ADVERTISEMENT

ಕೃಷಿ ವಿವಿಗಳು ಕಂಪೆನಿಯ ಕೈಗೊಂಬೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2012, 6:45 IST
Last Updated 9 ಫೆಬ್ರುವರಿ 2012, 6:45 IST

ರಾಯಚೂರು: ಹಲವು ಶತಮಾನಗಳಿಂದ ರೈತರು ಉಳಿಸಿಕೊಂಡು ಬಂದಿರುವ ಮತ್ತು ಈ ದೇಶದ್ದೇ ಆದ ಸಾಂಪ್ರದಾಯಿಕ ಬೀಜಗಳ ಸರ್ವನಾಶ ಮಾಡುವುದೇ ಬಹುರಾಷ್ಟ್ರೀಯ ಬೀಜೋತ್ಪಾದನೆ ಕಂಪೆನಿಗಳ ಹುನ್ನಾರ. ಕೃಷಿ ವಿಶ್ವವಿದ್ಯಾಲಯಗಳು ಈ ಕಂಪೆನಿಗಳ ಕೈಗೊಂಬೆಗಳಾಗಿ ನಡೆದುಕೊಳ್ಳುತ್ತಿದ್ದರೆ ಮತ್ತೊಂದೆಡೆ ಸರ್ಕಾರಗಳ ಮೇಲೆ ಕಂಪೆನಿಗಳ ಭಾರಿ ಒತ್ತಡವಿದೆ.

ಇಂಥ ಹುನ್ನಾರದ ವಿರುದ್ಧ ರಾಜ್ಯವ್ಯಾಪಿ ಕುಲಾಂತರಿ ವಿರೋಧಿ ಜನಜಾಗೃತಿ ಜಾಥಾ ಆಯೋಜಿಸಲಾಗಿದೆ ಎಂದು ಕರ್ನಾಟಕ ಕುಲಾಂತರಿ ವಿರೋಧಿ ಆಂದೋಲನ-ಸೇಜ್(ಸೌಥ್ ಅಗೇನಸ್ಟ್ ಜೆನಿಟಿಕ್ ಎಂಜಿನಿಯರಿಂಗ್) ಕರ್ನಾಟಕ ಘಟಕದ ಜಾಥಾ ಸಂಚಾಲಕಿ ವಿ.ಗಾಯತ್ರಿ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಂಪ್ರದಾಯಿಕ ಬೀಜಗಳ ಪ್ರದರ್ಶನ, ಬೀಜದ ಮಹತ್ವ ಸಾರುವ ಮತ್ತು ಮಾಹಿತಿಯುಳ್ಳ ಭಿತ್ತಿ ಚಿತ್ರ ಪ್ರದರ್ಶನ, ಬೀಜ ಗೀತೆ ಗಾಯನ, ಬೀಜ ಮಸೂದೆ, ಬಿ.ಆರ್.ಎ.ಐ. ಮಸೂದೆಗಳು, ಕೃಷಿಯ ಮೇಲೆ ಬಹುರಾಷ್ಟ್ರೀಯ ಬೀಜ ಕಂಪೆನಿಗಳ ದುರಾಕ್ರಮಣ, ಬಿಟಿ ಹತ್ತಿ ಮತ್ತು ಕುಲಾಂತರಿ ಬೆಳೆಗಳ ಕುರಿತು ಚರ್ಚೆ,  ರೈತರೊಂದಿಗೆ ಸಂವಾದ, ನಾಟಿ ಬೀಜ ಸಂಗ್ರಹಕಾರರ ಅನುಭವಿ ವಿಚಾರ ವಿನಿಮಯ ಸೇರಿದಂತೆ ಅಂಶಗಳನ್ನು ಜಾಥಾ ಹೊಂದಿದೆ ಎಂದು ಹೇಳಿದರು.

