕರರ ಪೈಕಿ ಈ ಸೇವೆಯಿಂದ ವಿನಾಯಿತಿ ಕೋರಿ ಒಟ್ಟು 575 ನೌಕರರು ಅರ್ಜಿ ಸಲ್ಲಿಸಿದ್ದು, ಅವುಗಳ ಪರಿಶೀಲನೆಯಲ್ಲಿ ಮೂವರು ನೌಕರರು ಸುಳ್ಳು ಮಾಹಿತಿ ನೀಡಿರುವುದು ಬೆಳಕಿಗೆ ಬಂದಿದೆ. ಜಿಲ್ಲಾಡಳಿತ ಈ ಮೂವರು ಸಿಬ್ಬಂದಿಗೆ ನೋಟಿಸ್ ನೀಡಿದೆ.

ಅಧಿಕ ಸಂಖ್ಯೆಯಲ್ಲಿ ಅರ್ಜಿಗಳು ಬಂದ ಹಿನ್ನೆಲೆಯಲ್ಲಿ ಅನಾರೋಗ್ಯ ಸೇರಿದಂತೆ ನೌಕರರು ನೀಡಿರುವ ವಿವಿಧ ಕಾರಣಗಳ ಪರಿಶೀಲನೆಗೆ ವೈದ್ಯರೂ ಇರುವಂತೆ ವಿಶೇಷ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯೂ ಶುಕ್ರವಾರ ಅರ್ಜಿಗಳ ಪರಿಶೀಲನೆ ನಡೆಸಿತು.

`ಮೂವರು ನೌಕರರು ಸುಳ್ಳು ಮಾಹಿತಿ ನೀಡಿದ್ದು ಪರಿಶೀಲನೆಯಲ್ಲಿ ತಿಳಿದುಬಂದಿತು. ಕಾರಣ ಕೇಳಿ ಅವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ.  ಉತ್ತರ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು' ಎಂದು ನೋಡಲ್ ಅಧಿಕಾರಿ ಗೌತಮ್ ಅರಳಿ ತಿಳಿಸಿದರು.

ಹೀಗೆ ನೋಟಿಸ್ ಪಡೆದವರಲ್ಲಿ ಒಬ್ಬರು ಮಹಿಳೆ `ನನಗೆ ಪುಟ್ಟ ಮಗು ಇದೆ' ಎಂದು ತಿಳಿಸಿದ್ದರು. ಇನ್ನೊಬ್ಬರು ಆನಾರೋಗ್ಯವಿದೆ ಎಂದು ಸುಳ್ಳು ಹೇಳಿದ್ದರು. ಮತ್ತೊಬ್ಬರು ನನಗೆ ಚುನಾವಣಾ ಕರ್ತವ್ಯದಲ್ಲಿ ಆಸಕ್ತಿ ಇಲ್ಲ ಎಂದು ನೇರವಾಗಿ ತಿಳಿಸಿ ಕರ್ತವ್ಯದಿಂದ ವಿನಾಯಿತಿಯನ್ನು ಕೋರಿದ್ದರು.

`ಹೆಚ್ಚಿನ ನೌಕರರು ಅನಾರೋಗ್ಯ ಕಾರಣ ನೀಡಿ ಚುನಾವಣಾ ಕರ್ತವ್ಯ ರದ್ದುಪಡಿಸಲು ಅರ್ಜಿ ಸಲ್ಲಿಸಿದ್ದಾರೆ. ವೈದ್ಯರ ತಂಡದ ಮೂಲಕ ಅವರ ಪ್ರಸ್ತುತ ಆರೋಗ್ಯ ಸ್ಥಿತಿ ಹಾಗೂ ವೈದ್ಯಕೀಯ ಪ್ರಮಾಣ ಪತ್ರಗಳ ಬಗೆಗೆ ಪರಿಶೀಲನೆ ನಡೆಸಲಾಗುತ್ತಿದೆ' ಎಂದು ಅರಳಿ ಹೇಳಿದರು.

ರಜೆ ಕೋರಿರುವ ನೌಕರರ ಅರ್ಜಿಗಳ ವಿಚಾರಣೆಯನ್ನು ಇಡೀ ದಿನ ನಡೆಸಲಾಯಿತು. ವೈದ್ಯಕೀಯ ಕಾರಣ ನೀಡಿರುವ ನೌಕರರ ವೈದ್ಯಕೀಯ ಪ್ರಮಾಣ ಪತ್ರಗಳನ್ನು ಪರಿಶೀಲಿಸಲಾಯಿತು. ಅಲ್ಲದೆ, ಸದ್ಯದ ಆರೋಗ್ಯ ಸ್ಥಿತಿ ಅರಿಯಲು ವೈದ್ಯರ ತಂಡದಿಂದ ಸ್ಥಳದಲ್ಲೇ ತಪಾಸಣೆ ನಡೆಸಲಾಯಿತು ಎಂದರು.

ವಿಚಾರಣಾ ತಂಡದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ವೈಜಿನಾಥ ಮದನಾ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಕಾಶಿನಾಥ ಕಾಂಬಳೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಚ್.ಆರ್. ಬಸಪ್ಪ, ಡಾ. ಸವಿತಾ, ಡಾ. ಗೌರಿಶಂಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.