ADVERTISEMENT

ಕುಟುಂಬದ ಸೌಖ್ಯಕ್ಕೆ ವಿಮೆ ಮಾಡಿಸಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2012, 6:15 IST
Last Updated 7 ಮಾರ್ಚ್ 2012, 6:15 IST

ಬಸವಕಲ್ಯಾಣ: ಕುಟುಂಬದ ಸೌಖ್ಯಕ್ಕಾಗಿ ವಿಮೆ ಮಾಡಿಸುವುದು ಅತ್ಯವಶ್ಯಕವಾಗಿದೆ ಎಂದು ಭಾರತೀಯ ಜೀವವಿಮಾ ನಿಗಮದ ಶಾಖೆಯ ವ್ಯವಸ್ಥಾಪಕ ಕೆ.ಪಿ.ಪಂಡಿತ ಹೇಳಿದರು.

ಇಲ್ಲಿನ ತ್ರಿಪುರಾಂತದಲ್ಲಿ ಈಚೆಗೆ ಹಮ್ಮಿಕೊಂಡ ಗ್ರಾಹಕರ ಸಭೆ ಮತ್ತು ಸಾಧಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಮಕ್ಕಳ ವಿದ್ಯಾಭ್ಯಾಸಕ್ಕೆ, ವ್ಯಾಪಾರ ವೃದ್ಧಿಗೆ, ಮದುವೆಗೆ ಹೀಗೆ ಪ್ರತಿಯೊಂದು ಕಾರ್ಯಕ್ಕೆ ವಿಮೆಯ ಹಣ ಉಪಯೋಗಕ್ಕೆ ಬರುತ್ತದೆ. ಹಣ ಗಳಿಸುವುದಕ್ಕಿಂತ ಉಳಿಸುವುದು ಮುಖ್ಯವಾಗಿದ್ದು ಜೀವವಿಮಾ ನಿಗಮದ ಪಾಲಿಸಿದಾರರಾಗಿ ಹಣ ಕೂಡಿಡಬಹುದು.

ಜೀವನದಲ್ಲಿ ಎದುರಾಗುವ ಸಂಕಟದ ಕ್ಷಣಗಳಿಗೆ ಮುಂಚೆಯೇ ವ್ಯವಸ್ಥೆ ಮಾಡಬೇಕು. ಪಾಲಿಸಿಗಳ ಮೇಲೆ ಸರಳ ಬಡ್ಡಿ ದರದಲ್ಲಿ ಸಾಲ ಸಹ ಪಡೆಯಬಹುದು ಎಂದು ತಿಳಿಸಿದರು.

ಉತ್ತಮ ಸಾಧನೆ ಮಾಡಿದ ಏಜೆಂಟ್‌ರಾದ ಚಿತ್ರಶೇಖರ ಸೋನಾರ ಇವರಿಗೆ ಚೆರಮೆನ್ ಕ್ಲಬ್ ಸದಸ್ಯರನ್ನಾಗಿ ನೇಮಿಸಿ ಈ ಸಂದರ್ಭದಲ್ಲಿ ಸತ್ಕರಿಸಲಾಯಿತು.

ಉಪ ವ್ಯವಸ್ಥಾಪಕ ರವಿಕುಮಾರ ಮಾತನಾಡಿ 1956 ರಲ್ಲಿ ಜೀವ ವಿಮಾ ಕಂಪೆನಿ ಕೇವಲ 5 ಕೋಟಿ ಬಂಡವಾಳದೊಂದಿಗೆ ಆರಂಭವಾಗಿ ಇಂದು 14 ಲಕ್ಷ ಕೋಟಿ ವ್ಯವಹಾರ ನಡೆಸುತ್ತಿದೆ. ರಾಷ್ಟ್ರದಲ್ಲಿ ದೊಡ್ಡ ಮತ್ತು ವಿಶ್ವಾಸಪಾತ್ರ ವಿಮಾ ಕಂಪೆನಿಯಾಗಿದೆ ಎಂದರು.

ಅಭಿವೃದ್ಧಿ ಅಧಿಕಾರಿ ಕೆ.ಎನ್.ಮಡೋಳಿ ಮಾತನಾಡಿದರು. ಪ್ರಮುಖರಾದ ಗೋವಿಂದ ಚಾಮಲ್ಲೆ, ಅಹ್ಮದಸಾಬ್, ಬಾಬುರಾವ ಪಾಟೀಲ, ಹಣಮಂತಪ್ಪ ಇರಲೆ, ಭಾರತ ಬೊಕ್ಕೆ, ಬಸವರಾಜ ಉಪಸ್ಥಿತರಿದ್ದರು. ವಾಲ್ಮೀಕಿ ಖನಕೋರೆ ನಿರೂಪಿಸಿದರು. ರಾಜಕುಮಾರ ಇರಲೆ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.