ಈಗಾಗಲೇ ತುಮಕೂರು ವಲಯದಲ್ಲಿ ಇಂಥ ಜಾಥಾ ಪೂರ್ಣಗೊಂಡಿದೆ. ಈಗ ರಾಯಚೂರು, ಕೊಪ್ಪಳ, ಬಳ್ಳಾರಿ, ದಾವಣಗೆರೆ ವಲಯದ ಬೀಜ ಜಾಥಾವನ್ನು ಆರಂಭಿಸಲಾಗುತ್ತಿದೆ.  ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಘಟಕಗಳು, ಸಾವಯವ ಕೃಷಿ ಮಿಷನ್, ಎಐಸಿಸಿಟಿಯು ಸೇರಿದಂತೆ ಹಲವಾರು ಸಂಘಟನೆಗಳ ಸಹಯೋಗದಲ್ಲಿ ಜಾಥಾ 8 ದಿನಗಳ ಕಾಲ `ಜೀಪ್~ನೊಂದಿಗೆ ಜಾಥಾ ನಡೆಯಲಿದೆ ಎಂದು ವಿವರಿಸಿದರು.

8ರಂದು ರಾಯಚೂರು, ಮಾನ್ವಿ, ಲಿಂಗಸುಗೂರು ತಾಲ್ಲೂಕಿನ 15 ಗ್ರಾಮಗಳಲ್ಲಿ, 9ರಂದು ಲಿಂಗಸುಗೂರು, ಸಿಂಧನೂರು ತಾಲ್ಲೂಕಿನ 15 ಗ್ರಾಮ, 10ರಂದು ನವಲಿ, ಗಂಗಾವತಿ, ಕುಷ್ಟಗಿ ತಾಲ್ಲೂಕಿನ 15 ಗ್ರಾಮ, 11ರಂದು ಕುಷ್ಟಗಿ, ಯಲ್ಬುರ್ಗಾ, ಕೊಪ್ಪಳ ತಾಲ್ಲೂಕಿನ 15 ಗ್ರಾಮಗಳಲ್ಲಿ ಜಾಥಾ ಸಂಚರಿಸಲಿದೆ. 12ರಂದು ಕೊಪ್ಪಳದಲ್ಲಿ ಒಂದು ದಿನ ಸಮಾವೇಶ ನಡೆಯುವುದು. ನಂತರ ಹೊಸಪೇಟೆ, ಹಗರಿಬೊಮ್ಮನಹಳ್ಳಿ, 13ರಂದು  ಹೂವಿನಹಡಗಲಿ, ದಾವಣಗೆರೆ ಜಿಲ್ಲೆ ಹರಪನಹಳ್ಳಿ, ಕೂಡ್ಲಗಿ ತಾಲ್ಲೂಕು ಕೊಟ್ಟೂರಿಗೆ ಭೇಟಿ ನೀಡುವುದು. 14ರಂದು ದಾವಣಗೆರೆ ಜಿಲ್ಲೆ ಜಗಳೂರು, ಬಳ್ಳಾರಿ ಜಿಲ್ಲೆಯ ಸಂಡೂರು, ಕೂಡ್ಲಗಿಯಲ್ಲಿ ಸಂಚರಿಸುವುದು. 15ರಂದು ಕೂಡ್ಲಗಿಯಲ್ಲಿ ಸಮಾವೇಶ ನಡೆಸಲಾಗುತ್ತಿದೆ. ಬೆಳಗಾವಿ ವಲಯದಲ್ಲಿ ಇಂಥದ್ದೇ ಸಮಾವೇಶ ನಡೆಯಲಿದೆ. ಏಪ್ರಿಲ್‌ನಲ್ಲಿ ಬೆಂಗಳೂರಲ್ಲಿ ಬೃಹತ್ ಸಮಾವೇಶ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕುಲಾಂತರಿ ಬೀಜ ಸಾಕಷ್ಟು ಆವಾಂತರ ಸೃಷ್ಟಿ ಮಾಡಿದೆ. ಕುಲಾಂತರಿ ಹತ್ತಿ ಬೀಜಿ ಬಿತ್ತಿ ಬೆಳೆದ ರೈತರು ಕಂಗಾಲಾಗಿದ್ದಾರೆ. ಸರ್ಕಾರ ಬೀಜೋತ್ಪಾದನೆ ನಿಲ್ಲಿಸಿ ರೈತರನ್ನು ಬಿ.ಟಿ ಕಂಪೆನಿಗಳ ಬಾಗಿಲಿಗೆ ನಿಲ್ಲಿಸಿದೆ. ರೈತರು ಕೆಜಿಗೆ 2500 ರೂಪಾಯಿ ಕೊಟ್ಟು ಖರೀದಿಸಬೇಕಾಗಿದೆ. ಕೇವಲ ಹತ್ತಿ ಬೆಳೆಗೆ ಮಾತ್ರವಲ್ಲಿ ಸುಮಾರು 58 ಬೆಳೆಗಳಿಗೆ ಸಂಬಂಧಿಸಿದಂತೆ ಕುಲಾಂತರಿ ಬೀಜ ಉತ್ಪಾದನೆ ಮಾಡಿ ರೈತರ ಬಳಿ ಇರುವ ಮತ್ತು ಸಾಂಪ್ರದಾಯಿಕ ಬೀಜ ಉತ್ಪಾದನೆ ಸಂಸ್ಕೃತಿಯನ್ನೇ ಹಾಳು ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.

ಕುಲಾಂತರಿ ಬೀಜದಿಂದ ಕೃಷಿಗೆ ಮಾತ್ರ ಹಾನಿ ಅಲ್ಲ. ಜನ, ಜಾನುವಾರು, ಪರಿಸರಕ್ಕೆ ಉಳಿಗಾಲವಿಲ್ಲ. ಈ ಕುಲಾಂತರಿ ಬೀಜ ಉತ್ಪಾದನೆ ತಡೆಯುವುದು, ನಮ್ಮ ರಾಜ್ಯದ ಕೃಷಿ ಪರಂಪರೆ, ಬೀಜ ಶ್ರೀಮಂತಿಕೆ ಬೇರನ್ನು ಗಟ್ಟಿಗೊಳಿಸುವ ಕೆಲಸ ನಡೆಯಬೇಕಾಗಿದೆ. ಜಾಥಾ ಭೇಟಿ ನೀಡುವ ಗ್ರಾಮದಲ್ಲಿ ಗ್ರಾಪಂನಿಂದ ಕುಲಾಂತರಿ ಬೀಜ ವಿರೋಧಿಸುವ ಮತ್ತು ಬಳಸದೇ ಇರುವಂಥ ನಿರ್ಣಯವನ್ನೇ ಮಾಡಲು ಮನವಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಹಿಂದಿನಂತೆ ಸರ್ಕಾರವೇ ಸಾಂಪ್ರದಾಯಿಕ ಪದ್ಧತಿಯಡಿ ಬೀಜೋತ್ಪಾದನೆ ಮಾಡಿ ರೈತರಿಗೆ ಬೀಜ ದೊರಕಿಸಬೇಕು, ಕೃಷಿ ಮತ್ತು ಆಹಾರದಲ್ಲಿ ಕುಲಾಂತರಿ ತಂತ್ರಜ್ಞಾನ ನಿಷೇಧಿಸಬೇಕು, ಕರ್ನಾಟಕವನ್ನು ಕುಲಾಂತರಿ ಮುಕ್ತ ರಾಜ್ಯ ಎಂದು ಘೋಷಣೆ ಮಾಡಬೇಕು, ರೈತರ ಬೀಜ ನಾಶ ಮಾಡುವ ಬಿಆರ್‌ಎಐ ಮಸೂದೆ, ಬೀಜ ಮಸೂದೆ-2010ನ್ನು ಶಾಶ್ವತವಾಗಿ ಕೈ ಬಿಡಬೇಕು, ಬೀಜ ತಳಿಗಳ ಮೇಲೆ ರೈತರ, ಸಮುದಾಯದ ಹಕ್ಕನ್ನು ಎತ್ತಿ ಹಿಡಿಯಬೇಕು, ಬಹುರಾಷ್ಟ್ರೀಯ ಕಂಪೆನಿಗಳ ದುರಾಕ್ರಮಣದಿಂದ ಮುಕ್ತಗೊಳಿಸಬೇಕು, ಸ್ಥಳೀಯ ಬೀಜಗಳ ಮೇಲೆ ಸ್ಥಳೀಯವಾಗಿಯೇ ಕೆಲಸ ಮಾಡುವುದು ಆದ್ಯತೆ ಆಗಬೇಕು ಎಂಬುದು ತಮ್ಮ ಪ್ರಮುಖ ಬೇಡಿಕೆಗಳಾಗಿವೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ನೆರವಿ ಪಂಪಣ್ಣ, ಜಗದೀಶಯ್ಯಸ್ವಾಮಿ, ಲಿಂಗಯ್ಯಸ್ವಾಮಿ ಕಲ್ಲೂರು, ಡಿ.ಪಂಪಣ್ಣ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.